ಹಾನಗಲ್ಲ: ತಾಲೂಕಿನ ಬ್ಯಾಗವಾದಿ ಗ್ರಾಮದಲ್ಲಿ ಒಂದು ಕುಟುಂಬದಿಂದ ಮಹಿಳಾ ಮಾರಾಟ ಹಾಗೂ ದೌರ್ಜನ್ಯ ಪ್ರಕರಣ ಬೆಳಕಿಗೆ ಬಂದ ಮೇಲೆಯೂ ಇಲ್ಲಿನ ಶಾಸಕರು ಒಮ್ಮೆಯೂ ಭೇಟಿ ನೀಡಿ ವಾಸ್ತವ ತಿಳಿದು ಕ್ರಮಕ್ಕೆ ಮುಂದಾಗಿಲ್ಲ. ಹೆಣ್ಣುಮಕ್ಕಳ ಕಳ್ಳಸಾಗಣೆ ನಾಚಿಕೆಗೇಡಿನ ಸಂಗತಿ ಎಂದು ಹಾವೇರಿ ಜಿಲ್ಲಾ ಬಿಜೆಪಿ ಅಧ್ಯಕ್ಷ ವಿರುಪಾಕ್ಷಪ್ಪ ಬಳ್ಳಾರಿ ಕಿಡಿಕಾರಿದರು.ಮಂಗಳವಾರ ತಾಲೂಕು ಬಿಜೆಪಿ ಘಟಕದಿಂದ ಬ್ಯಾಗವಾದಿಯಲ್ಲಿ ನಡೆದ ಮಹಿಳೆಯರ ಮಾರಾಟ ಜಾಲದ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸುವಂತೆ ಒತ್ತಾಯಿಸಿ ತಹಸೀಲ್ದಾರ್ ಕಚೇರಿಯವರೆಗೆ ರ‍್ಯಾಲಿ ನಡೆಸಿ ಮನವಿ ಅರ್ಪಿಸಿದ ಸಂದರ್ಭದಲ್ಲಿ ಮಾತನಾಡಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಲಂಚ ಪಡೆದು ಆರೋಪಿಗಳನ್ನು ಬಿಡುಗಡೆ ಮಾಡಿದ ಮಾಹಿತಿ ಇದೆ. ಗ್ರಾಮದ ಜನ ಭಯಗ್ರಸ್ತರಾಗಿದ್ದಾರೆ. ಪ್ರಕರಣದ ಆರೋಪಿ ಲಕ್ಷ್ಮವ್ವ ಬೆಟಗೇರಿ ಅವರ ತಮ್ಮ ಬಂಗಾರಪ್ಪ ಹಾಗೂ ಮಗಳನ್ನು ಬಂಧಿಸುವಲ್ಲಿ ತಾಲೂಕು ಆಡಳಿತ, ಪೊಲೀಸ್ ವಿಫಲವಾಗಿದೆ ಎಂದು ಆರೋಪಿಸಿದರು.
ಅಧಿಕಾರಿಗಳು ಹಾಗೂ ಆರೋಪಿಗಳನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು. ಆಗ ಸತ್ಯಾಂಶ ತಿಳಿಯಲಿದೆ. ಕೂಡಲೆ ಪ್ರಕರಣದ ಸತ್ಯಾಸತ್ಯತೆಯನ್ನು ಶೋಧಿಸಿ ತಪ್ಪಿಸಸ್ಥರಿಗೆ ಸರಿಯಾದ ಶಿಕ್ಷೆಯಾಗಿದಿದ್ದರೆ ಹಾವೇರಿ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಎದುರು ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.