ಕೈಯಲ್ಲಿ ತೆಂಗಿನ ಚಿಪ್ಪು, ಕಿವಿಗೆ ದಾಸವಾಳ ಹೂವಿಟ್ಟು ಪ್ರತಿಭಟನೆ । ಬೆಲೆ ಇಳಿಸಬೇಕು ಇಲ್ಲವಾದ್ರೆ ಸಿಎಂ ಸಿದ್ದರಾಮಯ್ಯ ಅಧಿಕಾರದಿಂದ ಕೆಳಗಿಳಿಯಬೇಕು: ಸಿ.ಟಿ. ರವಿ ಆಗ್ರಹ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಪೆಟ್ರೋಲ್, ಡೀಸೆಲ್ ಬೆಲೆ ಏರಿಸುವ ಮೂಲಕ ರಾಜ್ಯದ ಕಾಂಗ್ರೆಸ್ ಸರ್ಕಾರ ಜನರ ಕಿವಿಗೆ ಹೂವು ಮುಡಿಸಿ, ಕೈಗೆ ಚಿಪ್ಪುನೀಡಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಆರೋಪಿಸಿದರು.ದರ ಏರಿಕೆ ವಿರುದ್ಧ ಕಿವಿಗೆ ದಾಸವಾಳ ಹೂವು ಮುಡಿದು, ಕೈಯಲ್ಲಿ ತೆಂಗಿನ ಚಿಪ್ಪು ಹಿಡಿದು ಬಿಜೆಪಿ ಯುವ ಮೊರ್ಚಾದಿಂದ ರಾಜ್ಯ ಸರ್ಕಾರದ ವಿರುದ್ಧ ಭಾನುವಾರ ಹಮ್ಮಿಕೊಂಡಿದ್ದ ವಿನೂತನ ಪ್ರತಿಭಟನೆಯಲ್ಲಿ ಭಾಗವಹಿಸಿದ ಅವರು, ಹನುಮಂತಪ್ಪ ವೃತ್ತದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಭ್ರಷ್ಟಾಚಾರ, ಬೆಲೆ ಏರಿಕೆ ಮಾಡುವುದೇ ಈ ಸರ್ಕಾರದ ನೀತಿಯಾಗಿದೆ. ನಂತರ ಅದನ್ನು ವಿಷಯಾಂತರ ಮಾಡಲು ಇನ್ನಾವುದೋ ವಿಚಾರ ಮುನ್ನೆಲೆಗೆ ತರುತ್ತಾರೆ ಎಂದು ದೂರಿದರು.ಬೆಲೆ ಇಳಿಸಬೇಕು ಇಲ್ಲವಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರದಿಂದ ಕೆಳಗಿಳಿಯಬೇಕು. ಈ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ 2 ಬಾರಿ ವಿದ್ಯುತ್ ದರ ಏರಿಸಿ ಜನರಿಗೆ ಬರೆ ಹಾಕಿದರು. ಈಗ ಪೆಟ್ರೋಲ್, ಡೀಸೆಲ್ ಮೇಲಿನ ಸೆಸ್ ಹೆಚ್ಚಿಸಿದ್ದಾರೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದ ಸೆಸ್ ಅತೀ ಹೆಚ್ಚಾಗಿದೆ. ಇದು ಜನರ ಕಿವಿಗೆ ಚೆಂಡು ಹೂವು ಮುಡಿಸುವ ಕೆಲಸ. ಜನರ ಮೇಲೆ ಸೇಡು ತೀರಿಸಿಕೊಳ್ಳುವ ಕೆಲಸ ಎಂದು ದೂರಿದರು.ಜನ ವಿರೋಧಿಯಾಗಿರುವ ಈ ಸರ್ಕಾರದ ನೀತಿಯನ್ನು ಜನ ಮನಕ್ಕೆ ಮುಟ್ಟಿಸುವ ಸಲುವಾಗಿ ಯುವ ಮೋರ್ಚಾಯಿಂದ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಬೆಲೆ ಏರಿಕೆ ಇಳಿಸದೇ ಇದ್ದಲ್ಲಿ ಅವರನ್ನು ಇಳಿಸಲು ಏನು ಮಾಡಬೇಕು ಅದನ್ನು ನಾವು ಮಾಡುತ್ತೇವೆ ಎಂದರು.