ಕನ್ನಡಪ್ರಭ ವಾರ್ತೆ ಬಳ್ಳಾರಿ
ರಾಜ್ಯ ಸರ್ಕಾರದ ಬೆಲೆ ಏರಿಕೆ ನೀತಿ ಖಂಡಿಸಿ ಬಿಜೆಪಿ ಮುಖಂಡರು ಹಾಗೂ ನೂರಾರು ಕಾರ್ಯಕರ್ತರು ಇಲ್ಲಿನ ಕನಕದಾಸ ವೃತ್ತದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.ಕಾಂಗ್ರೆಸ್ ಸರ್ಕಾರಕ್ಕೆ ಯಾವುದೇ ಜನಪರ ಕಾಳಜಿಗಳಿಲ್ಲ. ಹೀಗಾಗಿ ಹತ್ತಾರು ವಸ್ತುಗಳ ಬೆಲೆ ಏರಿಕೆಗಳ ಮೂಲಕ ಜನವಿರೋಧಿ ನೀತಿ ಜಾರಿಗೊಳಿಸಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕವೇ 48 ವಸ್ತುಗಳ ಬೆಲೆ ಏರಿಕೆಯಾಗಿವೆ. ಹಾಲು, ಮೊಸರು, ಡೀಸೆಲ್ ಸೇರಿದಂತೆ ನಿತ್ಯ ಬಳಕೆಯ ಅನೇಕ ವಸ್ತುಗಳ ಬೆಲೆ ಏರಿಕೆಯಿಂದ ರಾಜ್ಯದ ಜನರು ತತ್ತರಿಸಿ ಹೋಗಿದ್ದಾರೆ. ಹಾಲಿನ ದರ ಎರಡು ವರ್ಷಗಳಲ್ಲಿ ಮೂರು ಬಾರಿ ಏರಿಕೆಯಾಗಿದೆ. ಬಿತ್ತನೆ ಬೀಜಗಳ ಬೆಲೆ ಏರಿಕೆಯನ್ನೂ ಮಾಡಿರುವ ಕಾಂಗ್ರೆಸ್ ಸರ್ಕಾರ, ತಮ್ಮದು ರೈತ ವಿರೋಧಿ ಸರ್ಕಾರ ಎಂಬುದನ್ನು ಸಾಬೀತುಪಡಿಸಿದೆ. ಅಹಿಂದ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಅಹಿಂದ ಸಮುದಾಯಗಳ ಮರೆತು, ಅಲ್ಪಸಂಖ್ಯಾತರ ಓಲೈಕೆಗೆ ನಿಂತಿದ್ದಾರೆ. ಮುಸ್ಲಿಂ ಸಮುದಾಯಕ್ಕೆ ಶೇ.4ರಷ್ಟು ಗುತ್ತಿಗೆಯಲ್ಲಿ ಮೀಸಲಾತಿ ನೀಡುವ ಮೂಲಕ ಹಿಂದೂ ಸಮಾಜವನ್ನು ಮರೆತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಇದೇ ವೇಳೆ ಮಾತನಾಡಿದ ವಿಧಾನಪರಿಷತ್ ಸದಸ್ಯ ವೈ.ಎಂ. ಸತೀಶ್, ಮಾಜಿ ಶಾಸಕ ಜಿ.ಸೋಮಶೇಖರ ರೆಡ್ಡಿ ಹಾಗೂ ಪಕ್ಷದ ಜಿಲ್ಲಾಧ್ಯಕ್ಷ ಅನಿಲ್‌ಕುಮಾರ್ ಮೋಕಾ, ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ ಕ್ರಮ ಖಂಡಿಸಿ ಇಡೀ ರಾಜ್ಯದಾದ್ಯಂತ ಬಿಜೆಪಿ ಪ್ರತಿಭಟನೆಗೆ ಮುಂದಾಗಿದೆ. ಕಾಂಗ್ರೆಸ್ ದುರಾಡಳಿತದಿಂದ ನಾಡಿನ ಜನರು ರೋಸಿ ಹೋಗಿದ್ದು, ಈ ಸರ್ಕಾರದ ವಿರುದ್ಧ ಹೋರಾಟವನ್ನು ಬಿಜೆಪಿ ಮುಂದುವರಿಸಲಿದೆ ಎಂದು ಎಚ್ಚರಿಸಿದರು.ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಬಳ್ಳಾರಿ ಜಿಲ್ಲೆ ಅಭಿವೃದ್ಧಿಯಿಂದ ದೂರ ಉಳಿದಿದೆ. ಬಳ್ಳಾರಿ ಜಿಲ್ಲೆಗೆ ಮೂಲ ಸೌಕರ್ಯಗಳನ್ನು ಕಲ್ಪಿಸುವಲ್ಲಿ ಕಾಂಗ್ರೆಸ್ ವಿಫಲವಾಗಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಸರ್ಕಾರ ರಾಜ್ಯದಲ್ಲಿ ಆಡಳಿತಕ್ಕೆ ಬಂದ ಬಳಿಕ ಜಿಲ್ಲೆಯಲ್ಲಿ ಅಭಿವೃದ್ಧಿ ನಗಣ್ಯವಾಗಿದೆ ಎಂದು ದೂರಿದರು.
