ಮಹಿಳಾ ಮೀಸಲಾತಿ ಅಂಗೀಕಾರಕ್ಕೆ ವಿರೋಧ ವ್ಯಕ್ತಪಡಿಸಿದ ಕಾಂಗ್ರೆಸ್ ಸೇರಿ ಇಂಡಿಯಾ ಒಕ್ಕೂಟದ ನಡೆ ಖಂಡಿಸಿ ನಗರದಲ್ಲಿ ನಾರಿಶಕ್ತಿ ವಂದನಾ ಪೋರಂ ನೇತೃತ್ವದಲ್ಲಿ ಬಿಜೆಪಿ ಮಹಿಳಾ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಹಾವೇರಿ: ಶೇ. 33ರಷ್ಟು ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರಗೊಳ್ಳದಂತೆ ವಿರೋಧ ವ್ಯಕ್ತಪಡಿಸಿದ ಕಾಂಗ್ರೆಸ್ ಹಾಗೂ ಇಂಡಿ ಒಕ್ಕೂಟದ ನಡೆ ಖಂಡಿಸಿ ಜಿಲ್ಲಾ ಬಿಜೆಪಿ ನಾರಿಶಕ್ತಿ ಫೋರಂ ವತಿಯಿಂದ ನಗರದಲ್ಲಿ ಶನಿವಾರ ಮಹಿಳಾ ಮುಖಂಡರು ಪ್ರತಿಭಟನೆ ನಡೆಸಿದರು.
ನಗರದ ಪುರಸಿದ್ದೇಶ್ವರ ದೇವಸ್ಥಾನದಿಂದ ಪ್ರತಿಭಟನಾ ಪಾದಯಾತ್ರೆ ನಡೆಸಿದ ಬಿಜೆಪಿ ಮಹಿಳಾ ಕಾರ್ಯಕರ್ತೆಯರು ಜೆ.ಪಿ. ವೃತ್ತದವರೆಗೆ ಸಂಚರಿಸಿ ಸಮಾವೇಶಗೊಂಡರು. ಈ ವೇಳೆ ರಾಜ್ಯ ಕಾಂಗ್ರೆಸ್ ಸರ್ಕಾರದ ಮಹಿಳಾ ವಿರೋಧಿ ಧೋರಣೆ ಹಾಗೂ ಕೇಂದ್ರದಲ್ಲಿ ಕಾಂಗ್ರೆಸ್ ಮತ್ತು ಇಂಡಿಯಾ ಒಕ್ಕೂಟದ ಬೆಂಬಲಿತ ಪಕ್ಷಗಳ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷರು, ಮಾಜಿ ಸಚಿವರು, ಮಾಜಿ ಶಾಸಕರು ಸೇರಿದಂತೆ ವಿವಿಧ ಮೋರ್ಚಾಗಳ ಮುಖಂಡರು ನಾರಿಶಕ್ತಿ ಪೋರಂ ಹೋರಾಟಕ್ಕೆ ಬೆಂಬಲ ಸೂಚಿಸಿದರು. ಈ ವೇಳೆ ಮಾಜಿ ಸಚಿವ ಬಿ.ಸಿ. ಪಾಟೀಲ ಮಾತನಾಡಿ, ಕೇಂದ್ರ ಸರ್ಕಾರ ರಾಜಕಾರಣದಲ್ಲಿ ಮಹಿಳಾ ಮೀಸಲಾತಿ ಅಂಗೀಕಾರ ಮಾಡಲು ಹೊರಟರೆ ಕಾಂಗ್ರೆಸ್ ಸೇರಿದಂತೆ ಇಂಡಿ ಕೂಟವು ವಿರೋಧ ವ್ಯಕ್ತಪಡಿಸುವ ಮೂಲಕ ದೇಶದ ಮಹಿಳೆಯರಿಗೆ ಮಹಾಮೋಸ ಮಾಡಿವೆ. ಇಂಡಿಯಾ ಒಕ್ಕೂಟವು ಕ್ರೆಡಿಟ್‌ಗೋಸ್ಕರ ಮೀಸಲು ಅಂಗೀಕಾರ ಮಾಡಿಸಲಿಲ್ಲ. ಗೃಹಲಕ್ಷ್ಮಿ ಕೊಟ್ಟ ತಕ್ಷಣ ಮಹಿಳೆಯರು ಮುಂದೆ ಬರಲ್ಲ. ಸಾಮಾಜಿಕ, ಶೈಕ್ಷಣಿಕ, ರಾಜಕೀಯವಾಗಿ ಮಹಿಳೆಯರಿಗೆ ಶಕ್ತಿ ಕೊಡಬೇಕೆಂದು ಆಗ್ರಹಿಸಿದರು.ಕಾಂಗ್ರೆಸ್‌ನವರು ಮಹಿಳಾ ವಿರೋಧಿ ಧೋರಣೆ ಅನುಸರಿಸುತ್ತಾರೆ. ಮಹಿಳೆಯರ ಹಕ್ಕುಗಳನ್ನು ಕಸಿಯುವ ಯತ್ನ ಮಾಡುತ್ತಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಮಹಿಳೆಯರ ಹಕ್ಕು ಕೊಡುವಲ್ಲಿ ಆಸಕ್ತಿ ಇಲ್ಲ. ಹಾಗಾಗಿ ದೇಶದ ಪ್ರಧಾನಿ ಏನೇ ಒಳ್ಳೆಯ ಕೆಲಸ ಮಾಡಿದರೂ ವಿರೋಧ ಮಾಡುವುದೇ ತಮ್ಮ ಪ್ರವೃತ್ತಿಯನ್ನಾಗಿ ಮಾಡಿಕೊಂಡಿದ್ದಾರೆ. ಮೋದಿಯವರು ಮಹಿಳಾ ಸ್ವಾತಂತ್ರ್ಯ ರಕ್ಷಣೆ ಮಾಡುತ್ತಿದ್ದಾರೆ. ಮುಂದೊಂದು ದಿನ ಮಹಿಳಾ ಮೀಸಲಾತಿ ಜಾರಿಗೆ ಮಾಡಿಯೇ ಮಾಡುತ್ತಾರೆ ಎಂದರು.