ಕನ್ನಡಪ್ರಭ ವಾರ್ತೆ ಹಾಸನ
ನಗರದ ಆರ್.ಸಿ. ರಸ್ತೆ ಬಳಿ ಇರುವ ಬಿಜೆಪಿ ಜಿಲ್ಲಾ ಕಚೇರಿಯಿಂದ ಹೊರಟ ಪ್ರತಿಭಟನಾ ಮೆರವಣಿಗೆಯು ಜಿಲ್ಲಾ ಪಂಚಾಯಿತಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಕೆಲ ಸಮಯ ರಸ್ತೆ ತಡೆ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ನಂತರ ಬಿ.ಎಂ. ರಸ್ತೆ ಮೂಲಕ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ತೆರಳಿ ಪ್ರತಿಭಟಿಸಿದರು. ಇದೇ ವೇಳೆ ಹುಡಾ ಮಾಜಿ ಅಧ್ಯಕ್ಷ ನವೀಲೆ ಅಣ್ಣಪ್ಪ ಮಾಧ್ಯಮದೊಂದಿಗೆ ಮಾತನಾಡಿ, ಕರಾಳ ಕಾಯಿದೆಯಲ್ಲಿ ವಕ್ಫ್ ಕಾಯಿದೆ ಕೂಡ ಒಂದಾಗಿದೆ. ಶಾಂತಿ, ಸಾಮರಸ್ಯದ ನಾಡಾಗಿದ್ದ ರಾಜ್ಯವನ್ನು ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ವಕ್ಫ್ ಮಂಡಳಿಯ ಮೂಲಕ ಅತ್ಯಂತ ಆತಂಕದ ಸ್ಥಿತಿಗೆ ತಳ್ಳುತ್ತಿದೆ. ಅದರಲ್ಲೂ ಕೇಂದ್ರದ ಶ್ರೀ ನರೇಂದ್ರ ಮೋದಿ ನೇತೃತ್ವದ ಸರ್ಕಾರ ದೇಶದ ಜನತೆಯ ಹಿತದೃಷ್ಟಿಯಿಂದ ಹಾಗೂ ವಕ್ಫ್ ಮಂಡಳಿಯಲ್ಲಿ ಆಗುತ್ತಿದ್ದ ಅಕ್ರಮಗಳನ್ನು ಗಮನದಲ್ಲಿಟ್ಟುಕೊಂಡು ವಕ್ಫ್ ಕಾಯ್ದೆಗೆ ತಿದ್ದುಪಡಿ ತರುವ ವಿಧೇಯಕವನ್ನು ಮಂಡಿಸಿದೆ.
