ಕನ್ನಡಪ್ರಭ ವಾರ್ತೆ ಅಹಮದಬಾದ್
ಗುಜರಾತ್‌ನ ಅಹಮದಾಬಾದ್‌ನ ಸರ್ದಾರ್ ಸ್ಮಾರಕದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ) ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಮುಕ್ತ ಹಾಗೂ ನ್ಯಾಯಯುತ ಚುನಾವಣೆಗೆ ಹೆಸರಾಗಿದ್ದ ಚುನಾವಣಾ ಆಯೋಗವು ಇಂದು ಆಡಳಿತ ಪಕ್ಷದವರ ಹಣ ಮತ್ತು ಮಾಧ್ಯಮಗಳ ದುರ್ಬಳಕೆಯಿಂದಾಗಿ ಅಸಹಾಯಕವಾಗಿ ನಿಂತಿದೆ. ಜಾರಿ ನಿರ್ದೇಶನಾಲಯ, ಸಿಬಿಐ ಮತ್ತು ಆದಾಯ ತೆರಿಗೆ ಇಲಾಖೆಗಳನ್ನು ಶಸ್ತ್ರಗಳಂತೆ ಬಳಸಲಾಗುತ್ತಿದೆ. ಇವುಗಳಿಂದ ವಿರೋಧ ಪಕ್ಷದವರನ್ನು ದ್ವೇಷದಿಂದ ಹಿಮ್ಮೆಟ್ಟಿಸಲಾಗುತ್ತಿದ್ದು, ಬಿಜೆಪಿಯ ಅಧಿಕಾರದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ಕಡೆಗಣಿಸುವ ಜೊತೆಗೆ ಪುರಸ್ಕರಿಸಲಾಗುತ್ತಿದೆ ಎಂದರು.ಸಂಸತ್ ಅನ್ನು ಕೇವಲ ರಬ್ಬರ್ ಸ್ಟ್ಯಾಂಪ್‌ನ ಮಟ್ಟಕ್ಕೆ ಇಳಿಸಲಾಗಿದೆ. ಯಾವುದೇ ಚರ್ಚೆಗಳಿಲ್ಲದೇ ಕಾನೂನುಗಳನ್ನು ಜಾರಿಗೊಳಿಸಲಾಗುತ್ತಿದೆ. ಭಿನ್ನಾಭಿಪ್ರಾಯಗಳನ್ನು ಹತ್ತಿಕ್ಕಿ, ಧ್ವನಿಗಳನ್ನು ಮೌನಗೊಳಿಸಲಾಗುತ್ತಿದೆ ಮತ್ತು ಸತ್ಯವನ್ನು ಅಪೇಕ್ಷಿಸಿದ್ದಕ್ಕಾಗಿ ವಿರೋಧಪಕ್ಷದ ಸಂಸದರನ್ನು ಅಮಾನತ್ತುಗೊಳಿಸಲಾಗುತ್ತಿದೆ. ಬಿಜೆಪಿಯೇತರ ರಾಜ್ಯಸರ್ಕಾರಗಳನ್ನು ಅಭದ್ರಗೊಳಿಸಲು ಸಂವಿಧಾನ ಬದ್ಧವಾಗಿ ಪಕ್ಷಾತೀತವಾಗಿರಬೇಕಾದ ರಾಜ್ಯಪಾಲರುಗಳನ್ನೂ ರಾಜಕೀಯ ಏಜೆಂಟ್ಸ್ ಗಳಾಗಿ ಬಳಸಲಾಗುತ್ತಿದೆ. ಇದು ಪ್ರಜಾಪ್ರಭುತ್ವವಲ್ಲ. ಧ್ವಜದ ಹೆಸರಿನಲ್ಲಿರುವ ನಿರಂಕುಶ ಪ್ರಭುತ್ವ ಎಂದು ಬಿಜೆಪಿ ವಿರುದ್ಧ ವಗ್ದಾಳಿ ನಡೆಸಿದರು.
