ರಾಜ್ಯ ಸರ್ಕಾರದ ದಲಿತ ವಿರೋಧಿ ನೀತಿ ಖಂಡಿಸಿ ಬಿಜೆಪಿ ಪ್ರತಿಭಟನೆ

KannadaprabhaNewsNetwork |  
Published : Feb 24, 2024, 02:33 AM IST
23ಎಚ್‌ವಿಆರ್‌2, 2ಎ | Kannada Prabha

ಸಾರಾಂಶ

ಕಳೆದ 9 ತಿಂಗಳಲ್ಲಿ ರಾಜ್ಯ ಕಾಂಗ್ರೆಸ್ ಆಡಳಿತವು ದಲಿತ ಸಮುದಾಯದ ವಿಚಾರದಲ್ಲಿ ಕೇವಲ ಮಾತಿನಲ್ಲಿ ಮಾತ್ರ ಕಾಳಜಿ ತೋರಿ ದಲಿತ ಸಮುದಾಯವನ್ನು ವಂಚಿಸುತ್ತಿದೆ. ಚುನಾವಣೆಯಲ್ಲಿ ತಮ್ಮ ಗೆಲುವಿನ ಸಲುವಾಗಿ ದಲಿತರಿಗೆ ಮೀಸಲಿಟ್ಟಿದ್ದ ₹೧೧,೧೪೪ ಕೋಟಿ ಎಸ್‌ಸಿಪಿ, ಟಿಎಸ್‌ಪಿ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಲು ವರ್ಗಾಯಿಸಿ ದಲಿತ ಹಿತವನ್ನು ಬಲಿಕೊಡಲಾಗಿದೆ

ಹಾವೇರಿ: ರಾಜ್ಯ ಸರ್ಕಾರದ ದಲಿತ ವಿರೋಧಿ ನೀತಿ ಖಂಡಿಸಿ ಜಿಲ್ಲಾ ಬಿಜೆಪಿಯಿಂದ ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ಇಲ್ಲಿಯ ಜಿಲ್ಲಾ ಕಾರ್ಯಾಲಯದಿಂದ ಪಾದಯಾತ್ರೆ ಮೂಲಕ ಹೊಸಮನಿ ಸಿದ್ದಪ್ಪ ಸರ್ಕಲ್‌ ವರೆಗೆ ಆಗಮಿಸಿದ ಕಾರ್ಯಕರ್ತರು, ಮಾನವ ಸರಪಳಿ ನಿರ್ಮಿಸಿ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.

ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಅರುಣಕುಮಾರ ಪೂಜಾರ ಮಾತನಾಡಿ, ಕಳೆದ 9 ತಿಂಗಳಲ್ಲಿ ರಾಜ್ಯ ಕಾಂಗ್ರೆಸ್ ಆಡಳಿತವು ದಲಿತ ಸಮುದಾಯದ ವಿಚಾರದಲ್ಲಿ ಕೇವಲ ಮಾತಿನಲ್ಲಿ ಮಾತ್ರ ಕಾಳಜಿ ತೋರಿ ದಲಿತ ಸಮುದಾಯವನ್ನು ವಂಚಿಸುತ್ತಿದೆ. ಚುನಾವಣೆಯಲ್ಲಿ ತಮ್ಮ ಗೆಲುವಿನ ಸಲುವಾಗಿ ದಲಿತರಿಗೆ ಮೀಸಲಿಟ್ಟಿದ್ದ ₹೧೧,೧೪೪ ಕೋಟಿ ಎಸ್‌ಸಿಪಿ, ಟಿಎಸ್‌ಪಿ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಲು ವರ್ಗಾಯಿಸಿ ದಲಿತ ಹಿತವನ್ನು ಬಲಿಕೊಡಲಾಗಿದೆ. ತಮ್ಮ ಸ್ವಾರ್ಥ ಸಾಧನೆ ಪೂರೈಸಿಕೊಂಡ ಕಾಂಗ್ರೆಸಿಗರ ಡೋಂಗಿ ದಲಿತ ಕಾಳಜಿ ಇದರಿಂದ ಬಹಿರಂಗವಾಗಿದೆ. ದಲಿತರ ಹಿತ ರಕ್ಷಣೆ ಮಾಡಬೇಕಿದ್ದ ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ ಅವರು ಈ ಅನ್ಯಾಯದ ವಿರುದ್ಧ ಸೊಲ್ಲೆತ್ತದೆ ಪಕ್ಷಕ್ಕಾಗಿ ದಲಿತ ಸಮುದಾಯದ ಹಿತವನ್ನು ರಾಜಿ ಮಾಡಿಕೊಂಡಿದ್ದಾರೆ. ಸಿದ್ದರಾಮಯ್ಯ ಅವರು ಅಲ್ಪಸಂಖ್ಯಾತರಿಗೆ ₹೧೦ ಸಾವಿರ ಕೋಟಿ ವೆಚ್ಚ ಮಾಡಲು ಮಾತ್ರ ಯಾವ ಗ್ಯಾರಂಟಿಯೂ ಅಡ್ಡ ಬಂದಿಲ್ಲ. ಅವರಿಗೆ ದಲಿತರ ಹಿತಾಸಕ್ತಿಗಿಂತ ವೋಟ್‌ ಬ್ಯಾಂಕ್ ರಾಜಕಾರಣವೇ ಆದ್ಯತೆಯಾಗಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಹೇಳಿದರು.

