ಕನ್ನಡಪ್ರಭ ವಾರ್ತೆ ಸಾಗರ
ಸಭೆಯಲ್ಲಿ ಬಿಜೆಪಿ ಸದಸ್ಯೆ ಮಧುರಾ ಶಿವಾನಂದ್, ಕಳೆದ ಮೂವತ್ತು, ನಲವತ್ತು ವರ್ಷಗಳಿಂದ ಬಿ.ಎಚ್. ರಸ್ತೆಯಲ್ಲಿರುವ ಮಟನ್ ಸ್ಟಾಲ್‌ನಿಂದ ನಗರಸಭೆ ಆದಾಯ ಸಂಗ್ರಹ ಮಾಡುತ್ತಿದೆ. ಸಾರ್ವಜನಿಕರು ಈ ಜಾಗವನ್ನು ನಗರಸಭೆ ಜಾಗ ಎಂದೇ ಗುರುತಿಸಿಕೊಂಡು ಬಂದಿದ್ದಾರೆ. ಆದರೆ, ಕೆಲವರು ಈ ಜಾಗ ತಮ್ಮದು ಎಂದು ನ್ಯಾಯಾಲಯಕ್ಕೆ ಹೋಗಿದ್ದಾರೆ. ಈಗ ಏಕಾಏಕಿ ಮಟನ್ ಸ್ಟಾಲ್ ತೆರವುಗೊಳಿಸಲಾಗಿದೆ. ನಗರಸಭೆ ಜಾಗ ಎಂದು ನ್ಯಾಯಾಲಯಕ್ಕೆ ಸಮರ್ಥ ದಾಖಲೆ ನೀಡುವಲ್ಲಿ ನಗರಸಭೆ ವಿಫಲವಾದಂತೆ ಕಾಣುತ್ತಿದೆ ಎಂದು ಆರೋಪಿಸಿದರು.
ಮಧುರಾ ಶಿವಾನಂದ್ ಮಾತನಾಡುತ್ತಿದ್ದಂತೆಯೇ ಮಧ್ಯ ಪ್ರವೇಶಿಸಿದ ಕಾಂಗ್ರೆಸ್ ಸದಸ್ಯೆ ಎನ್.ಲಲಿತಮ್ಮ, ಇದು ವಿಶೇಷ ಸಾಮಾನ್ಯ ಸಭೆ. ಅಜೆಂಡಾದಲ್ಲಿ ಇಲ್ಲದ ವಿಷಯ ಪ್ರಸ್ತಾಪ ಮಾಡಲಾಗುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಆಗ ಟಿ.ಡಿ.ಮೇಘರಾಜ್ ಆಕ್ರೋಶ ವ್ಯಕ್ತಪಡಿಸಿ, ಕಾಂಗ್ರೆಸ್ ಸದಸ್ಯರು ದಬ್ಬಾಳಿಕೆ ಮೂಲಕ ನಮ್ಮ ಮಾತನಾಡುವ ಹಕ್ಕನ್ನು ಕಿತ್ತುಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾರೆಂದು ಆರೋಪಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಬಿಜೆಪಿ ಸದಸ್ಯರು ಬಾವಿಗಿಳಿದು ಧರಣಿ ನಡೆಸಿದರು. ಆಗ ಶಾಸಕ ಬೇಳೂರು ಮತ್ತು ಪೌರಾಯುಕ್ತ ಎಚ್.ಕೆ.ನಾಗಪ್ಪ ಮಧ್ಯ ಪ್ರವೇಶ ಮಾಡಿ, ಮನವೊಲಿಸಿ ಧರಣಿ ಹಿಂದಕ್ಕೆ ಪಡೆಯುವಂತೆ ಮಾಡುವಲ್ಲಿ ಯಶಸ್ವಿಯಾದರು.ಸಭೆಯಲ್ಲಿ ಟ್ಯಾಗೋರ್ ಕಲ್ಚರಲ್ ಕಾಂಪ್ಲೆಕ್ಸ್ ನಿರ್ಮಾಣ ಕುರಿತು ನಡೆದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಶಾಸಕರು, ರಂಗಮಂದಿರ ನಿರ್ಮಾಣ ಅತ್ಯಂತ ಅಗತ್ಯವಾಗಿದೆ. ಈಗಾಗಲೇ ಕೇಂದ್ರ ಸರ್ಕಾರದ ಅನುದಾನ ಇದೆ. ನಗರಸಭೆ ಎಸ್.ಎಫ್.ಸಿ. ಅನುದಾನ ಬಳಕೆ ಮಾಡಿಕೊಳ್ಳುವ ಬಗ್ಗೆ ಪ್ರಸ್ತಾಪಿಸಿದರು. ಇದಕ್ಕೆ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.
ಬಿಜೆಪಿ ಸದಸ್ಯ ಗಣೇಶ್ ಪ್ರಸಾದ್ ಮಾತನಾಡಿ, ಈ ಹಿಂದಿನ ಶಾಸಕರ ಅನುದಾನದಿಂದ ವಾರ್ಡ್ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳು ನಡೆಯುತ್ತಿವೆ. ಚುನಾವಣೆ ಹಿನ್ನೆಲೆ ಕಾಮಗಾರಿ ನಿಲ್ಲಿಸಲಾಗಿದೆ. ಗುತ್ತಿಗೆದಾರರು ಹಾಲಿ ಶಾಸಕರು ಕಾಮಗಾರಿ ನಿಲ್ಲಿಸಲು ಹೇಳಿದ್ದಾರೆ ಎನ್ನುತ್ತಿದ್ದಾರೆ. ತಕ್ಷಣ ಕಾಮಗಾರಿ ಪ್ರಾರಂಭಿಸಲು ಮನವಿ ಮಾಡಿದರು.
ಸಭೆಯಲ್ಲಿ ಆಡಳಿತಾಧಿಕಾರಿ ಪಲ್ಲವಿ ಸಾತೇನಹಳ್ಳಿ ಅಧ್ಯಕ್ಷತೆ ವಹಿಸಿದ್ದರು. ಪೌರಾಯುಕ್ತ ನಾಗಪ್ಪ ಸೇರಿದಂತೆ ಅಧಿಕಾರಿಗಳು ಹಾಜರಿದ್ದರು.
-27ಕೆಎಸ್ಎಜಿ1: