ಕನ್ನಡಪ್ರಭ ವಾರ್ತೆ ಬೆಂಗಳೂರು
ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಕಾಲ್ತುಳಿತ ಅವಘಡದ ಹೊಣೆಯನ್ನು ನಾವು ಹೊತ್ತಿದ್ದೇವೆ. ಬೆಂಗಳೂರು ನಗರ ಪೊಲೀಸ್ ಆಯುಕ್ತರು ಸೇರಿ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿದ್ದೇವೆ. ರಾಜ್ಯ ಗುಪ್ತಚರ ಇಲಾಖೆಯ ಮುಖ್ಯಸ್ಥರನ್ನು ವರ್ಗಾವಣೆ ಮಾಡಿದ್ದೇವೆ. ನನ್ನ ರಾಜಕೀಯ ಕಾರ್ಯದರ್ಶಿಯನ್ನು ಸೇವೆಯಿಂದ ಬಿಡುಗಡೆಗೊಳಿಸಿದ್ದೇನೆ. ಸಮಗ್ರ ತನಿಖೆಗೆ ನಿವೃತ್ತ ನ್ಯಾಯಾಧೀಶರಾದ ಜಾನ್ ಮೈಕೆಲ್ ಕುನ್ಹಾ ಅವರ ನೇತೃತ್ವದಲ್ಲಿ ಏಕಸದಸ್ಯ ಆಯೋಗವನ್ನೂ ರಚಿಸಿದ್ದೇವೆ. ಇಷ್ಟಾದರೂ ಪ್ರತಿಭಟನೆ ನಡೆಸುತ್ತಿರುವ ಬಿಜೆಪಿಗರ ನಡೆ ರಾಜಕೀಯ ಪ್ರೇರಿತ ಎಂದು ದೂರಿದ್ದಾರೆ.
ಹೆಣಗಳ ಮೇಲಿನ ರಾಜಕೀಯ ಬಿಜೆಪಿಗೆ ಹೊಸದಲ್ಲ. ಅಪಘಾತ, ಹತ್ಯೆ, ದೌರ್ಜನ್ಯಗಳು ನಡೆದ ತಕ್ಷಣ ಸತ್ತ ಜೀವಗಳನ್ನು ಹುಡುಕಿಕೊಂಡು ಹೋಗುವ ರಣಹದ್ದುಗಳಂತೆ ಎರಗಿ ಬೀಳುವುದು ಅವರ ರಕ್ತದಲ್ಲಿಯೇ ಇದೆ. ತಮ್ಮ ಊಟದೆಲೆಯ ಮೇಲೆ ಆನೆ ಸತ್ತುಬಿದ್ದಿದ್ದರೂ ಎದುರಿಗಿದ್ದವರ ಎಲೆ ಮೇಲೆ ಸತ್ತು ಬಿದ್ದ ನೊಣದ ಕಡೆ ಬೊಟ್ಟು ಮಾಡುವುದು ಬಿಜೆಪಿಯ ಹಳೆಯ ಚಾಳಿ. ಬಿಜೆಪಿ ಆಡಳಿತದ ರಾಜ್ಯಗಳಲ್ಲಿನ ದುರಂತಗಳಲ್ಲಿ ಅವರು ಯಾಕೆ ರಾಜೀನಾಮೆ ನೀಡಿಲ್ಲ. ಇವರಿಗೆ ನಮ್ಮ ಬಗ್ಗೆ ಮಾತನಾಡುವ ನೈತಿಕತೆ ಎಲ್ಲಿದೆ? ಎಂದು ಪ್ರಶ್ನಿಸಿದರು.ಮೋದಿ ಯಾಕೆ ರಾಜೀನಾಮೆ ನೀಡಿಲ್ಲ?:
