ಹಸು ಹತ್ಯೆ ಖಂಡಿಸಿ ಬಿಜೆಪಿ ಪ್ರತಿಭಟನೆ

KannadaprabhaNewsNetwork |  
Published : Jan 21, 2025, 12:30 AM IST
ಹಿಂಜಾವೇ ಮನವಿ ನೀಡಿರುವುದು | Kannada Prabha

ಸಾರಾಂಶ

ಗರ್ಭಿಣಿ ಹಸುವನ್ನು ಭೀಕರವಾಗಿ ಕತ್ತರಿಸಿದ ಘಟನೆ ಖಂಡಿಸಿ ಹಿಂದೂ ಜಾಗರಣಾ ವೇದಿಕೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಹೊನ್ನಾವರ: ತಾಲೂಕಿನ ಸಾಲಕೋಡ ಗ್ರಾಮದಲ್ಲಿ ಗರ್ಭಿಣಿ ಹಸುವನ್ನು ಭೀಕರವಾಗಿ ಕತ್ತರಿಸಿದ ಘಟನೆ ಖಂಡಿಸಿ ಹಿಂದೂ ಜಾಗರಣಾ ವೇದಿಕೆ ವತಿಯಿಂದ ತಹಸೀಲ್ದಾರ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿ, ಆರೋಪಿಗಳ ಬಂಧನಕ್ಕಾಗಿ ಆಗ್ರಹಿಸಲಾಯಿತು.

ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ತಿನ ಪ್ರಾಂತ ಮುಖಂಡರಾದ ವಿಶ್ವನಾಥ ನಾಯಕ್ ಮಾತನಾಡಿ, ಇವತ್ತಿನ ಸರ್ಕಾರ ಪ್ರತಿದಿನ ಹಿಂದೂ ವಿರೋಧಿ ಕೃತ್ಯಗಳಿಗೆ ಕುಮ್ಮಕ್ಕು ನೀಡುತ್ತಿದೆ ಎಂದರು‌.

ಬಿಜೆಪಿ ಮುಖಂಡರಾದ ರಾಜು ಭಂಡಾರಿ ಮಾತನಾಡಿ, ತಪ್ಪಿತಸ್ಥರ ಶೀಘ್ರವಾಗಿ ಬಂಧಿಸಬೇಕು. ಪೊಲೀಸರು ತಪ್ಪಿತಸ್ಥರ ಬಂಧಿಸಿದರೂ ಅಮಾಯಕರು ಎಂದು ಗುರುತಿಸುವ ಕಾರ್ಯ ಕಾಂಗ್ರೆಸ್ ಸರ್ಕಾರದಿಂದ ನಡೆಯುತ್ತಿದೆ ಎಂದು ಆಪಾದಿಸಿದರು‌.

ಜಿಪಂ ಮಾಜಿ ಸದಸ್ಯೆ ಶ್ರೀಕಲಾ ಶಾಸ್ತ್ರಿ ಮಾತನಾಡಿ, ಒಂದು ಕಡೆ ಚಿರತೆ ಕಾಟ, ಇನ್ನೊಂದು ಕಡೆ ಗೋಕಳ್ಳರ ಕಾಟದಿಂದ ಗೋವು ಸಾಕುವುದೇ ಕಷ್ಟವಾಗಿದೆ. ಏತನ್ಮಧ್ಯೆ ಇಂತಹ ಕೃತ್ಯ ನಡೆಯುತ್ತಿದೆ. ಇಂತಹ ಘೋರ ಅಪರಾಧ ಮಾಡಿದವರಿಗೆ ಅದೇ ರೀತಿ ಶಿಕ್ಷೆ ನೀಡುವಂತಾಗಬೇಕು. ಆಗಲೇ ಅವರಲ್ಲಿ ಭಯ ಹುಟ್ಟುವುದು ಎಂದರು.

