ಕನ್ನಡಪ್ರಭ ವಾರ್ತೆ ವಿಧಾನಸಭೆ
ರಾಜ್ಯಪಾಲರ ಭಾಷಣದ ವಂದನಾ ನಿರ್ಣಯ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿ, ಸರ್ಕಾರದ ಆಡಳಿತ ವೈಫಲ್ಯ, ಭ್ರಷ್ಟಾಚಾರ, ಕಾನೂನು ಸುವ್ಯವಸ್ಥೆ, ಅನುದಾನ ಕೊರತೆ ಸೇರಿ ಅನೇಕ ವಿಚಾರಗಳನ್ನಿಟ್ಟುಕೊಂಡು ತೀವ್ರ ವಾಗ್ದಾಳಿ ನಡೆಸಿದರು.
ಆತ್ಮಾವಲೋಕನ ಮಾಡಿಕೊಳ್ಳಿ:ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ನಿಮ್ಮ ಸರ್ಕಾರ ಹೇಗಿದೆ ಎಂದು ನೋಡಬೇಕೆಂದರೆ ಒಮ್ಮೆ ಮಾರುವೇಶದಲ್ಲಿ ಎಂಎಸ್ ಬಿಲ್ಡಿಂಗ್, ವಿಕಾಸಸೌಧದಲ್ಲಿ ಸುತ್ತಾಡಿ. ತಮ್ಮ ಹಿಂಬಾಲಕರನ್ನು ಜಿಲ್ಲೆ, ತಾಲೂಕು ಕಚೇರಿಗಳಿಗೆ ಕಳುಹಿಸಿ. ಗುತ್ತಿಗೆದಾರರ ಸಂಘ, ಅಬಕಾರಿ ಲೈಸೆನ್ಸ್‌ದಾರರ ಸಂಘದವರು ನಿಮ್ಮ ಸರ್ಕಾರಕ್ಕೆ 65 ಪರ್ಸೆಂಟ್ ಸರ್ಕಾರದ ಬಿರುದು ನೀಡಿದ್ದಾರೆ. ಗ್ಯಾರಂಟಿಗಳೇ ದೊಡ್ಡ ಸಾಧನೆ ಎಂದು ಹೇಳುತ್ತಿರುವ ನೀವು ಉಳಿದ ಯಾವ ಅಭಿವೃದ್ಧಿ ಕಾರ್ಯಗಳಿಗೂ ಹಣ ನೀಡುತ್ತಿಲ್ಲ. ಇದನ್ನು ನಿಮ್ಮ ಶಾಸಕರೇ ಹೇಳುತ್ತಿದ್ದಾರೆ. ನಿಮ್ಮ ಸರ್ಕಾರದ ಆಡಳಿತ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಜಿ ರಾಮ್ ಜಿ ಕಾಯ್ದೆ ಸಂಬಂಧ ಕೇಂದ್ರ ಸರ್ಕಾರದ ಜೊತೆ, ರಾಜ್ಯಪಾಲರೊಂದಿಗೆ ಸಂಘರ್ಷ ನಡೆಸುತ್ತಿದ್ದೀರಿ. ನಿಮ್ಮದ ಜನಪರ ಸರ್ಕಾರವೇ ಎಂದು ಆತ್ಮಾವಲೋನ ಮಾಡಿಕೊಂಡು ಉತ್ತರ ಕೊಡಿ ಎಂದು ಆಗ್ರಹಿಸಿದರು.
ಸಿದ್ದರಾಮಯ್ಯ ಅವರು ತಮ್ಮ ಮಂತ್ರಿಗಳಿಗೆ ಶಾಸನ ಸಭೆಗೆ ಬರಬೇಕೆಂದು ಪತ್ರ ಬರೆಯುವಷ್ಟು, ಜನಪ್ರತಿನಿಧಿಗಳ ಕರೆಯನ್ನು ಅಧಿಕಾರಿಗಳು ಸ್ವೀಕರಿಸಬೇಕೆಂದು ಮುಖ್ಯಕಾರ್ಯದರ್ಶಿ ಅವರಿಂದ ಸುತ್ತೋಲೆ ಹೊರಡಿಸುವಷ್ಟು, ತಮ್ಮ ಆಪ್ತ ರಾಜಣ್ಣ ಅವರನ್ನು ಸಂಪುಟದಲ್ಲಿ ಉಳಿಸಿಕೊಳ್ಳಲಾಗದಷ್ಟು, ಕೋಗಿಲು ಅಕ್ರಮ ಒತ್ತುವರಿ ಪ್ರಕರಣದಲ್ಲಿ ಸ್ವತಂತ್ರ ನಿರ್ಧಾರ ಕೈಗೊಳ್ಳದಷ್ಟು ಅಸಹಾಯಕರಾಗುತ್ತಾರೆಂದು ರಾಜ್ಯದ ಜನ ನಿರೀಕ್ಷಿಸಿರಲಿಲ್ಲ ಎಂದರು.