ಪೆನ್‌ಡ್ರೈವ್‌ ಹಿಂದಿರೋದು ಬಿಜೆಪಿ ಅಗ್ರಗಣ್ಯ ನಾಯಕ, ಮಾಜಿ ಶಾಸಕ: ಪಿ.ರವಿಕುಮಾರ್‌

KannadaprabhaNewsNetwork |  
Published : May 08, 2024, 01:09 AM IST
ಪಿ.ರವಿಕುಮಾರ್‌ | Kannada Prabha

ಸಾರಾಂಶ

ಬಿಜೆಪಿ ಮಾಜಿ ಶಾಸಕ ಶಿವರಾಮೇಗೌಡರನ್ನು ಡಿ.ಕೆ.ಶಿವಕುಮಾರ್‌ ಬಳಿಗೆ ಕಳುಹಿಸಿ ಬಿಜೆಪಿ ಮಾಜಿ ಶಾಸಕನೇ ಏಕೆ ಷಡ್ಯಂತ್ರ ರೂಪಿಸಿರಬಾರದು. ದೇವರಾಜೇಗೌಡ ಬಿಜೆಪಿ ಪರಾಜಿತ ಅಭ್ಯರ್ಥಿ. ಆತ ಡಿ.ಕೆ.ಶಿವಕುಮಾರ್‌ ಭೇಟಿಯಾಗಬೇಕು ಎಂದಿದ್ದಾನೆ. ಅದರಂತೆ ಶಿವರಾಮೇಗೌಡರ ಮೂಲಕ ಡಿ.ಕೆ.ಶಿವಕುಮಾರ್‌ ಫೋನ್‌ನಲ್ಲಿ ಮಾತನಾಡಿದ್ದಾರೆ. ಕುತೂಹಲಕ್ಕೆ ಪೆನ್‌ಡ್ರೈವ್‌ ಬಗ್ಗೆ ಡಿ.ಕೆ.ಶಿವಕುಮಾರ್‌ ಕೇಳಿರಬಹುದೇ ವಿನಃ ಅವರೇ ಏನೂ ಬಿಟ್ಟಿಲ್ವಲ್ಲ.

ಕನ್ನಡಪ್ರಭ ವಾರ್ತೆ ಮಂಡ್ಯ

ಪೆನ್‌ಡ್ರೈವ್‌ಗೆ ಬಂಡವಾಳ ಹೂಡಿರುವುದು ಮತ್ತು ಅದನ್ನು ವ್ಯವಸ್ಥಿತವಾಗಿ ಹಂಚಿಕೆ ಮಾಡಿರುವುದರ ಹಿಂದೆ ಬಿಜೆಪಿಯ ಅಗ್ರಗಣ್ಯ ನಾಯಕರೊಬ್ಬರು ಮತ್ತು ಹಾಸನದ ಮಾಜಿ ಶಾಸಕರ ಕೈವಾಡವಿದೆ. ದೇವೇಗೌಡರ ಕುಟುಂಬವನ್ನು ರಾಜಕೀಯವಾಗಿ ಮುಗಿಸುವುದನ್ನು ಬಿಜೆಪಿ ಗುರಿಯಾಗಿಸಿಕೊಂಡಿದೆ ಎಂದು ಶಾಸಕ ಪಿ.ರವಿಕುಮಾರ್‌ ಹೊಸ ಬಾಂಬ್‌ ಸಿಡಿಸಿದ್ದಾರೆ.

ದೇವರಾಜೇಗೌಡರ ವ್ಯಾಟ್ಸಾಪ್‌ ಕಾಲ್‌ ರೆಕಾರ್ಡ್ಸ್ ಮತ್ತು ಕಾಲ್‌ ಲೊಕೇಷನ್‌ ತೆಗೆದರೆ ಇದರ ಹಿಂದೆ ಯಾರಿದ್ದಾರೆ ಎನ್ನುವುದು ಸ್ಪಷ್ಟವಾಗಿ ತಿಳಿಯುತ್ತದೆ ಎಂದು ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಿಳಿಸಿದರು.

