ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಸೇರಿದ ಬಿಜೆಪಿ ಕಾರ್ಯಕರ್ತರು, ರಾಜ್ಯ ಸರ್ಕಾರದ ದಿವಾಳಿತನದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಂಗಳೂರು, ಬೆಳಗಾವಿ ಸೇರಿದಂತೆ ರಾಜ್ಯದ ವಿವಿಧೆಡೆಗಳಲ್ಲಿ ಕಲ್ಯಾಣ ಕಾರ್ಯಕ್ರಮಗಳನ್ನು ಘೋಷಿಸುತ್ತಿದ್ದಾರೆ. ಅವರದ್ದೇ ಇಲಾಖೆಯಾಗಿರುವ ಹಣಕಾಸು ಇಲಾಖೆಯೇ ಅವರಿಗೆ ಎಚ್ಚರಿಕೆ ನೀಡಿದೆ. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರ ಆಡಳಿತ ನಡೆಸುತ್ತಿದೆ ಎಂದು ದೂರಿದರು.ರಾಜ್ಯದ ಆರ್ಥಿಕ ಪರಿಸ್ಥಿತಿ ಕುರಿತಂತೆ ತಕ್ಷಣ ಶ್ವೇತಪತ್ರ ಹೊರಡಿಸಬೇಕು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಒತ್ತಾಯಿಸಿದ ಅವರು, ಸೆ.೧೭ರಂದು ಆರ್ಥಿಕ ಇಲಾಖೆ ನಮ್ಮಲ್ಲಿ ಹಣಕಾಸಿನ ಕೊರತೆ ಇದೆ. ಯಾವುದೇ ಹೊಸ ಘೋಷಣೆ ಮಾಡಬೇಡಿ ಎಂದು ಸ್ಪಷ್ಟವಾಗಿ ಪತ್ರ ಬರೆದಿದ್ದಾರೆ. ಆದರೂ ಕರಾವಳಿ ಭಾಗಕ್ಕೆ ೧೨ ಸಾವಿರ ಕೋಟಿ ರು. ವಿಶೇಷ ಅನುದಾನ ಘೋಷಣೆ ಮಾಡಿದ್ದೀರಿ. ಹಣ ಎಲ್ಲಿಂದ ತರುತ್ತೀರಿ ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿನ ಬರ ಪರಿಸ್ಥಿತಿಯ ಬಗ್ಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕೇಂದ್ರಕ್ಕೆ ಪತ್ರ ಬರೆದು ಕೈತೊಳೆದುಕೊಂಡಿದ್ದಾರೆ ಅಷ್ಟೆ. ಅವರಿಗೆ ರಾಜ್ಯದ ಜನರ, ರೈತರ ಹಿತ ಬೇಕಾಗಿಲ್ಲ ಎಂದು ದೂರಿದರು.
ಸಕಲೇಶಪುರದಲ್ಲಿ ನಡೆದ ಪ್ರಜಾಸೇವೆ ಆಂದೋಲನ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಕೆ.ಎಂ. ಶಿವಲಿಂಗೇಗೌಡರು ಸರ್ಕಾರಿ ಅಧಿಕಾರಿಗಳು ಕೆಲಸ ಮಾಡಿಕೊಟ್ಟ ಬಳಿಕ ಗೌರವಯುತವಾಗಿ ನೀಡುವ ಕುರಿತು ನೀಡಿದ ಹೇಳಿಕೆ ಪರೋಕ್ಷವಾಗಿ ಲಂಚದ ಬೇಡಿಕೆಯಾಗಿದೆ. ಸಂಪುಟ ದರ್ಜೆ ಸಚಿವರೇ ಸರ್ಕಾರಿ ಅಧಿಕಾರಿಗಳಿಗೆ ಲಂಚ ನೀಡುವಂತೆ ಜನರಿಗೆ ಸಲಹೆ ನೀಡುತ್ತಿದ್ದಾರೆ ಎಂದ ಮೇಲೆ ಇನ್ನು ಸರ್ಕಾರದ ಪರಿಸ್ಥಿತಿ ಯಾವ ರೀತಿಯಲ್ಲಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬಹುದು ಎಂದು ಆಕ್ರೋಶ ವ್ಯಕ್ತಪಡಿಸಿದರು.