ಮಾಜಿ ಶಾಸಕ ಶಿವರಾಜ ಸಜ್ಜನರ ಮಾತನಾಡಿ, ತಾಲೂಕಿನ ಜೂಜಾಟಗಳು ನಿರಾತಂಕವಾಗಿ ನಡೆಯುತ್ತಿದ್ದರೂ ತಾಲೂಕು ಆಡಳಿತ ಸುಮ್ಮನಿದೆ. ಅಪರಾಧ ಕೃತ್ಯಗಳಲ್ಲಿ ತಾಲೂಕು ರಾಷ್ಟ್ರಮಟ್ಟದ ಚರ್ಚೆಗೆ ಗುರಿಯಾಗಿದೆ. ಇಲ್ಲಿನ ಜನರಿಗೆ ರಕ್ಷಣೆ ನೀಡುವ ಬದಲು ಅಪರಾಧ ಕೃತ್ಯಗಳಿಗೆ ರಕ್ಷಣೆ ನೀಡುತ್ತಿರುವುದು ವಿಷಾದದ ಸಂಗತಿ ಎಂದರು.ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಕಾರ್ಯದರ್ಶಿ ಶೋಭಾ ನಿಸ್ಸೀಮಗೌಡರ ಮಾತನಾಡಿ, ತಾಲೂಕಿನಲ್ಲಿ ಮಹಿಳೆಯರನ್ನು ಗುರಿಯಾಗಿಸಿಕೊಂಡು ನಿರಂತರ ಅಪರಾಧ ಪ್ರಕರಣಗಳು ನಡೆಯುತ್ತಿದ್ದರೂ ಕಡಿವಾಣ ಹಾಕುವಲ್ಲಿ ತಾಲೂಕು ಆಡಳಿತ ವಿಫಲವಾಗಿದೆ. ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ, ಹೆಣ್ಣುಮಕ್ಕಳ ಮಾರಾಟ ಪ್ರಕರಣಗಳು ಇಡೀ ಮಹಿಳಾ ಸಮುದಾಯದ ಆತಂಕಕ್ಕೆ ಕಾರಣವಾಗಿವೆ ಎಂದರು.ಬ್ಯಾಗವಾದಿ ಗ್ರಾಮದ ಮಂಜುಳಾ ವಡ್ಡರ, ಮಹಿಳಾ ಮೋರ್ಚಾ ತಾಲೂಕು ಅಧ್ಯಕ್ಷೆ ಶೋಭಾ ಉಗ್ರಣ್ಣನವರ ಮಾತನಾಡಿ, ಮಹಿಳೆಗೆ ರಕ್ಷಣಾ ಭಾಗ್ಯ ಬೇಕಾಗಿದೆ. ತಾಲೂಕಿನಲ್ಲಿ ಅನೈತಿಕ ಚಟುವಟಿಕೆ ನಡೆಸುತ್ತಿರುವವರು ಹಾಗೂ ಅದಕ್ಕೆ ಬೆಂಬಲಿಸುತ್ತಿರುವವರನ್ನು ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು.ಈ ಸಂದರ್ಭದಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ಮಹೇಶ ಕಮಡೊಳ್ಳಿ, ಕಾರ್ಯದರ್ಶಿ ಸಂತೋಷ ಭಜಂತ್ರಿ, ಮುಖಂಡರಾದ ಭಾರತಿ ಜಂಬಗಿ, ಭೋಜರಾಜ ಕರೂದಿ, ಸಿದ್ದಲಿಂಗಪ್ಪ ಕಮಡೊಳ್ಳಿ, ಸಿದ್ದಲಿಂಗಪ್ಪ ಶಂಕ್ರಿಕೊಪ್ಪ, ಬಸವರಾಜ ಹಾದಿಮನಿ, ಮಾಲತೇಶ ಸೊಪ್ಪಿನ, ಕಲ್ಯಾಣಕುಮಾರ ಶೆಟ್ಟರ, ನಾಗರಾಜ ಉದಾಸಿ, ಕೃಷ್ಣ ಈಳಿಗೇರ, ಎಸ್.