ಬೆಲೆ ಏರಿಕೆ ಖಂಡಿಸಿ ಇದೇ ಕಾಂಗ್ರೆಸಿಗರು ಸ್ಕೂಟಿಯ ಶವ ಯಾತ್ರೆ ಮಾಡಿದ್ದರು. ಈಗ ಅವರದ್ದೇ ಸರ್ಕಾರ ಬಂದ ಮೇಲೆ ಪೆಟ್ರೋಲ್, ಡೀಸೆಲ್ ಅಷ್ಟೇ ಅಲ್ಲದೆ, ಅಬಕಾರಿ ಸುಂಕ ಎರಡು ಬಾರಿ ಹೆಚ್ಚಿಸಿದ್ದಾರೆ. ಸ್ಟಾಂಪ್ ಡ್ಯೂಟಿ ಹೆಚ್ಚಿಸಿದರು. ಪಹಣಿ, ಆದಾಯ ದೃಢೀಕರಣ ಪತ್ರ, ಜನನ, ಮರಣ ದೃಢೀಕರಣ ಪತ್ರದ ಬೆಲೆಯನ್ನೂ ಹೆಚ್ಚಿಸಿದ್ದಾರೆ. ಈ ಮೂಲಕ ಜನರ ಕಿವಿಗೆ ಹೂವು ಮುಡಿಸುವ ಜೊತೆಗೆ ಕೈಗೆ ಚಿಪ್ಪನ್ನೂ ಕೊಟ್ಟಿದ್ದಾರೆ ಎಂದು ಟೀಕಿಸಿದರು.ಕಾಂಗ್ರೆಸಿಗರ ನೀತಿಯನ್ನೇ ಅವರಿಗೆ ತಿರುಗುಬಾಣವಾಗಿ ತೋರಿಸುವ ಕೆಲಸವನ್ನು ನಾವು ಪ್ರತಿಭಟನೆ ಮೂಲಕ ಮಾಡುತ್ತಿದ್ದೇವೆ. ಜನರ ಪಾಲಿಗೆ ಕಾಂಗ್ರೆಸ್ ಸರ್ಕಾರ ಶಾಪವಾಗಿದೆ. ಮುಂದೆ ನಾವು ಕಾಂಗ್ರೆಸ್‌ನ ಶವ ಯಾತ್ರೆ ಮಾಡಬೇಕಾಗುತ್ತದೆ. ಅಧಿಕಾರದ ಗದ್ದುಗೆಯಿಂದ ಇಳಿಸಿ ಕಾಂಗ್ರೆಸನ್ನು ಸ್ಮಶಾನಕ್ಕೆ ಕಳಿಸುವವರೆಗೆ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದರು.ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ್ ಕೋಟ್ಯಾನ್ ಮಾತನಾಡಿ, ಬೆಲೆ ಏರಿಕೆ ಹೇರುವ ಮೂಲಕ ಕಾಂಗ್ರೆಸ್ ದುರಾಡಳಿತ ನಡೆಸುತ್ತಿದೆ. ವಾಲ್ಮೀಕಿ ನಿಗಮದಲ್ಲಿ ನಡೆದ ಭಾರೀ ಭ್ರಷ್ಟಾಚಾರವನ್ನು ಮರೆ ಮಾಚುವ ಸಲುವಾಗಿ ಬೆಲೆ ಏರಿಕೆಯನ್ನು ಜನರ ಮುಂದೆ ತಂದು ಗಮನ ಬೇರೆಡೆಗೆ ಹರಿಸುವಂತೆ ಷಡ್ಯಂತ್ರ ನಡೆಸಿದೆ ಎಂದು ದೂರಿದರು.ಗ್ಯಾರಂಟಿ ಹೆಸರಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ 6 ನೇ ಗ್ಯಾರಂಟಿಯಾಗಿ ಪೆಟ್ರೋಲ್, ಡೀಸೆಲ್ ದರ ಏರಿಸಿ ಜನರ ಕೈಗೆ ಚಿಪ್ಪು ನೀಡಿದೆ ಎಂದು ದೂರಿದರು. ಏಳನೇ ಗ್ಯಾರಂಟಿಯಾಗಿ ಚೊಂಬು ನೀಡಲಿದೆ. ಇದು ಚಿಪ್ಪು, ಚೊಂಬಿನ ಸರ್ಕಾರವಾಗಿದೆ. ತಕ್ಷಣ ಬೆಲೆ ಏರಿಕೆಯನ್ನು ಹಿಂದಕ್ಕೆ ಪಡೆಯದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ತಿಳಿಸಿದರು.ಪ್ರತಿಭಟನೆಯಲ್ಲಿ ಯುವ ಮೋರ್ಚಾ ನಗರ ಯುವ ಮೋರ್ಚಾ ಅಧ್ಯಕ್ಷ ಜೀವನ್ ಕೋಟೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಚಿನ್ ಗೌಡ, ಜಿಲ್ಲಾ ಉಪಾಧ್ಯಕ್ಷೆ ಅಂಕಿತಾ ಗೌಡ, ಪುನೀತ್, ಮುಖಂಡರಾದ ಟಿ. ರಾಜಶೇಖರ್, ಮಧುಕುಮಾರ ರಾಜ್ ಅರಸ್, ಓಂಕಾರೇ ಗೌಡ ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.
