ಮಧ್ಯಾಹ್ನದವರೆಗೂ ಕೊಪ್ಪ ಬಂದ್
ಕನ್ನಡಪ್ರಭ ವಾರ್ತೆ, ಕೊಪ್ಪಹಿರಿಕೆರೆ ಮೇಲ್ಭಾಗದಲ್ಲಿ ನಿರ್ಮಾಣವಾಗುತ್ತಿರುವ ಲೇಔಟ್ ಕಾಮಗಾರಿ ವಿರೋಧಿಸಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಸ್ವಯಂಪ್ರೇರಿತ ಬಂದ್‌ಗೆ ಜನ ಅಭೂತಪೂರ್ವ ಬೆಂಬಲ ನೀಡಿದ್ದಾರೆ. ಪ್ರತಿಭಟನೆಯಲ್ಲಿ ಜನಸಂಖ್ಯೆ ಲೆಕ್ಕಕ್ಕೆ ಬರುವುದಿಲ್ಲ, ಜನರ ಭಾವನೆ ಲೆಕ್ಕಕ್ಕೆ ಬರುತ್ತದೆ ಎಂದು ಮಾಜಿ ಸಚಿವ ಡಿ.ಎನ್. ಜೀವರಾಜ್ ಹೇಳಿದರು.ಹಿರಿಕೆರೆ ಮೇಲ್ಭಾಗದಲ್ಲಿ ನಿರ್ಮಾಣ ಹಂತದಲ್ಲಿರುವ ಲೇಔಟ್‌ನಿಂದ ಕಲ್ಮಶ ನೀರು ಕೆರೆಗೆ ಸೇರುವುದೆಂದು ವಿರೋಧಿಸಿ ಶನಿವಾರ ಕೊಪ್ಪ ಪಟ್ಟಣದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್‌ನವರು ತಪ್ಪು ಮಾಹಿತಿ ಕೊಟ್ಟು ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದರು.
ಗ್ರಾಮಾಂತರ ಪಂಚಾಯಿತಿ ತಮ್ಮ ಅಭ್ಯಂತರವಿಲ್ಲ ಎಂದಿದೆ. ಗ್ರಾಮಾಂತರಕ್ಕೂ ಪಟ್ಟಣಕ್ಕೂ ಏನು ಸಂಬಂಧ. ಲೇಔಟ್ ವ್ಯವಹಾರ ೨೦ ಕೋಟಿಯದ್ದು. ನಾನು ಶಾಸಕನಾಗಿದ್ದಾಗಲೂ ಈ ಆಫರ್ ಬಂದಿತ್ತು. ಜನರಿಗೆ ವಿಷ ಹಾಕಲು ನಾನು ತಯಾರಿಲ್ಲ ಎಂದರು.ಹಿರೀಕೆರೆ ಲೇಔಟ್ ಕಾಮಗಾರಿ ನಿಲ್ಲಿಸಿ ಎಂದರೆ, ಬ್ಲಾಕ್ ಮೇಲ್ ಮಾಡುತ್ತಾರೆ. ೧೩೦೦ ಜನ ಸಹಿ ಹಾಕಿ ಕೊಟ್ಟರೆ, ಆ ಕಡತವೇ ನಾಪತ್ತೆಯಾಗಿದೆ. ಗೋವಿಂದೆಗೌಡ ಅವರ ಕಾಲದಲ್ಲಿ ಮಾಡಿದ ರೆಜ್ಯುಲೇಷನ್ ಕೂಡ ನಾಪತ್ತೆಯಾಗಿದೆ. ಬದುಕಿದ್ದವರಿಗೆ ಡೆತ್ ಸರ್ಟಿಫಿಕೇಟ್ ಕೊಡುವವರಿಗೆ ಕೊಪ್ಪ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಹುದ್ದೆ ಕಾಂಗ್ರೆಸ್ ಅವಧಿಯಲ್ಲಿ ಸಿಗುತ್ತದೆ ಎಂದು ಕಿಡಿಕಾರಿದ ಅವರು, ಲೇಔಟ್ ನಿಲ್ಲಿಸಿ, ಅಡಕೆ ತೋಟ ಮಾಡಿಕೊಂಡು, ಒಂದು ಸುಂದರ ಮನೆ ಕಟ್ಟಿಕೊಳ್ಳಲಿ. ಇದಕ್ಕೆ ನಮ್ಮ ತಕರಾರಿಲ್ಲ ಎಂದರು.
ತಾಲೂಕು ಅಧ್ಯಕ್ಷ ಎಚ್.ಕೆ.ದಿನೇಶ್ ಹೊಸೂರು ಮಾತನಾಡಿ ಶಾಸಕರು ಮನಸ್ಸು ಮಾಡಿದ್ದಲ್ಲಿ ಹತ್ತೇ ನಿಮಿಷದಲ್ಲಿ ಕಾಮಗಾರಿ ನಿಲ್ಲಿಸಬಹುದು. ಆದರೆ, ಲೇಔಟ್ ನಿರ್ಮಾಣ ಕಾಮಗಾರಿಯಲ್ಲಿ ಶಾಸಕರ ಪಾಲು ಎಷ್ಟಿದೆ ಎಂದು ತಿಳಿಸಲಿ ಎಂದರು.ಮಂಡಲ ವಕ್ತಾರ ಎಚ್.ಆರ್. ಜಗದೀಶ್, ಮಹಿಳಾ ಮೋರ್ಚ ಅಧ್ಯಕ್ಷೆ ಡಿ.ಪಿ. ಅನುಸೂಯ, ಎಚ್.ಎಂ. ರವಿಕಾಂತ್, ಜಿ.ಎಸ್. ಮಹಾಬಲ, ಅದ್ದಡ ಸತೀಶ್, ಜೆ.ಪುಣ್ಯಪಾಲ್, ದಿವಾಕರ್ ಮುಂತಾದವರು ಮಾತನಾಡಿದರು. ಬಿಜೆಪಿ ವಿವಿಧ ಘಟಕಗಳ ಪದಾಧಿಕಾರಿಗಳು, ಕಾರ್ಯಕರ್ತರು ಇದ್ದರು. ಶನಿವಾರ ಬೆಳಿಗ್ಗೆ ೬ರಿಂದ ಮಧ್ಯಾಹ್ನ ೨ರವರೆಗೆ ಬಿಜೆಪಿ ಕೊಪ್ಪ ಬಂದ್‌ಗೆ ಕರೆ ನೀಡಿತ್ತು. ಸಾಕಷ್ಟು ಅಂಗಡಿ ಹೋಟೆಲ್‌ಗಳು ಬಂದ್ ಆಚರಿಸಿದ್ದು ಕೆಲವೆಡೆ ಹೊಟೇಲ್ ಅಂಗಡಿಗಳು ತೆರೆಯುವ ಮೂಲಕ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಪೆಟ್ರೋಲ್ ಬಂಕ್, ಬ್ಯಾಂಕ್‌ಗಳು, ಶಾಲಾಕಾಲೇಜು, ಮೆಡಿಕಲ್ ಶಾಪ್, ಎಲ್ಲಾ ಕಚೇರಿಗಳು, ವಾಹನ ಸಂಚಾರ ಬೆಳಿಗ್ಗೆ ಯಿಂದಲೇ ಚಾಲನೆಯಲ್ಲಿತ್ತು.