ಬಿಜೆಪಿ ಮಾಜಿ ಶಾಸಕ ಶಿವರಾಮೇಗೌಡರನ್ನು ಡಿ.ಕೆ.ಶಿವಕುಮಾರ್‌ ಬಳಿಗೆ ಕಳುಹಿಸಿ ಬಿಜೆಪಿ ಮಾಜಿ ಶಾಸಕನೇ ಏಕೆ ಷಡ್ಯಂತ್ರ ರೂಪಿಸಿರಬಾರದು. ದೇವರಾಜೇಗೌಡ ಬಿಜೆಪಿ ಪರಾಜಿತ ಅಭ್ಯರ್ಥಿ. ಆತ ಡಿ.ಕೆ.ಶಿವಕುಮಾರ್‌ ಭೇಟಿಯಾಗಬೇಕು ಎಂದಿದ್ದಾನೆ. ಅದರಂತೆ ಶಿವರಾಮೇಗೌಡರ ಮೂಲಕ ಡಿ.ಕೆ.ಶಿವಕುಮಾರ್‌ ಫೋನ್‌ನಲ್ಲಿ ಮಾತನಾಡಿದ್ದಾರೆ. ಕುತೂಹಲಕ್ಕೆ ಪೆನ್‌ಡ್ರೈವ್‌ ಬಗ್ಗೆ ಡಿ.ಕೆ.ಶಿವಕುಮಾರ್‌ ಕೇಳಿರಬಹುದೇ ವಿನಃ ಅವರೇ ಏನೂ ಬಿಟ್ಟಿಲ್ವಲ್ಲ ಎಂದು ಸಮರ್ಥಿಸಿಕೊಂಡರು.

ಪ್ರಜ್ವಲ್‌ ಈ ಹಿಂದೆ ಕೋರ್ಟ್‌ಗೆ ಹೋಗಿ ತಡೆಯಾಜ್ಞೆ ತಂದಾಗ ಇದೇ ದೇವರಾಜೇಗೌಡ ತಡೆಯಾಜ್ಞೆ ತೆರವಾಗಲಿ, ನಿಂದೆಲ್ಲಾ ನನ್ನತ್ರ ಇದೆ. ಬಿಡ್ತೇನೆ ಅಂತ ಹೇಳಿದ್ದರು. ಅದಕ್ಕಾಗಿಯೇ ಅವರ ವ್ಯಾಟ್ಸಾಪ್‌ ಕಾಲ್‌ ರೆಕಾರ್ಡ್ಸ್ ಮತ್ತು ಕಾಲ್‌ ಲೊಕೇಷನ್‌ ಪರಿಶೀಲಿಸಬೇಕು ಎನ್ನುತ್ತಿದ್ದೇನೆ ಎಂದರು.

ಪೆನ್‌ಡ್ರೈವ್‌ನ ಹಿಂದೆ ಬಿಜೆಪಿಯ ಅತ್ಯುತ್ತಮ ಸ್ಥಾನದಲ್ಲಿರುವ ನಾಯಕ ಮತ್ತು ಹಾಸನದ ಮಾಜಿ ಶಾಸಕರ ಕೈವಾಡವಿದೆ. ಇವರೇ ಕುಳಿತು ಕೋಟ್ಯಂತರ ರು. ಬಂಡವಾಳ ಹೂಡಿ ಪೆನ್‌ಡ್ರೈವ್‌ ಹೊರತಂದಿರೋದು. ಹಂಚಿರುವುದೂ ಅವರೇ. ಯಾರು ರೇವಣ್ಣ ಕುಟುಂಬದ ರಾಜಕೀಯ ವಿರೋಧಿಯಾಗಿರುವರೋ ಅವರೇ ಷಡ್ಯಂತ್ರ ರೂಪಿಸಿದ್ದಾರೆ. ಅದನ್ನು ಡಿ.ಕೆ.ಶಿವಕುಮಾರ್‌ ತಲೆಗೆ ಕಟ್ಟುವ ಪ್ರಯತ್ನ ನಡೆಸಿದ್ದಾರೆ. ವಿಡಿಯೋ ಮಾಡಿದ್ದು ಯಾರು, ಅದನ್ನು ಕಾಪಿ ಮಾಡಿದ್ದು ಯಾರು. ಹಂಚಿದ್ದು ಯಾರು. ಎಲ್ಲವೂ ಜೆಡಿಎಸ್‌-ಬಿಜೆಪಿಯವರೇ. ನಮಗೂ ಅದಕ್ಕೂ ಏನು ಸಂಬಂಧ ಇದೆ ಎಂದು ಪ್ರಶ್ನಿಸಿದರು.