ಭಾರತ ಕೇವಲ ಒಂದೇ ದನಿಯ ನೆಲವಲ್ಲ-ಇದು ಹಲವು ಸ್ವರಗಳ ಮೇಳವಾಗಿದೆ. ಕರ್ನಾಟಕದ ಜಾನಪದ ಗೀತೆಗಳಿಂದ ತಮಿಳುನಾಡಿನ ಕಾವ್ಯಗಳವರೆಗೆ, ಬಂಗಾಳದ ಹಬ್ಬಗಳಿಂದ ಗುಜರಾತಿನ ಸಂಪ್ರದಾಯದವರೆಗೆ- ನಮ್ಮ ದೇಶದ ಏಕತೆಯು ವಿವಿಧತೆಯಲ್ಲಿ ಅರಳಿದೆ. ಆದರೆ ಇಂದು, ಒಂದು ದೇಶ, ಒಂದು ಭಾಷೆ, ಒಂದು ಸಂಸ್ಕೃತಿ, ಒಂದು ಪಕ್ಷ ಎನ್ನುತ್ತಾ, ಭಾರತವನ್ನು ಸಂಕುಚಿತತೆಯತ್ತ ನೂಕುವ ಅಪಾಯಕಾರಿ ಪ್ರಯತ್ನ ನಡೆಯುತ್ತಿದೆ.ರಾಜ್ಯಗಳು ಹೇಗೆ ವ್ಯಯಿಸಬೇಕು, ನಾಗರಿಕರು ಏನು ನುಡಿಯಬೇಕು ಮತ್ತು ಯಾರು ಒಳಪಡಲಿದ್ದಾರೆ ಎಂಬುದನ್ನು ನಿಯಂತ್ರಿಸಲಿ ಇಚ್ಛಿಸುವ ಬಿಜೆಪಿಯು ಆರ್ಥಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಪ್ರಾಬಲ್ಯದ ಅಪಾಯಕಾರಿ ತ್ರಿಕೋನವನ್ನು ಹೇರುತ್ತಿದೆ. ಇದು ಒಕ್ಕೂಟ ವ್ಯವಸ್ಥೆಯಲ್ಲ. ಇದು ಬಲವಂತದ ಏಕರೂಪತೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕನ್ನಡ, ತಮಿಳು, ಗುಜರಾತಿ, ತೆಲುಗು, ಅಸ್ಸಾಮಿ, ಪಂಜಾಬಿ ಹಾಗೂ ಇನ್ನಿತರ ಬಾಷೆಗಳು ಕೇವಲ ಭಾಷಾ ಮಾಧ್ಯಮವಾಗಿರದೇ, ಶತಮಾನಗಳ ಜ್ಞಾನದ, ಅಸ್ಮಿತೆಯ ಹಾಗೂ ಪ್ರತಿಷ್ಠೆಯ ಭಂಡಾರವಾಗಿದೆ. ಇವುಗಳನ್ನು, ಕಡೆಗಣಿಸಿದರೆ, ನಮ್ಮ ಜನರ ಆತ್ಮಾಭಿಮಾನವನ್ನು ಘಾಸಿಗೊಳಿಸಿದಂತೆ.
ಬಿಜೆಪಿಯು ವಿಭಜನೆ ಮತ್ತು ಬೇರೆಡೆಗೆ ಗಮನ ಸೆಳೆಯುವ ತಂತ್ರಗಳ ಮೇಲೆಯೇ ವಿಜೃಂಭಿಸಿದರೆ, ಕರ್ನಾಟಕದಲ್ಲಿ ಕಾಂಗ್ರೆಸ್ ನಿಜವಾದ ಆಡಳಿತ ಎಂದರೇನು ಎಂದು ಇಡೀ ದೇಶಕ್ಕೇ ನಿರೂಪಿಸುತ್ತಿದೆ. ಜನರಿಗೆ ಪ್ರಾಶಸ್ತ್ಯ ನೀಡುವ ಮಾದರಿಯೊಂದನ್ನು ನಾವು ರೂಪಿಸಿದ್ದೇವೆ.
ಇಂದಿರಾ ಕ್ಯಾಂಟೀನ್ ಗಳ ಮೂಲಕ ಹಸಿವು ನೀಗುವ ಯತ್ನವನ್ನು ಮಾಡಿದ್ದೇವೆ. ಸಮಾಜದ ಕಟ್ಟಕಡೆಯ ಮನುಷ್ಯನೂ ಹಸಿವೆಯಿಂದಿರದೆ ಹೊಟ್ಟೆ ತುಂಬ ಊಟ ಮಾಡುವ ಅವಕಾಶವನ್ನು ಕಲ್ಪಿಸಲಾಗಿದೆ. ಸಮರ್ಥ ಆಡಳಿತದೊಂದಿಗೆ ಸ್ಪಂದನಶೀಲ ಆಡಳಿತವೂ ನಮ್ಮದಾಗಿದೆ. ವೋಟ್ ಬ್ಯಾಂಕ್ ರಾಜಕಾರಣವನ್ನು ಬದಿಗಿಟ್ಟು ಸಮಾಜದಲ್ಲಿನ ದಲಿತ, ಹಿಂದುಳಿದ, ಅಲ್ಪಸಂಖ್ಯಾತ, ಮಹಿಳೆಯರು, ಯುವ ಜನತೆ, ರೈತರು, ಕಾರ್ಮಿಕರು ಹೀಗೆ ಸಮಾಜದ ಎಲ್ಲಾ ವರ್ಗಗಳಿಗೂ ನ್ಯಾಯ ಒದಗಿಸುವ ದಿಸೆಯಲ್ಲಿ ಸ್ಪಂದಿಸುತ್ತಿದೆ. ಇದು ಕರ್ನಾಟಕದ ಮಾದರಿ- ಬಿಜೆಪಿಯ ದ್ವೇಷಪೂರಿತ, ಗಗನಮುಖಿ ಬೆಲೆಗಳ, ಪೊಳ್ಳು ಆಶ್ವಾಸನೆಗಳ ರಾಜಕೀಯದಾಟಕ್ಕೆ ಕರ್ನಾಟಕದ ಶಕ್ತಿಯುತ ಪ್ರತಿರೋಧವಾಗಿದೆ ಎಂದರು.