ರಾಜ್ಯ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶೋಭಾ ನಿಸ್ಸೀಮಗೌಡ್ರ ಮಾತನಾಡಿ, ಭಾರತದಲ್ಲಿ ಮಹಿಳೆಯರಿಗೆ ಪೂಜ್ಯನೀಯ ಸ್ಥಾನಮಾನ ಕೊಡಲಾಗಿದೆ. ಅಂತಹ ಮಹಿಳೆಯರಿಗೆ ರಾಜಕಾರಣದಲ್ಲಿ ಅವಕಾಶ ನೀಡಬೇಕಾದರೆ, ದುಷ್ಟ ಕಾಂಗ್ರೆಸ್ ಒಕ್ಕೂಟದವರು ವಿರೋಧ ಮಾಡುತ್ತಿದ್ದಾರೆ. ಕರ್ನಾಟಕ ಸೇರಿ ದೇಶದ ಮಹಿಳೆಯರಿಗೆ ಅನ್ಯಾಯ ಮಾಡಿದ್ದಾರೆ. ಕೇವಲ ಮಹಿಳೆಯರ ವೋಟ್ ಬ್ಯಾಂಕಿಗೋಸ್ಕರ ಗ್ಯಾರಂಟಿ ಕೊಟ್ಟು, ಸುಮ್ಮನೆ ಕೂರಿಸಿದ್ದಾರೆ. ಇಂತಹ ಕಾಂಗ್ರೆಸ್‌ನವರ ಮನಸ್ಥಿತಿಯನ್ನು ಖಂಡಿಸುತ್ತೇವೆ. ರಾಜಕಾರಣದಲ್ಲಿ ಬೆಳೆಯಲಿಕ್ಕೆ ಅವಕಾಶ ನೀಡದಿರುವುದನ್ನು ಖಂಡಿಸುತ್ತೇವೆ ಎಂದರು.ಪ್ರತಿಭಟನೆಯಲ್ಲಿ ಮಾಜಿ ಶಾಸಕ ಶಿವರಾಜ ಸಜ್ಜನರ, ಮುಖಂಡ ಗವಿಸಿದ್ದಪ್ಪ ದ್ಯಾಮಣ್ಣವರ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಬಸಮ್ಮ ಅಬಲೂರ, ಯಲ್ಲಮ್ಮ ಚಲವಾದಿ, ರೇಷ್ಮಾ ಮೇಲಗಿರಿ ಮಾತನಾಡಿದರು.ಈ ವೇಳೆ ಪಕ್ಷದ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ನಂಜುಂಡೇಶ ಕಳ್ಳೇರ, ಸಂತೋಷ ಆಲದಕಟ್ಟಿ, ನೀಲಪ್ಪ ಚಾವಡಿ, ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ವಿದ್ಯಾ ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷ ವೆಂಕಟೇಶ ನಾರಾಯಣಿ, ಯುವ ಮೋರ್ಚಾ ಅಧ್ಯಕ್ಷ ಕಿರಣ ಕೋಣನವರ, ವಕ್ತಾರ ನಿರಂಜನ ಹೆರೂರ, ವಿಜಯಕುಮಾರ ಚಿನ್ನಿಕಟ್ಟಿ, ಕಿರಣ ಕೊಳ್ಳಿ, ರೋಹಿಣಿ ಪಾಟೀಲ ಸೇರಿದಂತೆ ಪಕ್ಷದ ವಿವಿಧ ಮೋರ್ಚಾಗಳ ಕಾರ್ಯಕರ್ತರು, ಪದಾಧಿಕಾರಿಗಳು ಪಾಲ್ಗೊಂಡಿದ್ದರು.ದೇಶದ ಪ್ರಧಾನಿ ನರೇಂದ್ರ ಮೋದಿಯವರು ವಿಶೇಷ ಅಧಿವೇಶನ ನಡೆಸುವ ಮೂಲಕ ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ ಅನುಷ್ಠಾನಗೊಳಿಸಲು ಮುಂದಾದರೆ ಇಂಡಿಯಾ ಒಕ್ಕೂಟದ ಮಹಿಳಾ ವಿರೋಧಿಗಳು ಅಂಗೀಕಾರಕ್ಕೆ ಸೋಲಾಗುವಂತೆ ಮಾಡಿವೆ. ಈ ದೇಶದ ಮಹಿಳೆಯರು ಯಾವತ್ತಿಗೂ ಕಾಂಗ್ರೆಸ್ ಹಾಗೂ ಇಂಡಿಯಾ ಒಕ್ಕೂಟದ ನಡೆಯನ್ನು ಕ್ಷಮಿಸಲ್ಲ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ ಹೇಳಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.