ನೇಹಾ ಹತ್ಯೆ ಖಂಡಿಸಿ ಬಿಜೆಪಿ ಬೃಹತ್‌ ಪ್ರತಿಭಟನೆ

KannadaprabhaNewsNetwork | Published : Apr 22, 2024 2:05 AM

ಸಾರಾಂಶ

ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರ ಬಹುಸಂಖ್ಯಾತರಿಗೆ ಅನ್ಯಾಯ ಮಾಡುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ನಂತರ ಈ ತರಹದ ಘಟನೆ ನಡೆಯುತ್ತಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಆರೋಪಿಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಹುಬ್ಬಳ್ಳಿಯಲ್ಲಿ ಹಿಂದು ಯುವತಿ ನೇಹಾಳ ಹತ್ಯೆ ಖಂಡಿಸಿ ಭಾನುವಾರ ಜಿಲ್ಲಾ ಬಿಜೆಪಿ ವತಿಯಿಂದ ನಗರದ ಸೀನಪ್ಪ ಶೆಟ್ಟಿ( ಗೋಪಿವೃತ್ತ) ವೃತ್ತದಲ್ಲಿ ಬೃಹತ್‌ ಪ್ರತಿಭಟನೆ ನಡೆಯಿತು.

ಪ್ರತಿಭಟನೆಯಲ್ಲಿ ಬಿಜೆಪಿ ಅಭ್ಯರ್ಥಿ, ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರ ಬಹುಸಂಖ್ಯಾತರಿಗೆ ಅನ್ಯಾಯ ಮಾಡುತ್ತಿದೆ. ನೇಹಾ ಮೇಲೆ ನಡೆದಂತಹ ಘಟನೆಯನ್ನು ತಿಳಿಗೊಳಿಸಲು ವಯಕ್ತಿಕ ಘಟನೆ ಎನ್ನುತ್ತಿದ್ದಾರೆ. ಕೊಲೆ ಮಾಡಿದವನ ಮನೆಗೆ ರಕ್ಷಣೆ ಕೊಟ್ಟಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ನಂತರ ಈ ತರಹದ ಘಟನೆ ನಡೆಯುತ್ತಿದೆ ಎಂದು ಆರೋಪಿಸಿದರು.

ಸರಿಯಾದ ರೀತಿಯಲ್ಲಿ ನೇಹಾ ಹತ್ಯೆ ತನಿಖೆ ಆಗಬೇಕು. ಹಿಂದೂಗಳ ಶಾಂತಿ ದೌರ್ಬಲ್ಯ ಅಂದುಕೊಳ್ಳಬೇಡಿ. ಹಿಂದೂಗಳ ಶಕ್ತಿಯನ್ನು ತೋರಿಸಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದರು.

ದೇವಸ್ಥಾನದ ಹಣವನ್ನು ಬೇರೆ ಯೋಜನೆಗೆ ಬಳಸಿಕೊಳ್ಳಲು ಸರ್ಕಾರ ಕಾನೂನು ತರುತ್ತಿದೆ. ಅಲ್ಪಸಂಖ್ಯಾತರ ತುಷ್ಠಿಕರಣ ಮಾಡುತ್ತಿದೆ. ಕಾಂಗ್ರೆಸ್ ದೇಶದಲ್ಲಿ ಎಲ್ಲೂ ಇಲ್ಲ. ರಾಜ್ಯದಲ್ಲಿ ಪಾಪದ ಕೂಸಾಗಿ ಅಧಿಕಾರ ಪಡೆದುಕೊಂಡಿದ್ದಾರೆ. ಐರ್ಲ್ಯಾಂಡ್ ಥರ ರಾಜ್ಯದಲ್ಲಿ ಉಳಿದುಕೊಂಡಿದ್ದಾರೆ. ಇನ್ನೂ 15 ದಿನದಲ್ಲಿ ಕೈಗೆ ಚಂಬೂ ಕೊಟ್ಟು ಜನ ಮನೆಗೆ ಕಳಿಸುತ್ತಾರೆ ಎಂದು ಹರಿಹಾಯ್ದರು,

ಶಾಸಕ ಎಸ್‌.ಎನ್‌.ಚನ್ನಬಸಪ್ಪ ಮಾತನಾಡಿ, ಹಿಂದೂ ಸಮಾಜದೊಂದಿಗೆ ಬಿಜೆಪಿ ಎಂದಿಗೂ ಇದೆ. ಹಿಂದೂಗಳು ಕಾನೂನನ್ನು ಕೈಗೆ ತೆಗೆದುಕೊಳ್ಳುತ್ತಿಲ್ಲ. ಹಿಂದೂಗಳ ಸಹನೆ ದೌರ್ಬಲ್ಯ ಅಲ್ಲ ಎಂದು ಕಿಡಿಕಾರಿದರು.

ದೇಶದಲ್ಲಿ ಗ್ಯಾರಂಟಿ ಚೆರ್ಚೆ ನಡೆಯುತ್ತಿದೆ. ಮೋದಿಯವರ ದೇಶದ ಗ್ಯಾರಂಟಿ ಬಗ್ಗೆ ಚರ್ಚೆ ನಡೆಯುತ್ತಿದೆ. ಭಯೋತ್ಪಾದಕರ ಹಾವಳಿ ಕಡಿಮೆ ಮಾಡಿದ್ದು ಮೋದಿ ಸರ್ಕಾರ. ಕಫೆ ಬ್ಲಾಸ್ಟ್ ಮಾಡಿದಾಗ ಡಿ.ಕೆ.ಶಿವಕುಮಾರ್‌ ಅವರು ವ್ಯಾಪಾರಕ್ಕಾಗಿ ಬ್ಲಾಸ್ಟ್ ಮಾಡಿದ್ದಾರೆ ಎನ್ನುತ್ತಾರೆ. ಇವರಿಗೆ ಮಾನಾ ಮರ್ಯಾದೆ ಇದೆಯಾ? ನೀವು ಕೊಡುವ ಫ್ರೀ ಅಕ್ಕಿ ನಾವು ಕೊಡುತ್ತಿರೋದು. ಕೂಲೆ, ದೌರ್ಜನ್ಯ ತಡೆಯುವ ತಾಕತ್ತು ಕಾಂಗ್ರೆಸ್ ಸರ್ಕಾರಕ್ಕಿಲ್ಲ. ಕಾಂಗ್ರೆಸ್ ಅನ್ನು ಗಡಿಪಾರು ಮಾಡಬೇಕು. ಎಲ್ಲಾ ಅನ್ಯಾಯಗಳಿಗೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್‌, ಬಿಜೆಪಿ ಮುಖಂಡರಾದ ಎಂ.ಬಿ.ಭಾನುಪ್ರಕಾಶ್‌, ವಿಧಾನ ಪರಿಷತ್‌ ಸದಸ್ಯ ಡಿ.ಎಸ್‌.ಅರುಣ್‌, ಗಿರೀಶ್‌ ಪಟೇಲ್‌, ಕೆ.ಜಿ.ಕುಮಾರಸ್ವಾಮಿ, ಜಗದೀಶ್‌ ಸೇರಿದಂತೆ ಹಲವರು ಹಾಜರಿದ್ದರು.

Share this article