ಸೋಮವಾರ, ಉಡುಪಿ ಹಾಗೂ ಕಾಪು ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಸಮಿತಿಯ ವತಿಯಿಂದ ಉಡುಪಿ ತಾಲೂಕು ಕಚೇರಿ ಎದುರು ಬಿಜೆಪಿ ಸುಳ್ಳು ಪ್ರತಿಭಟನೆ ವಿರುದ್ಧ ಕಾಂಗ್ರೆಸ್ ಪಕ್ಷದ ಸತ್ಯದರ್ಶನ ಪ್ರತಿಭಟನೆ ನಡೆಯಿತು.
ಕನ್ನಡಪ್ರಭ ವಾರ್ತೆ ಉಡುಪಿ ಬಿಜೆಪಿ ತನ್ನ ಆಡಳಿತದ ಅವಧಿಯಲ್ಲಿ ಮಾಡಿದ ತಪ್ಪುಗಳನ್ನು ಕಾಂಗ್ರೆಸ್ ಸರ್ಕಾರದ ಮೇಲೆ ಹೊರಿಸುತ್ತಿದೆ. 2014ರಲ್ಲಿ ಮಂಜೂರಾದ ತೀರ್ಥಹಳ್ಳಿ - ಮಲ್ಪೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಇನ್ನೂ ಸಂಪೂರ್ಣ ಆಗಿಲ್ಲ. ಇಂದ್ರಾಳಿ ಸೇತುವೆ ಕಾಮಗಾರಿ ಇನ್ನೂ ಮುಗಿದಿಲ್ಲ. ಪ್ರಧಾನಿ ಮೋದಿ ಹೇಳಿದ ನಿರುದ್ಯೋಗ ಸಮಸ್ಯೆ ಪರಿಹಾರವೇ ಆಗಿಲ್ಲ. ಆ ಬಗ್ಗೆ ಬಿಜೆಪಿಯವರು ಚರ್ಚೆ ಮಾಡುತ್ತಿಲ್ಲ, ದೂಷಣೆ ಮಾಡುವುದು ಮತ್ತು ಸುಳ್ಳು ಹೇಳಿ ಜನರನ್ನು ಮರಳು ಮಾಡುವುದು ಬಿಜೆಪಿಯ ಕಾರ್ಯತಂತ್ರವಾಗಿದೆ ಎಂದು ಮಾಜಿ ಸಚಿವ ಕೆ.ಜಯಪ್ರಕಾಶ್ ಹೆಗ್ಡೆ ಆರೋಪಿಸಿದ್ದಾರೆ.ಸೋಮವಾರ, ಉಡುಪಿ ಹಾಗೂ ಕಾಪು ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಸಮಿತಿಯ ವತಿಯಿಂದ ಉಡುಪಿ ತಾಲೂಕು ಕಚೇರಿ ಎದುರು ಹಮ್ಮಿಕೊಳ್ಳಲಾದ ಬಿಜೆಪಿ ಸುಳ್ಳು ಪ್ರತಿಭಟನೆ ವಿರುದ್ಧ ಕಾಂಗ್ರೆಸ್ ಪಕ್ಷದ ಸತ್ಯದರ್ಶನ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿ, ಬಿಜೆಪಿ ಗ್ರಾ.ಪಂ.ಗಳ ಎದುರು ಪ್ರತಿಭಟನೆ ಮಾಡಿ, ಕಾಂಗ್ರೆಸ್ ಸರ್ಕಾರದ ಬಗ್ಗೆ ಸುಳ್ಳು ಪ್ರಚಾರ ಮಾಡಿ ಜನರನ್ನು ದಾರಿ ತಪ್ಪಿಸುತ್ತಿದೆ ಮತ್ತು ತನ್ನ ಸುಳ್ಳು ಹರಡಲು ಸರ್ಕಾರದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳನ್ನೇ ಬಳಸಿಕೊಳ್ಳುತ್ತಿದೆ. ಅವರಿಗೆ ಬಿಜೆಪಿ ಈ ಗ್ಯಾರಂಟಿ ಯೋಜನೆಗಳಿಗೆ ವಿರೋಧ ವ್ಯಕ್ತಪಡಿಸುತ್ತಿರುವುದು ಗೊತ್ತೇ ಇಲ್ಲ. ನರೇಂದ್ರ ಮೋದಿ ಚುನಾವಣೆ ಪೂರ್ವದಲ್ಲಿ ಹೇಳಿದ ಯಾವುದೇ ಭರವಸೆಯನ್ನು ಅಧಿಕಾರಕ್ಕೆ ಬಂದ ನಂತರ ಅನುಷ್ಠಾನಕ್ಕೆ ತರಲಿಲ್ಲ. ಕೇವಲ ಪ್ರಚಾರಕ್ಕಾಗಿಯೇ ಕಾರ್ಯಕ್ರಮಗಳನ್ನು ಮಾಡುತ್ತಾರೆ ಎಂದರು.ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್, ಕಾಂಗ್ರೆಸ್ ಮುಖಂಡರಾದ ಅಮೃತ್ ಶೆಣೈ ಮಾತನಾಡಿದರು. ಕೆಪಿಸಿಸಿ ಉಪಾಧ್ಯಕ್ಷ ಎಂ.ಎ.ಗಫೂರ್, ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್, ಬ್ರಹ್ಮವಾರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಘವೇಂದ್ರ ಶೆಟ್ಟಿ ಕರ್ಜೆ, ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೈ.ಸುಕುಮಾರ್, ಮುಖಂಡರಾದ ವರೋನಿಕಾ ಕರ್ನೆಲಿಯೋ, ಅಣ್ಣಯ್ಯ ಶೇರಿಗಾರ್, ಹರೀಶ್ ಕಿಣಿ, ಪ್ರಖ್ಯಾತ್ ಶೆಟ್ಟಿ, ಸುರೇಶ್ ಶೆಟ್ಟಿ ಬನ್ನಂಜೆ, ಅಮೃತಾ ಕೃಷ್ಣಮೂರ್ತಿ, ಶರ್ಫುದ್ದೀನ್ ಶೇಕ್, ಗಮೇಶ್ ನೆರ್ಗಿ ಮತ್ತಿತರರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.