ಕುಮಟಾ: ಅಮೆರಿಕದಲ್ಲಿ ಎಸ್‌ಸಿ/ಎಸ್‌ಟಿ ಸಮುದಾಯದ ಮೀಸಲಾತಿ ರದ್ದತಿ ಮಾಡುವುದಾಗಿ ಪ್ರಸ್ತಾಪ ಮಾಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಘಟಕದ ವತಿಯಿಂದ ಪಟ್ಟಣದ ಗಿಬ್ ಸರ್ಕಲ್‌ನಲ್ಲಿ ಪ್ರತಿಭಟಿಸಲಾಯಿತು.ಬಿಜೆಪಿ ಎಸ್‌ಸಿ/ಎಸ್‌ಟಿ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಣೇಶ ಹಳ್ಳೇರ ಮಾತನಾಡಿ, ರಾಹುಲ್ ಗಾಂಧಿಯವರು ವಿದೇಶಕ್ಕೆ ಹೋಗಿ ಕೆಲವು ದೇಶವಿರೋಧಿಗಳೊಂದಿಗೆ ಸೇರಿ ಸಂವಿಧಾನ ವಿರೋಧಿ ಹೇಳಿಕೆ ನೀಡುವುದು ಸರಿಯಲ್ಲ. ರಾಹುಲ್ ಗಾಂಧಿ ಪ್ರತಿಬಾರಿ ವಿದೇಶಕ್ಕೆ ಹೋದಾಗ ದೇಶದ ಸಾರ್ವಭೌಮತೆಗೆ ಧಕ್ಕೆ ತರುವ ಹೇಳಿಕೆ ನೀಡುತ್ತಿದ್ದಾರೆ. ಕಾಂಗ್ರೆಸ್ ಎಸ್‌ಸಿ/ಎಸ್‌ಟಿ ಅನುದಾನಗಳನ್ನು ದುರ್ಬಳಕೆ ಮಾಡಿ, ಗ್ಯಾರಂಟಿಗಳಿಗೆ ಬಳಸಿದೆ. ವಾಲ್ಮೀಕಿ ನಿಗಮದ ₹೧೮೭ ಕೋಟಿ ಹಗರಣ ಮಾಡಿದೆ. ರಾಹುಲ್ ಗಾಂಧಿ ಸಂಸದರ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದರು.ಎಸ್‌ಸಿ,ಎಸ್‌ಟಿ ಮೋರ್ಚಾದ ತಾಲೂಕಾಧ್ಯಕ್ಷೆ ಮಂಜುಳಾ ಮುಕ್ರಿ ಮಾತನಾಡಿ, ಕಾಂಗ್ರೆಸ್ ದಲಿತರನ್ನು ಅತ್ಯಂತ ಕೀಳಾಗಿ ಕಾಣುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದರೆ ಅದು ದಲಿತರಿಂದ ಎಂಬುದನ್ನು ಮರೆತಂತಿದೆ. ಸಂವಿಧಾನ ಮತ್ತು ದೇಶದ ಮಾನ ಕಳೆಯುತ್ತಿದ್ದಾರೆ. ಅಂಬೇಡ್ಕರ್ ಸಂವಿಧಾನದ ಮೂಲಕ ನೀಡಿದ ನಮ್ಮ ಹಕ್ಕು ಕಿತ್ತುಕೊಳ್ಳಲು ಬಿಡುವುದಿಲ್ಲ. ಬಿಜೆಪಿ ಸದಾ ದಲಿತರ ಜತೆಗಿದೆ. ರಾಹುಲ್ ಗಾಂಧಿ ಹೇಳಿಕೆ ವಿರೋಧಿಸುತ್ತೇವೆ ಎಂದರು.ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ ಮಾತನಾಡಿ, ತಾವು ದಲಿತ ಪರ ಎಂಬ ಕಾಂಗ್ರೆಸ್ ಮೊಸಳೆ ಕಣ್ಣೀರು ದಲಿತರಿಗೆ ಅರ್ಥವಾಗಿದೆ ಎಂದರು. ಪ್ರತಿಭಟನೆಯಲ್ಲಿ ನಿಕಟಪೂರ್ವ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ, ತಾಲೂಕಾಧ್ಯಕ್ಷ ಜಿ.ಐ. ಹೆಗಡೆ, ಪದಾಧಿಕಾರಿಗಳಾದ ಎಂ.ಜಿ. ಭಟ್, ಗುರುಪ್ರಸಾದ ಹೆಗಡೆ ಶಿರಸಿ, ಪ್ರಶಾಂತ ನಾಯ್ಕ, ಮಂಜುನಾಥ ಪಟಗಾರ, ಶ್ರೀಧರ ಗೌಡ, ಜಯಾ ಶೇಟ್, ಅಶೋಕ ಪ್ರಭು, ಎನ್.ಆರ್. ಮುಕ್ರಿ ಇತರರು ಇದ್ದರು. ಪ್ರತಿಭಟನಾಕಾರರು ಮೀಸಲಾತಿ ವಿರೋಧಿ, ಸಂವಿಧಾನ ವಿರೋಧಿ, ದಲಿತ ವಿರೋಧಿ ಕಾಂಗ್ರೆಸ್‌ಗೆ ಮತ್ತು ರಾಹುಲ್ ಗಾಂಧಿಗೆ ಧಿಕ್ಕಾರ ಕೂಗಿದರು.