ಹುನ್ನಾರ: ಇದು ಜಂಟಿ ಪಾರ್ಲಿಮೆಂಟರಿ ಬೋರ್ಡ್‌ನ ಪರಿಶೀಲನೆಯಲ್ಲಿದೆ. ಈ ತಿದ್ದುಪಡಿ ಜಾರಿಯಾಗುವುದು ಬಹುತೇಕ ಖಚಿತವಾಗುತ್ತಿದ್ದಂತೆ ವಕ್ಫ್ ಬೋರ್ಡ್ ತನ್ನ ಕರಾಳ ಕೈಚಳಕವನ್ನು ಮಾಡುವ ಮೂಲಕ ಇಡೀ ದೇಶದಲ್ಲಿ ಸಾರ್ವಜನಿಕ ಆಸ್ತಿಯನ್ನು ಕಬಳಿಸುವ ಹುನ್ನಾರಕ್ಕೆ ಕೈಹಾಕಿದೆ. ಅದರಲ್ಲೂ ರಾಜ್ಯದಲ್ಲಿ ನಡೆಯುತ್ತಿರುವ ಇಂತಹ ಎಲ್ಲಾ ಕುಕೃತ್ಯಗಳಿಗೂ ಕಾಂಗ್ರೆಸ್ ಸರ್ಕಾರ ಹಾಗೂ ಸಚಿವ ಜಮೀರ್ ಅಹಮದ್ ನೇರವಾಗಿ ಕುಮ್ಮಕ್ಕು ಕೊಡುತ್ತಿರುವುದು ಇಡೀ ರಾಜ್ಯದ ಜನರ ಆತಂಕಕ್ಕೆ ಕಾರಣವಾಗಿದೆ ಎಂದರು.ನೋಟಿಸ್: ರಾಜ್ಯದ ವಿಜಯಪುರ ಜಿಲ್ಲೆ ಹೊನ್ನಾವಡದ ರೈತರ ೧,೫೦೦ ಎಕರೆ ಜಮೀನು ವಕ್ಫ್ ಆಸ್ತಿಯೆಂದು ಘೋಷಿಸಿ ತಹಸೀಲ್ದಾರ್‌ರಿಂದ ಪುಷ್ಠೀಕರಿಸಿ ನೋಟಿಸ್ ನೀಡಲಾಗಿದೆ. ಬೆಂಗಳೂರಿನ ವಿಧಾನಸೌಧವೂ ಸೇರಿದಂತೆ ಹಲವಾರು ಪ್ರಮುಖ ಆಸ್ತಿಗಳು ವಕ್ಫ್‌ಗೆ ಸೇರಿದೆ ಎಂದು ಮುಸ್ಲಿಂ ನಾಯಕರು ಹೇಳಿಕೆ ನೀಡುತ್ತಿದ್ದಾರೆ. ಹಾವೇರಿ ಜಿಲ್ಲೆಯಲ್ಲಿ ೧೬೪೯ ಆಸ್ತಿಗಳ ಹಕ್ಕಿಗಾಗಿ ವಕ್ಫ್ ಪ್ರತಿಪಾದಿಸುತ್ತಿದೆ. ಸವಣೂರು ತಾಲೂಕು ಕಡಕೋಳ ಗ್ರಾಮಪಂಚಾಯಿತಿ ವ್ಯಾಪ್ತಿಯ ಹನುಮಂತ ದೇವಸ್ಥಾನದ ಅತಿಕ್ರಮಣಕ್ಕೆ ವಕ್ಸ್ ಬೋರ್ಡ್ ಮುಂದಾಗಿದೆ. ಕೊಪ್ಪಳ ಜಿಲ್ಲೆಯ ಕುಕನೂರು ಪಟ್ಟಣ ಪಂಚಾಯಿತಿ ಕಾರ್ಯಾಲಯವೂ ವಕ್ಫ್ ಆಸ್ತಿ ಎಂದು ವಕ್ಫ್ ಹಕ್ಕು ಮಂಡಿಸಿದೆ. ಸರ್ಕಾರಿ ಅಧೀನದಲ್ಲಿರುವ ಆಸ್ತಿಗಳನ್ನೇ ತನ್ನದೆಂದು ವಕ್ಫ್ ಬೋರ್ಡ್ ಹೇಳುತ್ತಿದೆ ಎಂದರು.
