ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಮಂಡ್ಯ ಜಿಲ್ಲೆಯ ಜನರ ನೆಮ್ಮದಿ ಕಸಿಯುವ ಕೆಲಸ ಮಾಡುತ್ತಿರುವವರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟಿಸಿದರು.ಮದ್ದೂರಿನಲ್ಲಿ ಗಣೇಶಮೂರ್ತಿ ಮೆರವಣಿಗೆ ವೇಳೆ ಕಲ್ಲು ತೂರಾಟವನ್ನು ಖಂಡಿಸಿದ ಕಾರ್ಯಕರ್ತರು, ರಾಜ್ಯ ಕಾಂಗ್ರೆಸ್ ಸರ್ಕಾರ ದುಷ್ಕರ್ಮಿಗಳಿಗೆ ಬೆಂಬಲ ನೀಡುತ್ತಿದೆ. ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದವರನ್ನೆ ರಕ್ಷಣೆ ಮಾಡಲು ಮುಂದಾಗಿದೆ ಎಂದು ದೂರಿದರು.
ಈಗಾಗಲೇ ಕೆರಗೋಡು ಮತ್ತು ನಾಗಮಂಗಲದಲ್ಲಿ ಹಿಂದೂ ವಿರೋಧಿ ಚಟುವಟಿಕೆಗಳು ನಡೆದಿವೆ. ಈಗ ನಮ್ಮ ಜಿಲ್ಲೆಯ ಮದ್ದೂರು ಪಟ್ಟಣದಲ್ಲಿಯೂ ಕೋಮು ದ್ವೇಷವನ್ನು ಬಿತ್ತುವ ಕೆಲಸವನ್ನು ಹೊರಜಿಲ್ಲೆಯಿಂದ ಬಂದವರು ಮಾಡುತ್ತಿದ್ದಾರೆ. ಕಿಡಿಗೇಡಿಗಳ ಅಟ್ಟಹಾಸಕ್ಕೆ ಸರ್ಕಾರ ಪ್ರಚೋದನೆ ನೀಡುತ್ತಿದೆ ಎಂದು ಆರೋಪಿಸಿದರು.ಮದ್ದೂರಿನಲ್ಲಿ ಕಲ್ಲು ಎಸತೆ ಪ್ರಕರಣ ಮಸೀದಿಯಿಂದ ನಡೆದಿರುವ ಹಿನ್ನೆಲೆಯಲ್ಲಿ ಮಸೀದಿ ಸಮಿತಿ ಸದಸ್ಯರನ್ನೂ ತನಿಖೆಗೆ ಒಳಪಡಿಸಬೇಕು. ದುಷ್ಕರ್ಮಿಗಳನ್ನು ಪತ್ತೆಮಾಡಿ ಸೂಕ್ತ ಕಾನೂನು ಕ್ರಮ ಜರುಗಿಬೇಕು. ಜೊತೆಗೆ ಈಗ ಕಲ್ಲು ಎಸೆದು ಬಂಧನವಾಗಿರುವ ಕಿಡಿಗೇಡಿಗಳು ಜಾಮೀನು ಪಡೆದು ಹೊರಬಾರದಂತೆ ಸೂಕ್ತ ಕಾನೂನು ಕ್ರಮ ಜರುಗಿಸಲು ತಾಲೂಕು ಬಿಜೆಪಿ ಘಟಕವು ಅಧ್ಯಕ್ಷ ನಾಗಣ್ಣ ನೇತೃತ್ವದಲ್ಲಿ ಒತ್ತಾಯಿಸಿ ಗ್ರೇಡ್-2 ತಹಸೀಲ್ದಾರ್ ಬಿ.ಆರ್.ಲೋಕೇಶ್ ಅವರಿಗೆ ಮನವಿ ಪತ್ರ ಅರ್ಪಿಸಿದರು.
