ಕಾರಟಗಿ: ರೈತ ಸಂಕುಲ ಉಳಿವಿಗಾಗಿ ತುಂಗಭದ್ರಾ ಅಚ್ಚುಕಟ್ಟು ಪ್ರದೇಶಕ್ಕೆ ಕೂಡಲೇ ನೀರು ಹರಿಸಬೇಕು ಎಂದು ಒತ್ತಾಯಿಸಿ ಬಿಜೆಪಿ ನೇತೃತ್ವದಲ್ಲಿ ಪಟ್ಟಣದಲ್ಲಿ ಸೋಮವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಹೋರಾಟದ ನೇತೃತ್ವ ವಹಿಸಿದ್ದ ಮಾಜಿ ಶಾಸಕ ಬಸವರಾಜ ದಢೇಸೂಗೂರು ಮಾತನಾಡಿ, ಈಗಾಗಲೇ ರಾಜ್ಯ ಸರ್ಕಾರ ಮತ್ತು ಜಿಲ್ಲೆಯ ಜನಪ್ರತಿನಿಧಿಗಳ ತಪ್ಪಿನಿಂದ ರೈತರು ಒಂದು ಬೆಳೆ ಕಳೆದುಕೊಂಡಿದ್ದಾರೆ. ಭತ್ತದ ಕಣಜದಲ್ಲಿ ಕೋಲಾಹಲ ಆಗುವ ಮುನ್ನವೇ ಕೂಡಲೇ ನೀರು ಬಿಡುಗಡೆ ಮಾಡಿ ಎಂದು ಆಗ್ರಹಿಸಿದರು.
ತುಂಗಭದ್ರಾ ಜಲಾಶಯದಲ್ಲಿ ಈಗಾಗಲೇ 80 ಟಿಎಂಸಿಯಷ್ಟು ನೀರು ಸಂಗ್ರಹವಾಗಿದೆ. ಆದರೆ, ಕಾಲುವೆಗಳಿಗೆ ಮಾತ್ರ ಇನ್ನೂ ನೀರು ಹರಿಸುವ ಬಗ್ಗೆ ನಿರ್ಧಾರ ಮಾಡದೆ ರಾಜ್ಯ ಸರ್ಕಾರ ನಿದ್ದೆ ಮಾಡುತ್ತಿದೆ. ನಮ್ಮ ಆಡಳಿತಾವಧಿಯಲ್ಲಿ ಜಲಾಶಯದಲ್ಲಿ 25ರಿಂದ 30 ಟಿಎಂಸಿ ನೀರು ಇದ್ದಾಗಲೇ ರೈತರಿಗೆ ತೊಂದರೆಯಾಗಬಾರದು ಎಂದು ನೀರು ಹರಿಸಿದ ಎಷ್ಟು ಉದಾಹರಣೆಗಳನ್ನು ಕೊಡಬೇಕು ಹೇಳಿ ನಿಮಗೆ ಎಂದರು.ಜಲಾಶಯದಲ್ಲಿ ದೊಡ್ಡ ಪ್ರಮಾಣದಲ್ಲಿ ನೀರು ಇದ್ದರೂ ಕುಡಿಯಲು, ಆಂಧ್ರದ ಹೆಸರು ಹೇಳುತ್ತ ರೈತರ ಬದುಕಿನೊಂದಿಗೆ ಆಟವಾಡುತ್ತಿರುವ ನಿಮಗೆ ಒಳ್ಳೆಯದಾಗುವುದಿಲ್ಲ. ಕಳೆದ ಬಾರಿ ನೀರು ಇದ್ದಾಗಲೇ ಒಂದು ಬೆಳೆ ತಪ್ಪಿಸಿ ರೈತರ ಬದುಕನ್ನು ಕಣ್ಣೀರಲ್ಲಿ ಕೈತೊಳೆಯುವಂತೆ ಮಾಡಿರುವ ನಿಮಗೆ ಅವರ ಶಾಪ ತಟ್ಟದೇ ಇರದು. ರೈತರಿಗೆ ಯಾವ ಸಮಯದಲ್ಲಿ ನೀರು ಹರಿಸಬೇಕು ಎನ್ನುವ ಕನಿಷ್ಠ ಜ್ಞಾನವಿಲ್ಲದೇ, ಅವರ ಬದುಕಿನೊಂದಿಗೆ ಚೆಲ್ಲಾಟವಾಟಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು. ವಿಳಂಬ ಧೋರಣೆ ಕೈಬಿಟ್ಟು ನಾಳೆಯಿಂದಲೇ ನೀರು ಹರಿಸಿದರೆ ಸರಿ, ಇಲ್ಲದಿದ್ದರೆ, ನಮ್ಮ ಪಕ್ಷವು ನಿಮ್ಮ ವಿರುದ್ಧ ಬೀದಿಗಿಳಿದು ಉಗ್ರ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಬರೆದ ಮನವಿಯನ್ನು ಕಂದಾಯ ಇಲಾಖೆ ಅಧಿಕಾರಿಗಳಿಗೆ ಸಲ್ಲಿಸಲಾಯಿತು.