ಮೊರಾರ್ಜಿ ಶಾಲೆಯ ಅಭಿವೃದ್ಧಿ ಮತ್ತು ಹೊಸ ಶಾಲೆಗಳ ಆರಂಭಕ್ಕೆ ಮೀಸಲಾದ ಹಣವು ಇತರ ಯೋಜನೆಗಳಿಗೆ ಬಳಕೆಯಾಗಿ ದಲಿತ ಮತ್ತು ಹಿಂದುಳಿದ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಕಾಂಗ್ರೆಸ್‌ ನಾಯಕರು ಚೆಲ್ಲಾಟವಾಡುತ್ತಿದ್ದಾರೆ. ಇದಲ್ಲದೆ ದಲಿತ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಮೀಸಲಿಟ್ಟ ಹಣವು ಕೂಡಾ ದುರ್ಬಳಕೆಯಾಗಿ ಉನ್ನತ ಶಿಕ್ಷಣದಿಂದ ದಲಿತ ವಿದ್ಯಾರ್ಥಿಗಳನ್ನು ವಂಚಿತರನ್ನಾಗಿ ಮಾಡಲಾಗುತ್ತಿದೆ. ರಾಜ್ಯದಲ್ಲಿ ಕಳೆದ ಎಂಟು ತಿಂಗಳಿನಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರ ಗೃಹ ನಿರ್ಮಾಣ ಯೋಜನೆಯು ಸ್ಥಗಿತಗೊಂಡಿದೆ. ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಆವಾಸ್ ಯೋಜನೆಯಲ್ಲಿ ಸಾವಿರಾರು ಮನೆಗಳನ್ನು ನಿರ್ಮಿಸಿ ಹಂಚುತ್ತಿದ್ದರೆ, ರಾಜ್ಯ ಸರ್ಕಾರದ ಯೋಜನೆಯು ಕೋಮಾ ಸ್ಥಿತಿಗೆ ತಲುಪಿದೆ ಎಂದು ಆರೋಪಿಸಿದರು.