---ಕಾಂಗ್ರೆಸ್ ರಾಜ್ಯಕ್ಕೆ ಶಾಪವಾಗಿದೆ
ಚಿಕ್ಕಮಗಳೂರು: ಕಾಂಗ್ರೆಸ್ ರಾಜ್ಯಕ್ಕೆ ವರವಾಗುವ ಬದಲು ಶಾಪವಾಗಿದೆ. ಕರ್ನಾಟಕದಲ್ಲಿ ಬಿಜೆಪಿ ಆಡಳಿತದಲ್ಲಿದ್ದಾಗ ಸೆಸ್ ಕಡಿಮೆ ಮಾಡಿದ್ದೆವು ಈಗ ಕಾಂಗ್ರೆಸ್ ಸರ್ಕಾರ ಬೆಲೆ ಏರಿಕೆ ಮಾಡಿದೆ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿದರು.ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಲೇ ಹೀಗಾದ್ರೆ ರಾಜ್ಯದ ಮುಂದಿನ ಗತಿ ಏನು ಎಂದು ಪ್ರಶ್ನಿಸಿ, ಈಗ ರಾಜ್ಯದಲ್ಲಿ 4 ಜನ ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಒಂದು ಕಡೆ ಗುತ್ತಿಗೆದಾರರು ಸಾಯುತ್ತಿದ್ದಾರೆ. ಮತ್ತೊಂದು ಕಡೆ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇನ್ನೊಂದು ಕಡೆ ಬೆಲೆ ಏರಿಕೆಯ ಬರೆ ಎಂದರು.ರಾಜ್ಯದಲ್ಲಿ ಉತ್ಪಾಧನಾ ವೆಚ್ಚ ಜಾಸ್ತಿಯಾದ್ರೆ, ಬಂಡವಾಳ ಹೂಡುವವರು ಬರುವುದಿಲ್ಲ, ನಮ್ಮ ರಾಜ್ಯ ಸದ್ಯದಲ್ಲೇ ರೋಗಗ್ರಸ್ತ ರಾಜ್ಯವಾಗಲಿದೆ. ರಾಜ್ಯಕ್ಕೆ ಬರುವ ಉದ್ದಿಮೆಗಳೆಲ್ಲಾ ನೆರೆ ರಾಜ್ಯದ ಪಾಲಾಗುತ್ತಿವೆ ಎಂದು ದರ ಏರಿಕೆ ಸಮರ್ಥನೆ ಮಾಡಿರುವ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರಿಗೆ ತಿರುಗೇಟು ನೀಡಿದರು. 16 ಕೆಸಿಕೆಎಂ 1ತೈಲ ಬೆಲೆ ಏರಿಕೆ ವಿರೋಧಿಸಿ ಚಿಕ್ಕಮಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ಕಿವಿಗೆ ದಾಸವಾಳ ಹೂವು, ಕೈಯಲ್ಲಿ ಚಿಪ್ಪು ಹಿಡಿದು ಭಾನುವಾರ ಪ್ರತಿಭಟನೆ ನಡೆಸಿದರು. ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ, ರಾಜಶೇಖರ್, ಮಧುಕುಮಾರ್ ರಾಜ್ ಅರಸ್, ಸಂತೋಷ್ ಕೋಟ್ಯಾನ್ ಇದ್ದರು.