ಬಿಜೆಪಿ ತಾಲೂಕಾಧ್ಯಕ್ಷ ಮಂಜುನಾಥ ನಾಯ್ಕ ಮಾತನಾಡಿ, ನಮ್ಮ ತಾಲೂಕಿನಲ್ಲಿ ಇಂತಹ ದುಷ್ಕ್ರತ್ಯ ನಡೆಯುತ್ತಿದೆ ಎಂದರೆ ಜಿಲ್ಲಾಡಳಿತ ಸತ್ತುಹೋಗಿದೆಯೇ ಅನಿಸುತ್ತಿದೆ. ಪೊಲೀಸ್ ಇಲಾಖೆ ಕೇವಲ ಸರ್ಕಾರದ ಆದೇಶ ಪಾಲಿಸುವ ಕೆಲಸ ಮಾಡಬಾರದು. ಕಾನೂನು ಜಾರಿಗೊಳಿಸುವ ಕೆಲಸ ಪ್ರಾಮಾಣಿಕವಾಗಿ ಮಾಡಬೇಕು ಎಂದರು.

ಕಾಂಗ್ರೆಸ್ ಸರ್ಕಾರದ ಜಿಹಾದಿ ಪ್ರೇರಣೆಯಿಂದ ಇಂತಹ ಘಟನೆಗಳು ನಡೆಯುತ್ತಿದೆ ಎಂದು ಎಚ್.ಆರ್. ಗಣೇಶ ಆಪಾದಿಸಿದರು.

ಹಿಂದೂ ಜಾಗರಣಾ ವೇದಿಕೆ ಜಿಲ್ಲಾ ಸಂಯೋಜಕ ಸುಬ್ರಹ್ಮಣ್ಯ ಉಡದಂಗಿ ಮಾತನಾಡಿ, ಇಡೀ ಜಿಲ್ಲೆಯಲ್ಲಿ ಗೋಕಳ್ಳತನ, ಇಂತಹ ಕೃತ್ಯ ಬಹಳಷ್ಟು ನಡೆಯುತ್ತಿದೆ. ತಲ್ವಾರ್ ಇಟ್ಟುಕೊಂಡು ಭಟ್ಕಳಕ್ಕೆ ಅವ್ಯಾಹತವಾಗಿ ಗೋಸಾಗಾಟ ನಡೆಯುತ್ತಿದೆ. ಪೊಲೀಸರಿಗೆ ಹಿಡಿದುಕೊಟ್ಟರೂ ಪ್ರಯೋಜನವಾಗುತ್ತಿಲ್ಲ ಎಂದರು. ಇತ್ತೀಚಿನ ದಿನಗಳಲ್ಲಿ ಹಿಂದೂ ಧರ್ಮದ ಮೇಲೆ ನಿರಂತರ ದಾ‍‍ಳಿ ನಡೆಯುತ್ತಿದೆ. ಅದರಲ್ಲಿ ನಮ್ಮ ತಾಯಿ ಸಮಾನ ಗೋವುಗಳ ಮೇಲೆ ಆಕ್ರಮಣ, ಹಿಂಸೆ, ಅವ್ಯಾಹತವಾಗಿ ಸಾಗುತ್ತಿದೆ. ಹೊನ್ನಾವರದ ಸಾಲಕೋಡ ಗ್ರಾಮ ಪಂಚಾಯಿತಿಯ ಕೊಂಡಾಕುಳಿ ಮಜರೆಯಲ್ಲಿ ಗರ್ಭಿಣಿ ಹಸುವಿನ ತಲೆ, ಕಾಲು ಕಡಿದು ಕರುವನ್ನು ಎಸೆದು ಹೋದ ಹಿಂಸಾತ್ಮಕ ಘಟನೆ ಮಾನವ ಸಮಾಜವನ್ನು ತಲೆತಗ್ಗಿಸುವಂತೆ ಮಾಡಿದೆ. ಜನರಲ್ಲಿ ಭಯಭೀತಿ ಉಂಟು ಮಾಡಿದೆ. ಇಂತಹ ಘನ ಘೋರ ಕೃತ್ಯ ನಡೆದರೂ ಸರ್ಕಾರ ನಿದ್ದೆ ಮಾಡುತ್ತಿದೆ, ಸ್ಪಂದಿಸುತ್ತಿಲ್ಲ. ಸರ್ಕಾರದ ಈ ಅಸಡ್ಡೆ ಅನುಮಾನಾಸ್ಪದವಾಗಿದೆ. ನ್ಯಾಯದ ನಿರೀಕ್ಷೆ ಕನಸಿನ ಮಾತಾಗಿದೆ. ಆಡಳಿತ ಎಚ್ಚರಗೊಂಡು ಸೂಕ್ತ ತನಿಖೆ ಮಾಡಿ, ಅಪರಾಧಿಗಳನ್ನು ಹಿಡಿದು, ಶಿಕ್ಷೆಗೊಳಪಡಿಸಿದರೆ ಸರಿ. ಇಲ್ಲದಿದ್ದಲ್ಲಿ ಇದಕ್ಕೆ ಯೋಗ್ಯ ಪ್ರತ್ಯುತ್ತರ ನೀಡುವ ಶಕ್ತಿ ಸಾಮರ್ಥ್ಯ ಹಿಂದೂ ಸಮಾಜಕ್ಕಿದೆ ಎಂದು ಸಿದ್ಧಪಡಿಸುತ್ತೇವೆ. ಇದು ಕೇವಲ ಮಾತಲ್ಲ, ಕೃತಿಯಿಂದ ಇದನ್ನು ಸಾಬೀತುಪಡಿಸುತ್ತೇವೆ ಎಂದು ಮನವಿಯಲ್ಲಿ ಎಚ್ಚರಿಸಿದ್ದಾರೆ.