ಈ ವೇಳೆ ತಾಲೂಕು ಬಿಜೆಪಿ ಮಾಜಿ ಅಧ್ಯಕ್ಷ ಅರವಿಂದ ಪರಮೇಶ್, ಕೆ.ಆರ್.ನೀಲಕಂಠ, ಎಚ್.ಬಿ.ಮಂಜುನಾಥ್ ಮತ್ತಿತರರಿದ್ದರು.ಕಲ್ಲು ತೂರಾಟ ವಿರೋಧಿಸಿ ಪ್ರತಿಭಟನೆ
ಕಿಕ್ಕೇರಿ:ಮದ್ದೂರಿನಲ್ಲಿ ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ನಡೆದ ಕಲ್ಲುತೂರಾಟ ವ್ಯವಸ್ಥಿತ ಪಿತೂರಿಯಾಗಿದೆ ಎಂದು ಬಜರಂಗದಳ ಕಾರ್ಯಕರ್ತ ಅಕ್ಷಯ್ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಹಳೆ ಬಸ್‌ನಿಲ್ದಾಣದಲ್ಲಿ ಮಂಗಳವಾರ ವಿಶ್ವಹಿಂದೂ ಪರಿಷತ್, ಬಜರಂಗದಳ, ಹಿಂದೂಪರ ಸಂಘಟನೆಯೊಂದಿಗೆ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿ, ಹಿಂದೂಗಳಿಗೆ ಹಿಂದೂ ರಾಷ್ಟ್ರದಲ್ಲಿ ರಕ್ಷಣೆ ಇಲ್ಲವಾಗಿದೆ. ಹಿಂದೂಗಳ ಮೇಲೆ ನಿರಂತರ ದಬ್ಬಾಳಿಕೆ ನಡೆಯುತ್ತಿದೆ. ಕಲ್ಲುತೂರಾಟ ನಡೆಸಿದ ತಪ್ಪಿತಸ್ಥರ ಮೇಲೆ ಕಠಿಣಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.ಬಜರಂಗದಳದ ಕಾರ್ಯಕರ್ತ ಮೊಟ್ಟೆ ಮಂಜು ಮಾತನಾಡಿ, ಹಿಂದೂಗಳು ಶಾಂತಿಪ್ರಿಯರು. ಇವರನ್ನು ಕೆಣಕುವುದು ಸರಿಯಲ್ಲ. ಹಿಂದೂ ಧರ್ಮ ಸದಾ ಶಾಂತಿ ಬಯಸಲಿದೆ. ಮದ್ದೂರಿನ ಮಸೀದಿಯಲ್ಲಿ ಕಲ್ಲುಗಳ ಶೇಖರಣೆ ಪತ್ತೆಯಾಗಿದೆ ಎಂದರೆ ಇದರ ಅರ್ಥ ಏನು ಎಂದು ಪ್ರಶ್ನಿಸಿದರು.
ಗಣೇಶ ಹಬ್ಬ, ಮೆರವಣಿಗೆ ಇದು ಸ್ವಾತಂತ್ರ್ಯಕ್ಕಾಗಿ ಸಂಘಟನೆ ರೂಪಿಸಲು ಬಾಲಗಂಗಾಧರತಿಲಕ್ ಅವರು ರೂಪಿಸಿದರು. ಇದು ತಮಗೆ ಭಾವೈಕ್ಯತೆ, ಒಗ್ಗಟ್ಟಿನ ಶಕ್ತಿ. ಇಂತಹ ಸನ್ನಿವೇಶವನ್ನು ದುಷ್ಕರ್ಮಿಗಳು ಹಿಂದೂಗಳನ್ನು ಬೆದರಿಸುವ, ಕೆಣಕುವ ತಂತ್ರವಾಗಿಸಿ ಕೊಂಡಿದ್ದಾರೆ. ಇಂತಹ ಕಿಡಿಗೇಡಿಗಳಿಗೆ ತಕ್ಕಪಾಠ ಕಲಿಸಲು ಪೊಲೀಸರು, ಸರ್ಕಾರ ಮುಂದಾಗಬೇಕು ಎಂದು ಕಿಡಿಕಾರಿದರು. ಪ್ರತಿಭಟನೆಯಲ್ಲಿ ಅಕ್ಷಯ್, ಸುಹಾಸ್ ನಾಡಿಗ್, ಫತಾರಾಂ, ಜೇಟುಸಿಂಗ್, ಹೇಮಣ್ಣ ಶೆಟ್ಟಿಮತ್ತಿತರರು ಭಾಗವಹಿಸಿದ್ದರು.