ಹುಬ್ಬಳ್ಳಿ: ದಿನಬಳಕೆ ವಸ್ತುಗಳ ಬೆಲೆ ಏರಿಸಿ ಜನಸಾಮಾನ್ಯರ ಮೇಲೆ ಹೊರೆ ಹೇರಿರುವ ರಾಜ್ಯ ಸರಕಾರ ಇದೀಗ ಡೀಸೆಲ್ ದರ ಪ್ರತಿ ಲೀಟರಿಗೆ ₹2 ಏರಿಕೆ ಮಾಡಿ ಗಾಯದ ಮೇಲೆ ಬರೆ ಎಳೆಯುವ ಕೆಲಸ ಮಾಡಿದೆ ಎಂದು ಆರೋಪಿಸಿ ಹು-ಧಾ ಪೂರ್ವ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷ ಮಂಜುನಾಥ ಕಾಟಕರ ಮಾತನಾಡಿ, ರಾಜ್ಯದಲ್ಲಿನ ಕಾಂಗ್ರೆಸ್ ಸರಕಾರ ಡೀಸೆಲ್ ಬೆಲೆ ಹೆಚ್ಚಿಸುವ ಮೂಲಕ ಹೊಸ ಆರ್ಥಿಕ ವರ್ಷದ ಮೊದಲ ದಿನವೇ ಬೆಲೆ ಏರಿಕೆ ಶಾಕ್ ನೀಡಿದೆ. ಕೇವಲ ಮೂರ್ನಾಲ್ಕು ದಿನಗಳ ಹಿಂದೆಯಷ್ಟೇ ಹಾಲು ಮತ್ತು ವಿದ್ಯುತ್ ದರ ಏರಿಕೆ ಮಾಡಿ ಬರೆ ಎಳೆದು ಗಾಯ ಮಾಡಿದ್ದಲ್ಲದೇ, ಇದೀಗ ಡೀಸೆಲ್ ದರ ಹೆಚ್ಚಿಸಿ ಆ ಗಾಯದ ಮೇಲೆ ಮತ್ತೊಮ್ಮೆ ಬರೆ ಎಳೆಯುವ ಕೆಲಸ ಮಾಡಿದೆ. ಸಿಎಂ ಸಿದ್ದರಾಮಯ್ಯ ಅವರು ಈಗ ದಿನಕ್ಕೊಂದು ವಸ್ತುಗಳ ಮೇಲೆ ತೆರಿಗೆ ಹಾಕಿ, ಬೆಲೆ ಹೆಚ್ಚಿಸಿ, ಬಡವರು, ಮಧ್ಯಮ ವರ್ಗದ ಜನ ಜೀವನ ಮಾಡುವುದೇ ಕಷ್ಟ ಎನ್ನುವಂತಹ ಸ್ಥಿತಿಗೆ ತಂದು ನಿಲ್ಲಿಸಿದ್ದಾರೆ. ಕೂಡಲೇ ಬೆಲೆ ಏರಿಕೆಯನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಧಾರವಾಡ ವಿಭಾಗ ಸಹ ಸಂಚಾಲಕ ನಾರಾಯಣ ಜರ್ತಾಘರ, ಪಾಲಿಕೆ ಸದಸ್ಯ ಶಿವು ಮೆಣಸಿನಕಾಯಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದತ್ತಮೂರ್ತಿ ಕುಲಕರ್ಣಿ, ಮುಖಂಡರಾದ ಸತೀಶ ಶೇಜವಾಡಕರ ಪ್ರಭು ನವಲಗುಂದಮಠ, ಸಂತೋಷ ಅರಕೇರಿ, ಚಂದ್ರಶೇಖರ ಗೋಕಾಕ, ರಾಜು ಜರ್ತಾಘರ, ಸುವರ್ಣಾ ಜಂಗಮಗೌಡ್ರ, ಲಕ್ಷ್ಮಿಕಾಂತ ಘೋಡಕೆ, ಪ್ರವೀಣ ಕುಬಸದ, ಸುಬಾಸ ಅಥಣಿ, ರಾಜು ಕೊರ್ಯಾನಮಠ, ಬಸವರಾಜ ಇಚ್ಚಗಿ, ವಿನಾಯಕ ಲದವಾ, ಡಾ. ರವೀಂದ್ರ ವೈ, ವೆಂಕಟೇಶ್ ಕಾಟವೆ ಸೇರಿದಂತೆ ಪಕ್ಷದ ಪ್ರಮುಖರು, ಮಹಿಳೆಯರು, ಬಿಜೆಪಿ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.