ಪಹಲ್ಗಾಮ್ ಹತ್ಯಾಕಾಂಡದಲ್ಲಿ 26 ಭಾರತೀಯರು ಪ್ರಾಣ ಕಳೆದುಕೊಂಡರು. ಈ ಘಟನೆಯ ಹೊಣೆ ಹೊತ್ತು ಪ್ರಧಾನಿ ರಾಜೀನಾಮೆ ನೀಡಬೇಕೆಂದು ನಮ್ಮ ಪಕ್ಷ ಒತ್ತಾಯಿಸಿಲ್ಲ. ಈ ಘಟನೆಯ ಚರ್ಚೆಗೆ ಕನಿಷ್ಠ ಸಂಸತ್ ವಿಶೇಷ ಅಧಿವೇಶನ ಕರೆಯಲೂ ಪ್ರಧಾನಿಯವರು ಒಪ್ಪಿಕೊಂಡಿಲ್ಲ. ಇಲ್ಲಿಯವರೆಗೆ 26 ಅಮಾಯಕರ ಸಾವಿಗೆ ಕಾರಣರಾದ ನಾಲ್ಕು ಮಂದಿ ದುರುಳರು ಯಾರು ಎನ್ನುವುದನ್ನು ಪತ್ತೆ ಹಚ್ಚಲಾಗಿಲ್ಲ. ಇದು ಕೇಂದ್ರ ಸರ್ಕಾರದ ವೈಫಲ್ಯ ಅಲ್ಲವೇ? ಈ ವೈಫಲ್ಯದ ಹೊಣೆಯನ್ನು ಯಾರು ಹೊರಬೇಕು? ಪಂಡಿತ ಜವಾಹರಲಾಲ್ ನೆಹರೂ ಅವರಾ? ರಾಹುಲ್ ಗಾಂಧಿಯವರಾ? ಇಲ್ಲವೇ ಪ್ರಧಾನಿ ನರೇಂದ್ರ ಮೋದಿಯವರೇ? ಎಂದು ಪ್ರಶ್ನಿಸಿದ್ದಾರೆ.
ಈಶಾನ್ಯ ಭಾಗದ ಮಣಿಪುರ ಹಿಂಸೆಯ ಬೆಂಕಿಯಲ್ಲಿ ಹೊತ್ತಿ ಉರಿಯುತ್ತಿದೆ. ನೂರಾರು ಮಂದಿ ಸಾವಿಗೀಡಾಗಿದ್ದರೂ ಆ ರಾಜ್ಯದ ಬಿಜೆಪಿ ಮುಖ್ಯಮಂತ್ರಿ ಬಿರೇನ್ ಸಿಂಗ್ 20 ತಿಂಗಳ ಕಾಲ ಕುರ್ಚಿಗೆ ಅಂಟಿ ಕೂತಿದ್ದರು. ಕೊನೆಗೂ ಸುಪ್ರೀಂ ಕೋರ್ಟ್ ಚಾಟಿ ಬೀಸಿದ ನಂತರ ರಾಜೀನಾಮೆ ನೀಡಿದ್ದರು. ಈಗಲೂ ಅಲ್ಲಿ ಹಿಂಸಾಚಾರ ಮುಂದುವರಿದಿದೆ. ಇದರ ಹೊಣೆಯನ್ನು ಕೇಂದ್ರ ಗೃಹಸಚಿವರು ಹೊರುವುದು ಬೇಡವೇ? ಎಂದು ಕೇಳಿದ್ದಾರೆ.ಗುಜರಾತ್‌ನ ಮೊರ್ಬಿ ಸೇತುವೆ ಕುಸಿದು ಬಿದ್ದು 140 ಮಂದಿ ಮೃತಪಟ್ಟಿದ್ದರು. ಜನವರಿ ತಿಂಗಳಲ್ಲಿ ಮಹಾಕುಂಭಮೇಳದಲ್ಲಿ 30 ಯಾತ್ರಿಕರು ಪ್ರಾಣ ಕಳೆದುಕೊಂಡರು. ಆ ರಾಜ್ಯಗಳಲ್ಲಿ ಮುಖ್ಯಮಂತ್ರಿಯಾಗಿರುವವರು ಬಿಜೆಪಿಗೆ ಸೇರಿದವರಲ್ಲವೇ? ಹೀಗಿರುವಾಗ ನಮ್ಮ ರಾಜೀನಾಮೆ ಕೇಳಲು ರಾಜ್ಯದ ಬಿಜೆಪಿ ನಾಯಕರಿಗೆ ಯಾವ ನೈತಿಕತೆ ಇದೆ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.