ಉಗ್ರ ಪ್ರತಿಭಟನೆ: ಸಿದ್ದರಾಮಯ್ಯನವರು ಅಧಿಕಾರಿಗಳ ಸಭೆ ನಡೆಸಿ ಪಹಣಿ ಪತ್ರದಲ್ಲಿ ವಕ್ಫ್ ಆಸ್ತಿ ಎಂಬುದಾಗಿ ನಮೂದು ಮಾಡದಂತೆ ತಾತ್ಕಾಲಿಕವಾಗಿ ತಡೆ ಹಿಡಿದಿರುವುದು ಕೇವಲ ಚುನಾವಣೆಯ ತಂತ್ರಗಾರಿಕೆಯಾಗಿದೆ. ಬಿಜೆಪಿಯು ಈ ತಂತ್ರಗಾರಿಕೆಯನ್ನು ಒಪ್ಪುವುದಿಲ್ಲ. ಮುಂದಿನ ದಿನಗಳಲ್ಲಿ ರೈತರಿಗೆ ಇದು ಮರಣ ಶಾಸನವಾಗಿಯೇ ಮುಂದುವರಿಯಲಿದೆ. ಈ ರೀತಿಯ ಕೃತ್ಯಗಳನ್ನು ಕಾಂಗ್ರೆಸ್ ನಾಯಕರು ಹಾಗೂ ಕಾಂಗ್ರೆಸ್ ಸರಕಾರ ಮುಂದುವರೆಸಿದಲ್ಲಿ ಇಡೀ ರಾಜ್ಯದಲ್ಲಿ ಜನತೆಯನ್ನು ಒಗ್ಗೂಡಿಸಿ ಉಗ್ರ ಪ್ರತಿಭಟನೆಯನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂಬ ಎಚ್ಚರಿಕೆ ನೀಡಿದರು.ಜಮೀರ್ ಉಚ್ಛಾಟಿಸಿ: ಜಮೀರ್ ಅಹಮ್ಮದ್ ಅವರನ್ನು ಸಚಿವ ಸ್ಥಾನದಿಂದ ಕೂಡಲೇ ಉಚ್ಛಾಟಿಸಿ, ಸಿದ್ದರಾಮಯ್ಯ ಅವರು ರಾಜ್ಯದ ಜನರ ಕ್ಷಮೆ ಕೇಳಬೇಕು ಹಾಗೂ ಸ್ಪಷ್ಟನೆ ನೀಡಬೇಕು. ಇನ್ನು ಮುಂದೆ ಯಾವುದೇ ವಕ್ಫ್ ಅದಾಲತ್ ನಡೆಸದಂತೆ ಸರ್ಕಾರಿ ಆದೇಶವನ್ನು ಹೊರಡಿಸಬೇಕು ಹಾಗೂ ಇದಕ್ಕೆ ಸಂಬಂಧಿಸಿದ ಗೆಜೆಟ್ ನೋಟಿಫಿಕೇಷನ್ ಅನ್ನು ಹಿಂಪಡೆಯಬೇಕು ಹಾಗೂ ಕೇಂದ್ರ ಸರ್ಕಾರವು ತರುತ್ತಿರುವ ವಕ್ಫ್ ತಿದ್ದುಪಡಿ ಕಾಯ್ದೆಗೆ ರಾಜ್ಯ ಸರ್ಕಾರವು ಮುಂದಿನ ಅಧಿವೇಶನದಲ್ಲಿ ಒಮ್ಮತದಿಂದ ನಿರ್ಣಯವನ್ನು ಅಂಗೀಕರಿಸಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಡಬೇಕು ಎಂದು ತಮ್ಮ ಬೇಡಿಕೆಯನ್ನು ಮುಂದಿಟ್ಟರು. ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾ ಅಧ್ಯಕ್ಷ ಸಿದ್ದೇಶ್ ನಾಗೇಂದ್ರ, ಪ್ರಧಾನ ಕಾರ್ಯದರ್ಶಿ ಅಮಿತ್ ಶೆಟ್ಟಿ, ನಗರಸಭೆ ಮಾಜಿ ಅಧ್ಯಕ್ಷ ಆರ್. ಮೋಹನ್, ಪಕ್ಷದ ಮುಖಂಡರಾದ ಬಾಬು, ಎಸ್.ಡಿ. ಚಂದ್ರು, ಶೋಭನ್ ಬಾಬು, ಎನ್.ಆರ್. ಗಿರೀಶ್, ಪ್ರಸನ್ನಕುಮಾರ್, ಮಂಜು ಯೋಗೀಶ್, ಮಹಿಳಾ ಅಧ್ಯಕ್ಷೆ ನೇತ್ರಾವತಿ ಮಂಜುನಾಥ್, ಬಾಣಾವರ, ಜಯಣ್ಣ, ರಾಜಕುಮಾರ್, ಶ್ರೀಪತಿ ಅಯ್ಯಂಗಾರ್, ಗಂಗಾಧರ್, ಪುನೀತ್ ಇತರರು ಉಪಸ್ಥಿತರಿದ್ದರು.