ಬಳ್ಳಾರಿಯಲ್ಲಿ ಸ್ಥಾಪನೆಯಾಗಬೇಕಿದ್ದ ಮೆಗಾಡೈರಿಯನ್ನು ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿಗೆ ಸ್ಥಳಾಂತರ ಷಡ್ಯಂತ್ರ ನಡೆದಿದೆ. ಈ ಹಿಂದಿನಿಂದಲೂ ಬಳ್ಳಾರಿಯಲ್ಲಿಯೇ ಮೆಗಾಡೈರಿಯನ್ನು ಸ್ಥಾಪಿಸಲು ಉದ್ದೇಶ ಹೊಂದಲಾಗಿತ್ತು. ಈ ಸಂಬಂಧ ಜಾಗ ಗುರುತಿಸುವಿಕೆ ಸಹ ನಡೆದಿದೆ. ಆದರೆ, ಕೆಎಂಎಫ್ ಅಧ್ಯಕ್ಷರಾಗಿರುವ ಭೀಮಾನಾಯ್ಕ ಬಳ್ಳಾರಿಯಿಂದ ವಿಜಯನಗರ ಜಿಲ್ಲೆಗೆ ಮೆಗಾಡೈರಿಯನ್ನು ಸ್ಥಳಾಂತರಿಸುವ ಹುನ್ನಾರ ನಡೆಸಿದ್ದಾರೆ. ಯಾವುದೇ ಕಾರಣಕ್ಕೂ ಬಳ್ಳಾರಿಯಿಂದ ವಿಜಯನಗರ ಜಿಲ್ಲೆಗೆ ಮೆಗಾಡೈರಿ ಸ್ಥಳಾಂತರಕ್ಕೆ ಬಿಡುವುದಿಲ್ಲ ಎಂದು ಪ್ರತಿಭಟನಾಕಾರರು ತಿಳಿಸಿದರು.ಪ್ರತಿಭಟನೆ ಬಳಿಕ ರಾಬಕೊವಿ ಹಾಲು ಒಕ್ಕೂಟದ ಕಚೇರಿಗೆ ತೆರಳಿದ ಪ್ರತಿಭಟನಾಕಾರರು ಮುತ್ತಿಗೆ ಹಾಕಲು ಯತ್ನಿಸಿದರು. ಪೊಲೀಸರು ಮಧ್ಯಪ್ರವೇಶಿಸಿ ಪ್ರತಿಭಟನಾಕಾರರನ್ನು ತಡೆದರು. ಇದೇ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು. ಬಳಿಕ ಪ್ರತಿಭಟನಾಕರನ್ನು ಸಂತೈಸಿದ ಪೊಲೀಸರು, ಹಾಲು ಒಕ್ಕೂಟದ ಅಧಿಕಾರಿಗಳ ಬಳಿ ಚರ್ಚಿಸಲು ಮಾಜಿ ಶಾಸಕ ಸೋಮಶೇಖರ ರೆಡ್ಡಿ ಮತ್ತಿತರರನ್ನು ಕಳಿಸಿಕೊಟ್ಟರು. ಹಾಲಿನ ದರ ಏರಿಕೆ, ಮೆಗಾಡೈರಿ ಸ್ಥಳಾಂತರ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ಒಕ್ಕೂಟದ ಅಧಿಕಾರಿಗಳ ಬಳಿ ಚರ್ಚಿಸಿದ ಬಿಜೆಪಿ ನಾಯಕರು, ಯಾವುದೇ ಕಾರಣಕ್ಕೂ ಮೆಗಾಡೈರಿ ಸ್ಥಳಾಂತರ ಮಾಡಬಾರದು. ನಷ್ಟದ ನೆಪದಲ್ಲಿ ಹಾಲು ಉತ್ಪಾದಕರ ಹಣವನ್ನು ಕಡಿತಗೊಳಿಸಿರುವುದನ್ನು ಕೂಡಲೇ ಹಿಂದಕ್ಕೆ ನೀಡಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಮುಖಂಡರಾದ ಡಾ. ಅರುಣಾ ಕಾಮಿನೇನಿ, ಸುಗುಣ, ಎಚ್. ಹನುಮಂತಪ್ಪ, ಪಾಲಿಕೆ ಸದಸ್ಯರಾದ ಶ್ರೀನಿವಾಸ ಮೋತ್ಕರ್, ಗೋವಿಂದರಾಜು, ವೆಂಕರಮಣ ಸೇರಿದಂತೆ ಪಕ್ಷದ ವಿವಿಧ ಮೋರ್ಚಾಗಳ ಪದಾಧಿಕಾರಿಗಳು ಭಾಗವಹಿಸಿದ್ದರು.