ಎಂ. ಕೋತಂಬರಿ, ಗವಿಸಿದ್ದಪ್ಪ ದ್ಯಾಮಣ್ಣನವರ, ರಾಜಣ್ಣ ಗೌಳಿ, ಚಂದ್ರಪ್ಪ ಹರಿಜನ, ಶಿವಲಿಂಗಪ್ಪ ತಲ್ಲೂರ, ರಾಜಣ್ಣ ಪಟ್ಟಣದ, ನಿರಂಜನ ಹೇರೂರ, ರುದ್ರೇಶ ಚನ್ನಣ್ಣನವರ, ಸುಜಾತಾ ಪಸಾರದ, ಕಾವ್ಯ ಬೆಲ್ಲದ, ಮೇಘಾ ವಿರುಪಣ್ಣನವರ, ಲಲಿತಾ ಗುಂಡೇನಹಳ್ಳಿ, ಸಚ್ಚಿನ ರಾಮಣ್ಣನವರ, ರಾಮು ಯಳ್ಳೂರ, ರಾಜು ಗೌಳಿ, ಮಹೇಶ ಹರಿಜನ, ಚಂದ್ರು ಉಗ್ರಣ್ಣನವರ, ಮಧುಮತಿ ಪೂಜಾರ, ಸರೋಜಾ ಕಮ್ಮಾರ, ಮಂಜುಳಾ ಕಾಮನಹಳ್ಳಿ, ಪ್ರೇಮಾ ಮಾಯಕ್ಕನವರ ಮೊದಲಾದವರಿದ್ದರು.ಏನಿದು ಪ್ರಕರಣ?ಹಾನಗಲ್ಲ ತಾಲೂಕಿನ ಬ್ಯಾಗವಾದಿ ಗ್ರಾಮದಲ್ಲಿ ಲಕ್ಷ್ಮವ್ವ ಎಂಬ ಮಹಿಳೆಯು ಯುವತಿಯರು, ಬಾಲಕಿಯರನ್ನು ಪುಸಲಾಯಿಸಿ ಕರೆತಂದು ಮನೆಯಲ್ಲಿ ಕೂಡಿಹಾಕಿ ಚಿತ್ರಹಿಂಸೆ ಕೊಟ್ಟು ಹಣಕ್ಕಾಗಿ ಮಾರಾಟ ಮಾಡುತ್ತಿದ್ದ ಪ್ರಕರಣ ಇತ್ತೀಚೆಗೆ ಬೆಳಕಿಗೆ ಬಂದಿದೆ.ಬ್ಯಾಗವಾದಿ ಗ್ರಾಮಸ್ಥರು ಇತ್ತೀಚೆಗೆ ಲಕ್ಷ್ಮವ್ವನ ಮನೆಗೆ ತೆರಳಿ ಪರಿಶೀಲಿಸಿದ ವೇಳೆ 14 ವರ್ಷದ ಅಪ್ರಾಪ್ತ ಬಾಲಕಿಯನ್ನು ರೂಮ್‌ನಲ್ಲಿನ ಕೂಡಿ ಹಾಕಿ ಲಕ್ಕವ್ವ ಚಿತ್ರಹಿಂಸೆ ಕೊಟ್ಟಿರುವುದು ಬೆಳಕಿಗೆ ಬಂದಿತ್ತು. ವಿಷಯ ತಿಳಿದ ಗ್ರಾಮಸ್ಥರು ಮಹಿಳೆಗೆ ಧರ್ಮದೇಟು ಕೊಟ್ಟು ಬಾಲಕಿಯನ್ನು ರಕ್ಷಿಸಿದ್ದರು. ಲಕ್ಕವ್ವ ಹುಬ್ಬಳ್ಳಿ, ದಾವಣಗೆರೆ, ಹಾವೇರಿ ಮತ್ತಿತರ ಬಸ್ ನಿಲ್ದಾಣಗಳಲ್ಲಿ ಓಡಾಡುತ್ತಿದ್ದ ಒಂಟಿ ಬಾಲಕಿಯರನ್ನು ಪರಿಚಯಿಸಿಕೊಂಡು ಅವರಿಗೆ ಉದ್ಯೋಗ ಕೊಡಿಸುವುದಾಗಿ ಪುಸಲಾಯಿಸುತ್ತಿದ್ದಳು. ನಂತರ ಬಾಲಕಿಯರನ್ನು ಮನೆಗೆ ಕರೆದುಕೊಂಡು ಬರುತ್ತಿದ್ದಳು. ಈ ಬಗ್ಗೆ ಪ್ರಶ್ನಿಸಿದ್ದಕ್ಕೆ ಗ್ರಾಮಸ್ಥರ ಜತೆ ಲಕ್ಷ್ಮವ್ವ ಜಗಳವಾಡಿದ್ದಳು. ಆಗ, ಗ್ರಾಮಸ್ಥರು ಲಕ್ಷ್ಮವ್ವನಿಗೆ ಧರ್ಮದೇಟು ನೀಡಿ ಬಾಲಕಿ ಮತ್ತು ಮಹಿಳೆಯನ್ನು ಮತ್ತೆ ಪೊಲೀಸರಿಗೆ ಒಪ್ಪಿಸಿದ್ದರು. ಆಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿ ಮಹಿಳೆಯನ್ನು ಬಂಧಿಸಲಾಗಿದೆ.