ಕನ್ನಡಪ್ರಭ ವಾರ್ತೆ ಹೊಸಪೇಟೆ
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಸಂವಿಧಾನ ಬದಲಿಸುವ ಕುರಿತು ನೀಡಿರುವ ಹೇಳಿಕೆ ಖಂಡಿಸಿ ಜಿಲ್ಲಾ ಬಿಜೆಪಿ ವತಿಯಿಂದ ನಗರದ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆ ಬಳಿ ಬುಧವಾರ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.ನಗರದ ಪಟೇಲ್ ನಗರದಲ್ಲಿರುವ ಬಿಜೆಪಿ ಕಚೇರಿಯಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ ಬಿಜೆಪಿ ಕಾರ್ಯಕರ್ತರು, ಗ್ಯಾರಂಟಿ, ಗ್ಯಾರಂಟಿ, ಹನಿಟ್ರ್ಯಾಪ್ ಗ್ಯಾರಂಟಿ ಎಂದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಅಂಬೇಡ್ಕರ್ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರನ್ನುದ್ದೇಶಿಸಿ ಮಾಜಿ ಸಚಿವ ಬಿ.ಶ್ರೀರಾಮುಲು ಮಾತನಾಡಿ, ಸಂವಿಧಾನ ಬದಲಾವಣೆ ಕುರಿತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ನೀಡಿರುವ ಹೇಳಿಕೆಯು ಕಾಂಗ್ರೆಸ್, ರಾಹುಲ್ ಗಾಂಧಿ, ಸಿದ್ದರಾಮಯ್ಯ ಅವರ ಮನಸ್ಥಿತಿ ಪ್ರತಿಬಿಂಬಿಸುತ್ತದೆ. ಒಂದು ನಿರ್ದಿಷ್ಟ ಸಮುದಾಯವನ್ನು ಓಲೈಸಲು ಈ ಸರ್ಕಾರ ಹೊರಟಿದೆ. ಒಂದು ಸಮುದಾಯಕ್ಕೆ ಕಾಮಗಾರಿ ಗುತ್ತಿಗೆಯಲ್ಲಿ ಮೀಸಲಾತಿ ನೀಡಲಾಗುತ್ತಿದೆ. ಈಗ ಅವರ ಏಳ್ಗೆಗಾಗಿ ಸಂವಿಧಾನವನ್ನೆ ಬದಲಾಯಿಸುತ್ತೇವೆ ಎಂದು ಡಿ.ಕೆ. ಶಿವಕುಮಾರ ನೀಡಿರುವ ಹೇಳಿಕೆ ಖಂಡನೀಯ ಎಂದರು.ಕಾಂಗ್ರೆಸ್ ಓಲೈಕೆ ಹಾಗೂ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದೆ. ದುರ್ಬಲ ಸಮುದಾಯಕ್ಕೆ ನೀಡಲಾಗಿರುವ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಂಡು ಅನ್ಯಾಯ ಮಾಡಲಾಗುತ್ತಿದೆ. ಜನರ ಹಿತವನ್ನು ಕಾಂಗ್ರೆಸ್ ಸರ್ಕಾರ ಮರೆತಿದೆ. ಸಂವಿಧಾನದಲ್ಲಿ ಧರ್ಮದ ಆಧಾರದಲ್ಲಿ ಮೀಸಲಾತಿ ಕಲ್ಪಿಸಲು ಅವಕಾಶವಿಲ್ಲ. ವಿಧಾನಸಭೆಯಲ್ಲಿ ಚರ್ಚೆಯೇ ನಡೆಸದೆ ಕಾನೂನು ಜಾರಿ ಮಾಡಲಾಗುತ್ತಿದೆ. ಸರ್ಕಾರದ ವೈಫಲ್ಯ ಪ್ರಶ್ನೆ ಮಾಡಿದ್ದಕ್ಕೆ ಬಿಜೆಪಿಯ 18 ಶಾಸಕರನ್ನು ಅಮಾನತು ಮಾಡಲಾಗಿದೆ. ಕಾಂಗ್ರೆಸ್ ಸಂವಿಧಾನ ಪರ ಎಂದು ಭಾಷಣಗಳಲ್ಲಿ ಮಾತ್ರ ಹೇಳುತ್ತದೆ. ಸಂವಿಧಾನ ಬದಲಾಯಿಸುವ ಮಾತುಗಳು ಕಾಂಗ್ರೆಸ್ಸಿಗರೇ ಆಡುತ್ತಿದ್ದಾರೆ. ಅವರ ಮನಸ್ಥಿತಿಯನ್ನು ಇಡೀ ದೇಶದ ಜನ ಗಮನಿಸುತ್ತಿದ್ದಾರೆ ಎಂದರು.
ನಗರಸಭೆ ಅಧ್ಯಕ್ಷ ರೂಪೇಶ್ ಕುಮಾರ, ರಾಜ್ಯ ಮಹಿಳಾ ಮೋರ್ಚಾ ಸದಸ್ಯೆ ವಿಜಯಲಕ್ಷ್ಮಿ, ಮಂಡಲ ಅಧ್ಯಕ್ಷ ಶಂಕರ್ ಮೇಟಿ, ಮುಖಂಡರಾದ ಜಂಬಯ್ಯ ನಾಯಕ, ಕಾಸಟ್ಟಿ ಉಮಾಪತಿ, ತಾರಿಹಳ್ಳಿ ಜಂಬುನಾಥ, ಕಿಚಡಿ ಕೊಟ್ರೇಶ್, ರೇವಣಸಿದ್ದಪ್ಪ, ಗೌಳಿ ರುದ್ರಪ್ಪ, ಜೆ.ಬಿ. ರಾಘವೇಂದ್ರ, ಚಂದ್ರು ದೇವಲಾಪುರ, ಉಮಾದೇವಿ, ಜಯಶ್ರೀ, ರೇಣುಕಾ, ಶ್ರೀಲತಾ, ಸುನೀತಾ, ಅನುರಾಧ, ಮಧುರ ಚನ್ನ ಶಾಸ್ತ್ರಿ, ಹೊನ್ನೂರಪ್ಪ, ಗೌಳಿ ಬಸವರಾಜ, ಚೌಡಪ್ಪ ಮತ್ತಿತರರಿದ್ದರು. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಪೋಸ್ಟರ್ ಹಾಗೂ ಗುತ್ತಿಗೆಯಲ್ಲಿ ಮುಸ್ಲಿಂ ಮೀಸಲಾತಿ ಕುರಿತ ಪೋಸ್ಟರ್‌ಗಳನ್ನು ಪ್ರತಿಭಟನಾಕಾರರು ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.