ದೇವೇರಾಜೇಗೌಡನೇ ಪೆನ್‌ಡ್ರೈವ್‌ ನನ್ನತ್ರ ಇದೆ ಅಂತ ಊರಿಗೆಲ್ಲಾ ಹೇಳಿಕೊಂಡು ಬಂದಿದ್ದಾನೆ. ನಾವೇನಾದ್ರೂ ವೀಡಿಯೋ ಮಾಡಿದ್ವಾ, ಕಾಪಿ ಮಾಡಿದ್ವಾ. ಹಂಚಿದ್ವಾ. ದೇವೇಗೌಡರ ಕುಟುಂಬವನ್ನು ರಾಜಕೀಯವಾಗಿ ಮುಗಿಸುವ ಒಳಸಂಚಿನೊಂದಿಗೆ ಬಿಜೆಪಿ ಪೆನ್‌ಡ್ರೈವ್‌ವನ್ನು ಅಸ್ತ್ರವನ್ನಾಗಿಸಿಕೊಂಡು ಪ್ರಯೋಗಿಸಿದೆ ಎಂದರು.

ಮಿತ್ರಪಕ್ಷವನ್ನು ಬಲಿ ತೆಗೆದುಕೊಳ್ಳುವುದೇ ಬಿಜೆಪಿ ಸ್ಟೈಲ್‌. ಅವರ ಬಲವನ್ನು ವೃದ್ಧಿಸಿಕೊಳ್ಳುವುದು ಬಿಜೆಪಿ ಗುರಿ. ಬಿಹಾರ, ಒರಿಸ್ಸಾದಲ್ಲೂ ಮಿತ್ರಪಕ್ಷಗಳನ್ನು ಮುಗಿಸಿದ್ದಾಗಿದೆ. ಈಗ ಜೆಡಿಎಸ್‌ನ್ನು ಟಾರ್ಗೆಟ್‌ ಮಾಡಿಕೊಂಡಿದೆ. ರಾಜ್ಯದಲ್ಲಿ ಜೆಡಿಎಸ್‌ ಮುಗಿಸುವುದರಿಂದ ಬಿಜೆಪಿಗೆ ಲಾಭವಿದೆ. ಅದಕ್ಕಾಗಿ ಜೆಡಿಎಸ್‌ನ್ನು ನಮ್ಮ ವಿರುದ್ಧ ಎತ್ತಿಕಟ್ಟುತ್ತಿದ್ದಾರೆ. ಜೊತೆಗಿಟ್ಟುಕೊಂಡೇ ಷಡ್ಯಂತ್ರ ರೂಪಿಸಿ ಅದನ್ನು ಕಾಂಗ್ರೆಸ್‌ ಮೇಲೆ ಗೂಬೆ ಕೂರಿಸುತ್ತಿದೆ ಎಂದು ಆರೋಪಿಸಿದರು.

ನಾನು ಬಹಿರಂಗವಾಗಿ ಯಾರ ಹೆಸರನ್ನೂ ಹೇಳುವುದಿಲ್ಲ. ತನಿಖೆ ಎಸ್‌ಐಟಿ ಹಂತದಲ್ಲಿದೆ. ಎಸ್‌ಐಟಿ ಅಧಿಕಾರಿಗಳು ಕೇಳಿದರೆ ಹೇಳುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಪಿ.ರವಿಕುಮಾರ್‌, ಪ್ರಕರಣವನ್ನು ಸಿಬಿಐಗೆ ಒತ್ತಾಯಿಸುವ ಕುರಿತು ಜೆಡಿಎಸ್‌ ಪ್ರತಿಭಟನೆ ಮಾಡುತ್ತಿರುವ ಬಗ್ಗೆ ಕೇಳಿದಾಗ, ಕರ್ನಾಟಕ ಪೊಲೀಸ್‌ ಇಡೀ ದೇಶಕ್ಕೆ ಮಾದರಿಯಾಗಿದೆ. ಎಸ್‌ಐಟಿ ಅಧಿಕಾರಿಗಳು ದಕ್ಷರಿದ್ದಾರೆ. ಅವರೆಲ್ಲವನ್ನೂ ಕೂಲಂಕುಷ ತನಿಖೆ ಮಾಡಿ ಜನರ ಮುಂದಿಡುತ್ತಾರೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