ಕನ್ನಡಪ್ರಭ ವಾರ್ತೆ ಮುಧೋಳ
ಈ ವೇಳೆ ಬಿಜೆಪಿ ಯುವ ಧುರೀಣ ಅರುಣ ಗೋವಿಂದ ಕಾರಜೋಳ ಮಾತನಾಡಿ, ಕಾಂಗ್ರೆಸ್‌ನ ದುರಾಡಳಿತದ ವಿರುದ್ಧ ಬಿಜೆಪಿ ನೇತೃತ್ವದಲ್ಲಿ ಮುಧೋಳ ನಗರಸಭೆ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಬೇಕಾದ ಪರಿಸ್ಥಿತಿ ಬಂದಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ತಾಲೂಕಿನಲ್ಲಿ ಮರಳು, ಇಸ್ಪೀಟ್, ಗಾಂಜಾ, ವೈಶ್ಯಾವಾಟಿಕೆ ದಂಧೆ ಜೋರಾಗಿ ನಡೆಯುತ್ತಿದೆ. ಸರ್ಕಾರಿ ಕಚೇರಿಗಳಲ್ಲಿ ಲಂಚಾವತಾರ ಮುಗಿಲು ಮುಟ್ಟಿದೆ. ಅಕ್ರಮ ಅಕ್ಕಿ ಸಾಗಾಟ ನಿರಂತರವಾಗಿ ನಡೆದಿದೆ. ಕಳ್ಳತನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲಿವೆ. ಇವುಗಳು ನಿಲ್ಲದಿದ್ದರೆ ಮುಂದಿನ ದಿನಮಾನದಲ್ಲಿ ಬಿಜೆಪಿಯಿಂದ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ನಗರದ ಪ್ರತಿಯೊಬ್ಬ ನಾಗರಿಕನಿಗೂ ನ್ಯಾಯ ಸಿಗುವವರೆಗೆ ಮತ್ತು ಮೂಲಸೌಕರ್ಯಗಳು ದೊರೆಯುವವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ. ಜನಸಾಮಾನ್ಯರ ಹಿತರಕ್ಷಣೆಯೇ ನಮ್ಮ ಮೊದಲ ಆದ್ಯತೆ. ಭ್ರಷ್ಟ ಮತ್ತು ನಿಷ್ಕ್ರಿಯ ಆಡಳಿತದ ವಿರುದ್ಧ ನಮ್ಮ ಧ್ವನಿ ಸದಾ ಮೊಳಗುತ್ತಿರುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಬಿಜೆಪಿ ಗ್ರಾಮೀಣ ಅಧ್ಯಕ್ಷ ಸಂಗಣ್ಣ ಕಾತರಕಿ, ನಗರ ಅಧ್ಯಕ್ಷ ಕೆ.ಎಸ್.ಹಿರೇಮಠ, ಬಿಜೆಪಿ ಮುಖಂಡ ರಾದ ಕೆ.ಆರ್.ಮಾಚಪ್ಪನವರ, ಕಲ್ಲಪ್ಪ ಸಬರದ, ಲಕ್ಷ್ಮಣ ಚಿನ್ನಣ್ಣವರ, ಸದಾಶಿವ ತೇಲಿ, ಬಸವರಾಜ ಮಳಲಿ, ಧರೆಪ್ಪ ಸಾಂಗ್ಲಿಕರ, ಭೀಮನಗೌಡ ಪಾಟೀಲ, ಡಾ.ರವಿ ನಂದಗಾಂವ, ನಾಗಪ್ಪ ಅಂಬಿ, ಸದಾಶಿವ ಇಟಕನ್ನವರ, ಶ್ರೀಶೈಲ ಚಿನ್ನಣ್ಣವರ, ಗುರುಪಾದ ಕುಳಲಿ, ಮಂಜು ಮಾನೆ, ಕಲ್ಮೇಶ ಗೋಸಾರ, ಸಂತೋಷ ಘೋರ್ಪಡೆ, ಮುಕುಂದ ನಿಂಬಾಳ್ಕರ, ರವಿ ಮಾಚಪ್ಪನವರ, ರಾಘು ಶಿಂಧೆ, ಹೊಳಬಸು ಬಟಕುರ್ಕಿ, ಎಂ.ಎಸ್.ಹಂಚಿನಾಳ, ಮಹಮ್ಮದ ಶೇಖ, ಸುಭೇದಾ ಮಾನೆ, ಕಮಲಾ ಜೇಡರ ಮುಂತಾದವರು ಮಾತನಾಡಿದರು. ಮುಧೋಳ ನಗರದಲ್ಲಿ ಬೀದಿ ದೀಪ, ಕುಡಿಯುವ ನೀರು, ಚರಂಡಿ ಸ್ವಚ್ಛತೆ ಅನೇಕ ರೀತಿಯ ನಾಗರಿಕ ಸಮಸ್ಯೆಗಳನ್ನು ನಿವಾರಿಸುವಲ್ಲಿ ನಗರಸಭೆ ಸಂಪೂರ್ಣ ವಿಫಲವಾಗಿದೆ. ಇವುಗಳನ್ನು ಶೀಘ್ರದಲ್ಲಿ ಸರಿಪಡಿಸದಿದ್ದರೆ ಮತ್ತೆ ಬಿಜೆಪಿ ವತಿಯಿಂದ ಉಗ್ರ ಹೋರಾಟ ನಡೆಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು. ಪ್ರತಿಭಟನೆಯಲ್ಲಿ ಬಿಜೆಪಿ ಹಿರಿಯರು, ಪದಾಧಿಕಾರಿಗಳು, ಅಸಂಖ್ಯಾತ ಕಾರ್ಯಕರ್ತರು ಮತ್ತು ಮುಧೋಳ ನಗರದ ಸಾರ್ವಜನಿಕರು ಸಕ್ರಿಯವಾಗಿ ಭಾಗವಹಿಸಿ ನಗರಸಭೆ ಆಡಳಿತ ಮಂಡಳಿಗೆ ಎಚ್ಚರಿಕೆ ನೀಡಿದರು. ಸಂಗೊಳ್ಳಿ ರಾಯಣ್ಣ ಸರ್ಕಲ್‌ದಿಂದ ನಗರಸಭೆ ಕಚೇರಿ ವರೆಗೆ ಹಲಗಿ ಬಾರಿಸುತ್ತಾ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಪ್ರತಿಭಟನೆ ನಡೆಸಲಾಯಿತು.ಮೂಲಸೌಕರ್ಯಗಳು ದೊರೆಯುವವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ. ನಾಗರಿಕ ಸಮಸ್ಯೆಗಳನ್ನು ನಿವಾರಿಸುವಲ್ಲಿ ನಗರಸಭೆ ಸಂಪೂರ್ಣ ವಿಫಲವಾಗಿದೆ. ಸಮಸ್ಯೆಗಳನ್ನು ಬಗೆಹರಿಸದಿದ್ದರೆ ಪಕ್ಷದಿಂದ ಉಗ್ರ ಹೋರಾಟ ಮಾಡುತ್ತೇವೆ.
- ಅರುಣ ಕಾರಜೋಳ, ಬಿಜೆಪಿ ಯುವ ಧುರೀಣ.