ಮಾಜಿ ಶಾಸಕ ಶಿವರಾಜ ಸಜ್ಜನರ ಮಾತನಾಡಿ, ರೈತ ನಿಧಿ ಯೋಜನೆಯಲ್ಲಿ ದಲಿತ ಕುಟುಂಬದ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ವಿದ್ಯಾರ್ಥಿ ವೇತನವು ಸ್ಥಗಿತಗೊಂಡಿದೆ. ಕಿಸಾನ್ ಸಮ್ಮಾನ್ ಯೋಜನೆಗೆ ಹೆಚ್ಚುವರಿಯಾಗಿ ನೀಡುತ್ತಿದ್ದ ₹೪ ಸಾವಿರಕ್ಕೂ ಕತ್ತರಿ ಪ್ರಯೋಗವಾಗಿದೆ. ಸಿದ್ದರಾಮಯ್ಯ ಅವರು ಬಾಯಿ ತೆಗೆದರೆ ದಲಿತ ಮತ್ತು ಆದಿವಾಸಿಗಳ ಕಲ್ಯಾಣದ ಬಗ್ಗೆ ಮಾತನಾಡುತ್ತಾರೆ. ಪರಿಶಿಷ್ಟ ಜಾತಿ ಮತ್ತು ಪಂಗಡದವರಲ್ಲಿ ಉದ್ಯಮಶೀಲತೆ ಉತ್ತೇಜಿಸುವ ಯೋಜನೆಯನ್ನು ಕೈಗೊಳ್ಳಲು ರಾಜ್ಯ ಸರ್ಕಾರಕ್ಕೆ ಆಸಕ್ತಿಯಿಲ್ಲ. ದಲಿತ ಉದ್ಯಮದಾರರನ್ನು ರೂಪಿಸಲು ಮತ್ತು ಉತ್ತೇಜಿಸಲು ಯಾವುದೇ ಆಸಕ್ತಿ ವಹಿಸುತ್ತಿಲ್ಲ. ಅವರಿಗಾಗಿ ಯಾವುದೇ ಕಾರ್ಯಕ್ರಮವನ್ನು ಬಜೆಟ್‌ನಲ್ಲಿ ಘೋಷಿಸಿಯೂ ಇಲ್ಲ. ಗ್ಯಾರಂಟಿಗೆ ಹಣ ನೀಡಬೇಕಾದ ಕಾರಣ ಮುಂಗಡ ಪತ್ರದಲ್ಲಿ ಮತ್ತೆ ₹11 ಸಾವಿರ ಕೋಟಿ ಅನುದಾನ ಕಡಿತ ಮಾಡಲಾಗಿದೆ. ಇದೇ ಕಾಂಗ್ರೆಸ್‌ ಸರ್ಕಾರದ ದಲಿತ ಕಾಳಜಿ ಎಂದು ವ್ಯಂಗ್ಯವಾಡಿದರು.

ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿ, ಸಂವಿಧಾನ ಜಾಥಾ ಮಾಡುತ್ತಿರುವ ಸರ್ಕಾರ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ದಲಿತರಿಗೆ ಸೇರಬೇಕಾದ ಅನುದಾನವನ್ನು ನಿರಾಕರಿಸಿ ಅನ್ಯಾಯ ಮಾಡುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ದಲಿತ ವಿರೋಧಿ ನೀತಿ ಖಂಡನೀಯ. ಎಸ್‌ಸಿಪಿ, ಟಿಎಸ್‌ಪಿ ಹಣವನ್ನು ಕೂಡಲೇ ವಾಪಸ್ ನೀಡಬೇಕು. ಸಂವಿಧಾನಬದ್ಧ ಕಲ್ಯಾಣ ಯೋಜನೆಗಳ ಹಣದ ದುರುಪಯೋಗ ಸಲ್ಲದು. ರಾಜ್ಯ ಸರ್ಕಾರದ ಸ್ವಾರ್ಥಕ್ಕೆ ದಲಿತರಿಗೆ ಅನ್ಯಾಯ ಮಾಡಬಾರದು ಎಂದು ಆಗ್ರಹಿಸಿದರು.

ಜಿಲ್ಲಾ ಎಸ್‌ಟಿ ಮೋರ್ಚಾ ಮಾಜಿ ಅಧ್ಯಕ್ಷ ಶಿವಾನಂದ ಯಮನಕ್ಕನವರ, ಜಿಲ್ಲಾ ಎಸ್ಸಿ ಮೋರ್ಚಾ ಅಧ್ಯಕ್ಷ ಚಂದ್ರಪ್ಪ ಹರಿಜನ ಮಾತನಾಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಂಜುಂಡೇಶ ಕಳ್ಳೇರ, ಮಂಜುನಾಥ ಗಾಣಿಗೇರ, ಡಾ. ಸಂತೋಷ ಆಲದಕಟ್ಟಿ ಹಾಗೂ ಕಾರ್ಯಕರ್ತರು ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