ಬಿಜೆಪಿ, ಆರೆಸ್ಸೆಸ್‌ ಸಂವಿಧಾನ ವಿರೋಧಿಗಳು: ಸಿದ್ದು

KannadaprabhaNewsNetwork |  
Published : Nov 27, 2024, 01:04 AM IST
ಸಿದ್ದರಾಮಯ್ಯ | Kannada Prabha

ಸಾರಾಂಶ

ಬಿಜೆಪಿ ಮತ್ತು ಆರೆಸ್ಸೆಸ್‌ನವರು ಸಾಮಾಜಿಕ ನ್ಯಾಯದ ವಿರೋಧಿಗಳು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬಿಜೆಪಿ ಮತ್ತು ಆರೆಸ್ಸೆಸ್‌ನವರು ಸಾಮಾಜಿಕ ನ್ಯಾಯದ ವಿರೋಧಿಗಳು. ಮನುಷ್ಯರನ್ನು ಜಾತಿ-ಧರ್ಮದ ಹೆಸರಲ್ಲಿ ವಿಂಗಡಿಸುವ ಮನುಸ್ಮೃತಿಯ ಪರವಾಗಿರುವವರು. ಹಾಗಾಗಿಯೇ ಅವರು ಸಂವಿಧಾನವನ್ನು ವಿರೋಧಿಸುವ, ಬದಲಾವಣೆ ಮಾಡುವ ಮಾತು, ಪ್ರಯತ್ನ ನಡೆಸುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ವಿಧಾನಸೌಧ, ಅಂಬೇಡ್ಕರ್‌ ಭವನ ಹಾಗೂ ಕೆಪಿಸಿಸಿ ಕಚೇರಿಯಲ್ಲಿ ಮಂಗಳವಾರ ಪ್ರತ್ಯೇಕವಾಗಿ ನಡೆದ ಸಂವಿಧಾನ ದಿನದ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಮಾತನಾಡಿದ ಅವರು, ಆರೆಸ್ಸೆಸ್‌, ಬಿಜೆಪಿ ವಿರುದ್ಧ ತೀವ್ರ ವಾಕ್‌ಪ್ರಹಾರ ನಡೆಸಿದರು.

ಸಂವಿಧಾನ ಅಂಗೀಕಾರವಾಗುವಾಗ ಅದನ್ನು ಬಿಜೆಪಿಯ ಮಾತೃಸಂಸ್ಥೆ ಆರೆಸ್ಸೆಸ್‌ನ ಅಧ್ಯಕ್ಷರಾಗಿದ್ದ ಗೋಳ್ವಾಳ್ಕರ್‌, ಹಿಂದೂ ಮಹಾಸಭಾದ ಅಧ್ಯಕ್ಷ ಸಾವರ್ಕರ್‌ ವಿರೋಧಿಸಿದ್ದರು. ವಾಜಪೇಯಿ ಪ್ರಧಾನಿಯಾಗಿದ್ದಾಗ ಸಂವಿಧಾನ ಪುನರ್ ರಚನೆಗೆ ವೆಂಕಟಾಚಲಯ್ಯ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಿದ್ದರು. ಇಷ್ಟೆಲ್ಲ ವೈರುಧ್ಯಗಳು ನಮ್ಮ ನಡುವೆ ಇದೆ. ಸಂವಿಧಾನವನ್ನು ಪ್ರೀತಿಸುವವರ ನಡುವೆ ವಿರೋಧಿಸುವವರೂ ನಮ್ಮ ನಡುವೆ ಇದ್ದಾರೆ. ಅವರ ಬಗ್ಗೆ ಎಚ್ಚರದಿಂದಿರಬೇಕು ಎಂದರು.

ಇನ್ನು, ಈಗಿನ ಮೋದಿ ಅಧಿಕಾರಕ್ಕೆ ಬಂದರೆ ಅವರ ಹಿಂದಿನ ಸರ್ಕಾರದ ಸಂಪುಟದಲ್ಲಿ ಸಚಿವರಾಗಿದ್ದ ಅನಂತಕುಮಾರ್‌ ಹೆಗಡೆ ನಾವು ಅಧಿಕಾರಕ್ಕೆ ಬಂದಿದ್ದೇ ಸಂವಿಧಾನ ಬದಲಿಸಲು ಎಂದು ಹೇಳಿದ್ದರು. ಅವರ ವಿರುದ್ಧ ಕ್ರಮ ಕೈಗೊಂಡರಾ? ಅವರನ್ನು ಸಂಪುಟದಿಂದ ಕೈಬಿಟ್ಟರಾ? ಅಂದಮೇಲೆ, ಮೋದಿ ಒಪ್ಪಿಗೆ ಇದ್ದೇ ಅನಂತ್‌ ಹೆಗಡೆ ಅಂತಹ ಹೇಳಿಕ ಕೊಟ್ಟರು ಎಂದಾಯಿತಲ್ಲ. ಪಾರ್ಲಿಮೆಂಟ್‌ ಪ್ರವೇಶಿಸುವಾಗ ಸಂಸತ್ತಿನ ಮೆಟ್ಟಿಲಿಗೆ, ಸಂವಿಧಾನಕ್ಕೆ ನಮಸ್ಕಾರ ಮಾಡಿದ ಮೋದಿ ಅವರು ಹೇಳುವುದೇ ಒಂದು ಮಾಡುವುದೇ ಇನ್ನೊಂದು ಎಂದು ಕಿಡಿ ಕಾರಿದರು.