ತಹಸೀಲ್ದಾರ್‌ ಪ್ರವೀಣ ಕರಾಂಡೆ ಮನವಿ ಸ್ವೀಕರಿಸಿ, ಈ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಆರೋಪಿಗಳು ಪತ್ತೆಯಾದಲ್ಲಿ ಸೂಕ್ತ ಕ್ರಮಕೈಗೊಳ್ಳಲು ತಿಳಿಸಲಾಗುವುದು ಎಂದರು.

ಹಿಂಜಾವೇ ತಾಲೂಕು ಸಂಯೋಜಕ ವೀರೇಂದ್ರ ಮೇಸ್ತ, ಅರ್ಜುನ ರಾಯ್ಕರ್, ರಾಹುಲ್ ತಾಂಡೇಲ, ಹೊಸಾಡ ಗೋಶಾಲೆ ವ್ಯವಸ್ಥಾಪಕ ವಿವೇಕ್ ಭಟ್, ಸಂಜು ಶೇಟ್, ವಿಜಯ ಕಾಮತ್, ಉಮೇಶ ಸಾರಂಗ್, ಶಿವಾನಂದ ಹೆಗಡೆ ಕಡತೋಕಾ, ಗಣಪತಿ ಗೌಡ, ಎಂ.ಎಸ್. ಹೆಗಡೆ ಕಣ್ಣಿ, ನಾರಾಯಣ ಹೆಗಡೆ ಮತ್ತಿತರಿದ್ದರು.

PREV

Recommended Stories

ಶ್ರೀ ಶ್ರೀ ರವಿಶಂಕರ್‌ಗೆ ವರ್ಲ್ಡ್ ಲೀಡರ್ ಫಾರ್ ಪೀಸ್ ಆ್ಯಂಡ್‌ ಸೆಕ್ಯೂರಿಟಿ ಪ್ರಶಸ್ತಿ
ಹಾಡಹಗಲೇ ಮನೆಗೆ ನುಗ್ಗಿ ಚಹಾ ವ್ಯಾಪಾರಿಯ ಕತ್ತು ಕೊಯ್ದು ಹತ್ಯೆ