ಕನ್ನಡಪ್ರಭ ವಾರ್ತೆ ಮಂಗಳೂರು
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಶಾಸಕ ಡಾ. ಭರತ್ ಶೆಟ್ಟಿ, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಸಮಾಜದಲ್ಲಿ ವಿಷಬೀಜ ಬಿತ್ತುವ ಕಾರ್ಯ ಮಾಡುತ್ತಿದೆ. ಮೂರು ದಶಕಗಳ ಹಿಂದಿನ ಪ್ರಕರಣವನ್ನು ಮರು ತನಿಖೆಗೆ ತೆಗೆದುಕೊಂಡಿರುವುದನ್ನು ಗಮನಿಸಿದಾಗ ಇದು ಸ್ಪಷ್ಟವಾಗುತ್ತದೆ. ಹಿಂದೂಗಳ ಅಸ್ಮಿತೆಯನ್ನು ತುಳಿಯುವ ಪ್ರಯತ್ನ ಮಾಡಿದರೆ ಪರಿಣಾಮ ಎದುರಿಸಬೇಕಾದೀತು ಎಂದು ಎಚ್ಚರಿಸಿದರು.
75 ವರ್ಷದ ವೃದ್ಧರನ್ನು ಬಂಧಿಸಿರುವುದ ಮೂರ್ಖತನಕ್ಕೆ ಸಾಕ್ಷಿ. ರಾಜ್ಯ ಸರ್ಕಾರ ಹಿಂದುಗಳ ತಾಳ್ಮೆ ಪರೀಕ್ಷಿಸಲು ಮುಂದಾದರೆ ತಕ್ಕ ಬೆಲೆ ತೆರಬೇಕಾದೀತು. ಕಾಂಗ್ರೆಸ್ ಸರ್ಕಾರ ಧೈರ್ಯವಿದ್ದರೆ ಕರ್ನಾಟಕದಿಂದ ಕರಸೇವೆಯಲ್ಲಿ ಭಾಗಿಯಾಗಿದ್ದ ಎಲ್ಲರ ಮೇಲೆ ಕೇಸು ಹಾಕಲಿ ಎಂದು ಅವರು ಸವಾಲು ಹಾಕಿದರು.ವಿಧಾನಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಮಾತನಾಡಿ, ಅಯೋಧ್ಯೆಯಲ್ಲಿ ರಾಮಮಂದಿರದ ಉದ್ಘಾಟನೆಗೆ ಕೋಟ್ಯಂತರ ಮಂದಿ ಕಾತರದಿಂದ ಕಾಯುತ್ತಿದ್ದಾರೆ. ಈ ನಡುವೆ ಕರಸೇವಕ ಶ್ರೀಕಾಂತ ಪೂಜಾರಿಯವರನ್ನು ಬಂಧಿಸಿರುವ ವಿಷಯ ಆಘಾತ ತಂದಿದೆ. ರಾಜ್ಯ ಸರ್ಕಾರ ಹಿಂದೂ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ. ಇದರ ವಿರುದ್ಧ ಸಮಾಜ ಒಂದಾಗಬೇಕು ಎಂದರು.
ಶ್ರೀರಾಮ ಮಂದಿರ ಉದ್ಘಾಟನೆಯೊಂದಿಗೆ ಶ್ರೀರಾಮ ದೇವರ ವಿಗ್ರಹ ಪ್ರತಿಷ್ಠಾಪನೆಯ ಕಾರ್ಯವನ್ನು ದೇಶವೇ ಎದುರು ನೋಡುತ್ತಿದೆ. ಇದರ ನಡುವೆ ಕಾಂಗ್ರೆಸ್ ತನ್ನ ಹಿಂದೂ ವಿರೋಧಿ ನೀತಿಯನ್ನು ಮತ್ತೆ ಪ್ರದರ್ಶಿಸಿದೆ. ಬಂಧಿಸಿರುವ ಹಿರಿಯ ಕರಸೇವಕರ ಮೇಲಿನ ಕೇಸನ್ನು ಹಿಂಪಡೆದು ತಕ್ಷಣ ಬಿಡುಗಡೆಗೊಳಿಸಬೇಕು. ಇಲ್ಲವಾದಲ್ಲಿ ತೀವ್ರ ಹೋರಾಟ ನಡೆಸಲಾಗುವುದು ಎಂದು ಮೇಯರ್ ಎಚ್ಚರಿಸಿದರು.
ಶ್ರೀರಾಮ ಜನ್ಮಭೂಮಿ ಆಂದೋಲನದ ಸಂದರ್ಭದಲ್ಲಿ ದಾಖಲಾದ ಸುಳ್ಳು ಪ್ರಕರಣಗಳನ್ನು ಕಾಂಗ್ರೆಸ್ ಸರ್ಕಾರವು ಹೇರಲು ಪಿತೂರಿ ನಡೆಸುತ್ತಿದೆ. 30-35 ವರ್ಷಗಳಷ್ಟು ಹಳೆಯ ಪ್ರಕರಣಗಳಲ್ಲಿನ ಅನೇಕರು ಸಾವನ್ನಪ್ಪಿದ್ದಾರೆ ಮತ್ತು ಉಳಿದವರು 70ರಿಂದ 80 ವರ್ಷದೊಳಗಿನವರು. ಈ ಪ್ರಕರಣವನ್ನು ಮರುತನಿಖೆ ನಡೆಸುವ ಮೂಲಕ ರಾಮಭಕ್ತರನ್ನು ಹಿಂಸಿಸಲಾಗತ್ತಿದೆ. ಶ್ರೀರಾಮ ಜನ್ಮಭೂಮಿ ಆಂದೋಲನದ ಸಂದರ್ಭದಲ್ಲಿ ದಾಖಲಾಗಿದ್ದ ಸುಳ್ಳು ಪ್ರಕರಣಗಳು ಹೆಚ್ಚಿನವು ಬೋಗಸ್ ಆಗಿದ್ದರಿಂದ ಹಿಂದಿನ ಕೆಲವು ಸರ್ಕಾರಗಳು ಅವುಗಳನ್ನು ರದ್ದುಗೊಳಿಸಿದವು. ಇಂದು ಆ ಕೇಸನ್ನು ಮರುತನಿಖೆ ನಡೆಸಲು ಆದೇಶಿಸಿ ಕಾರ್ಯಕರ್ತರನ್ನು ಮತ್ತೆ ಬಂಧಿಸಲಾಗುತ್ತಿದೆ. ಇದು ಖಂಡನೀಯ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.