ಪ್ರಜಾಪ್ರಭುತ್ವ, ಸಂವಿಧಾನ ಉಳಿದರೆ ನಾವಿಲ್ಲ ಉಳಿಯಲು ಸಾಧ್ಯ. ನಾನು ಮುಖ್ಯಮಂತ್ರಿ ಆಗಿದ್ದೇ ಸಂವಿಧಾನದಿಂದ. ಎರಡು ಬಾರಿ ಮುಖ್ಯಮಂತ್ರಿ ಆಗಿದ್ದೇನೆ ಎಂದು ಕೆಲವರಿಗೆ ಹೊಟ್ಟೆಯುರಿ ಇದೆ. ಆದರೆ, ಜನರ ಆಶೀರ್ವಾದ ಇರುವವರೆಗೆ ನನ್ನನ್ನು ಯಾರೂ ಏನೂ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.

ಸಂವಿಧಾನ ಜಾರಿಗೂ ಮೊದಲು ಅಲಿಖಿತ ಸಂವಿಧಾನ ಇತ್ತು.‌ ಅಸಮಾನತೆ, ತಾರತಮ್ಯ, ಶೂದ್ರರನ್ನು ಕೀಳಾಗಿ ಕಾಣುವ, ಶಿಕ್ಷಣ, ಸಂಪತ್ತಿನ ಸಮಾನತೆಯೇ ಇಲ್ಲದ ವಿಚಾರಗಳು ಅಂದು ಸಮಾಜದಲ್ಲಿದ್ದವು. ಅದನ್ನು ಮನುಸ್ಮೃತಿ ಎಂದು ನಾವು ಕರೆಯುತ್ತೇವೆ. ಇಂತ ಅಲಿಖಿತ ಸಂವಿಧಾನವನ್ನು ಆರೆಸ್ಸೆಸ್‌ನವರು ಪೋಷಣೆ ಮಾಡುತ್ತಿದ್ದರು. ಅಂಬೇಡ್ಕರ್‌ ಅವರು ಹಿಂದೂ ಕೋಡ್‌ ತಂದು ಮಹಿಳೆಯರಿಗೆ ಸಮಾನ ಅವಕಾಶ ಕೊಡಲು ಮುಂದಾದಾಗ ಇದರಿಂದ ಪುರುಷರು ಖಿನ್ನತೆಗೆ ಒಳಗಾಗುತ್ತಾರೆ ಎಂದು ಕೆಲವರು ಹೇಳಿದರು. ಇದನ್ನೆಲ್ಲ ನಾವು ಸೂಕ್ಷ್ಮವಾಗಿ ತಿಳಿದುಕೊಳ್ಳಬೇಕು. ಹೀಗಾಗಿಯೇ ಅಂಬೇಡ್ಕರ್‌ ಅವರು ಇತಿಹಾಸ ಅರಿತುಕೊಳ್ಳದೆ ಭವಿಷ್ಯ ರೂಪಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರು ಎಂದರು.

ಬ್ರಿಟೀಷರ ಅವಧಿಯಲ್ಲೇ ಹುಟ್ಟಿದ ಆರೆಸ್ಸೆಸ್‌ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಲಿಲ್ಲ. ಆರೆಸ್ಸೆಸ್‌ನ ಒಬ್ಬರೂ ದೇಶಕ್ಕಾಗಿ ಹೋರಾಡಿಲ್ಲ, ಒಬ್ಬನೂ ದೇಶಕ್ಕಾಗಿ ಪ್ರಾಣಕೊಟ್ಟಿಲ್ಲ. ಈಗ ದೇಶಭಕ್ತಿಯ ಪಾಠ ಮಾಡುತ್ತಿದ್ದಾರೆ. ಮನುಷ್ಯರನ್ನು ಜಾತಿ-ಧರ್ಮದ ಹೆಸರಲ್ಲಿ ವಿಂಗಡಿಸೋದು ದೇವರ ಕೆಲಸ ಅಲ್ಲ. ಅಂತಹದ್ದೆಲ್ಲವನ್ನೂ ಮಾಡಿದ್ದು ಮನುಸ್ಮೃತಿ. ಆರೆಸ್ಸೆಸ್‌, ಬಿಜೆಪಿ ಮನುಸ್ಮೃತಿಯಲ್ಲಿ ನಂಬಿಕೆ ಇಟ್ಟುಕೊಂಡಿದೆ. ಆದರೆ, ಕಾಂಗ್ರೆಸ್‌ ಸಂವಿಧಾನದಲ್ಲಿ ನಂಬಿಕೆ ಇಟ್ಟುಕೊಂಡಿದೆ. ಇದೇ ಎರಡೂ ಪಕ್ಷಕ್ಕೂ ಇರುವ ವ್ಯತ್ಯಾಸ ಎಂದರು.

PREV

Recommended Stories

2028ರ ವರೆಗೂ ಸಿದ್ದರಾಮಯ್ಯ ಸಿಎಂ : ಸಚಿವ ಜಮೀರ್ ಅಹ್ಮದ್
ನಾವು ಆರೆಸ್ಸೆಸ್‌ ಗುಲಾಮರಲ್ಲ : ಪ್ರಿಯಾಂಕ್‌ ಖರ್ಗೆ