ಕಂಪ್ಲಿ: ಎರಡನೇ ಬೆಳೆಗೆ ನೀರು ಬಿಡುಗಡೆ ಮಾಡಲು ಹಾಗೂ ರೈತರ ನಾನಾ ಬೇಡಿಕೆಗಳನ್ನು ತಕ್ಷಣ ಈಡೇರಿಸುವಂತೆ ಆಗ್ರಹಿಸಿ, ಕಂಪ್ಲಿ ಬಿಜೆಪಿ ಮಂಡಲ ಮತ್ತು ಜಿಲ್ಲಾ ಬಿಜೆಪಿ ರೈತ ಮೋರ್ಚಾ ನೇತೃತ್ವದಲ್ಲಿ ಶುಕ್ರವಾರ ಪ್ರತಿಭಟನಾ ಮೆರವಣಿಗೆ ನಡೆಯಿತು.
ಬಿಜೆಪಿ ಮಂಡಲ ಅಧ್ಯಕ್ಷ ಸಿ.ಡಿ. ಮಹಾದೇವ ಮಾತನಾಡಿ, ತುಂಗಭದ್ರಾ ಜಲಾಶಯದಿಂದ ಎರಡನೇ ಬೆಳೆಗೆ ನೀರು ಹರಿಸುವುದು ಸರ್ಕಾರದ ಜವಾಬ್ದಾರಿ. ನೀರು ಕೊಡಲು ಸಾಧ್ಯವಿಲ್ಲ ಎಂದರೆ, ಕನಿಷ್ಠ ಎಕರೆಗೆ ₹25 ಸಾವಿರ ಪರಿಹಾರ ಧನವನ್ನು ತಕ್ಷಣ ರೈತರಿಗೆ ಬಿಡುಗಡೆ ಮಾಡಬೇಕು. ಸರ್ಕಾರ ಮೆಕ್ಕೆಜೋಳ ಖರೀದಿ ಕೇಂದ್ರವನ್ನು ತಕ್ಷಣ ತೆರೆಯಬೇಕು. ಬೇಡಿಕೆಗಳನ್ನು ಪೂರೈಸದಿದ್ದರೆ ಡಿಸಿ ಕಚೇರಿ ಮುತ್ತಿಗೆ, ತುಂಗಭದ್ರಾ ಜಲಾಶಯದ ವರೆಗೆ ಪಾದಯಾತ್ರೆ ಸೇರಿದಂತೆ ಹೋರಾಟದ ಹಂತಗಳನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.
ಜಿಲ್ಲಾ ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷ ಎನ್. ಚಂದ್ರಕಾಂತರೆಡ್ಡಿ ಮಾತನಾಡಿ, ನೀರು ಬಿಡಲು ಎಲ್ಲ ತಂತ್ರಜ್ಞಾನ, ಸಾಮರ್ಥ್ಯಗಳಿವೆ. ಡಿ. 20ರಿಂದ ಜ. 31ರ ವರೆಗೆ ನೀರು ಹರಿಸಿದರೂ ಜಲಾಶಯದಲ್ಲಿ ಸುಮಾರು 40 ಟಿಎಂಸಿ ನೀರು ಉಳಿಯುತ್ತದೆ. ಇದು ಸಂಪೂರ್ಣ ಸುರಕ್ಷಿತ ಮಟ್ಟ. ಕ್ರಸ್ಟ್ ಗೇಟ್ ಕೂಡಿಸುವ ಕಾಮಗಾರಿ ಅನುದಾನ ಬಿಡುಗಡೆ ಆಗದ ಕಾರಣದಿಂದ ನಿಧಾನಗೊಂಡಿದೆ. ಸರ್ಕಾರ ತಕ್ಷಣ ಅನುದಾನ ನೀಡಿದರೆ ಕಾರ್ಯವೇಗ ಹೆಚ್ಚಾಗುತ್ತದೆ. ಜಲಾಶಯದ ನೀರಿನ ಮಟ್ಟ ಈಗಲೇ ಬೇಡ್ ಲೆವೆಲ್‌ನಲ್ಲಿರುವುದರಿಂದ ಎಲ್.ಎಲ್ ಕಾಲುವೆ ಮತ್ತು ರಾಯಚೂರು ಕಾಲುವೆಗೆ ಬರೋಬ್ಬರಿ 140 ದಿನಗಳ ಕಾಲ ನೀರು ಹರಿಸುವುದು ಸಾಧ್ಯವಿದೆ ಎಂದರು.ಈ ಸಂದರ್ಭದಲ್ಲಿ ಮುಖಂಡರಾದ ಅಳ್ಳಳ್ಳಿ ವೀರೇಶ್, ಟಿ.ವಿ. ಸುದರ್ಶನರೆಡ್ಡಿ, ಕಡೆಮನಿ ಪಂಪಾಪತಿ, ವೈ. ಮುರಳಿಮೋಹನರೆಡ್ಡಿ, ಜಾನೂರು ಅಮರೇಗೌಡ, ತಿಮ್ಮಪ್ಪ ನಾಯಕ, ಬಿ. ದೇವೇಂದ್ರ, ಅಗಳಿ ಪಂಪಾಪತಿ, ಪ್ರಶಾಂತ್, ವಿ.ಎಲ್. ಬಾಬು, ಎಸ್.ಎಂ. ನಾಗರಾಜ, ರಮೇಶ ಹೂಗಾರ, ಹೂವಣ್ಣ, ವೆಂಕಟರಮಣ, ಬಿ. ನಾಗೇಂದ್ರ, ಇಟಗಿ ಮಂಜುನಾಥಗೌಡ, ಟಿ. ರಬಿಯಾನಿಸಾರ್, ಬಿ. ಮಂಜುಳಾ, ಎ.ಎಂ. ಲಲಿತಾ ಸೇರಿದಂತೆ ಅನೇಕ ರೈತ ಮುಖಂಡರು ಹಾಜರಿದ್ದರು.