ಅ.೭ರಂದು ಮನ್‌ಮುಲ್ ಮುತ್ತಿಗೆ ಕಾರ್ಯಕ್ರಮವನ್ನು ಬಿಜೆಪಿಯಿಂದ ಹಮ್ಮಿಕೊಳ್ಳಲಾಗಿದೆ. ಪ್ರಕರಣವನ್ನು ಮುಚ್ಚಿಹಾಕುವ ಅಥವಾ ಸಿಬಿಐ ತನಿಖೆಗೆ ಒಪ್ಪಿಸುವ ನಿರ್ಧಾರ ಮಾಡದಿದ್ದರೆ ಮಂಡ್ಯದಿಂದ ಗೆಜ್ಜಲಗೆರೆವರೆಗೆ ಮನ್‌ಮುಲ್ ಚಲೋ ಪಾದಯಾತ್ರೆ ನಡೆಸಲಾಗುವುದು.
ಕನ್ನಡಪ್ರಭ ವಾರ್ತೆ ಮಂಡ್ಯ
ಮನ್‌ಮುಲ್‌ನಲ್ಲಿ ನಡೆದಿರುವ ಹಾಲಿನಪುಡಿ ಕಲಬೆರಕೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು. ಈ ಕೃತ್ಯದಲ್ಲಿ ಯಾವುದೇ ಪಕ್ಷದ ನಿರ್ದೇಶಕರು ಭಾಗಿಯಾಗಿದ್ದರೂ ಜೈಲಿಗಟ್ಟಬೇಕು. ಪ್ರಕರಣದ ನಿಷ್ಪಕ್ಷಪಾತ ತನಿಖೆ ಪೊಲೀಸರಿಂದ ಸಾಧ್ಯವಿಲ್ಲ. ರಾಜ್ಯ ಸರ್ಕಾರದ ಯಾವುದೇ ತನಿಖಾ ಸಂಸ್ಥೆ ಮೇಲೆ ನಂಬಿಕೆಯೂ ಇಲ್ಲದಿರುವುದರಿಂದ ಸಿಬಿಐಗೆ ಒಪ್ಪಿಸುವುದೇ ಸೂಕ್ತ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್ ಒತ್ತಾಯಿಸಿದರು.
ಅ.೭ರಂದು ಮನ್‌ಮುಲ್ ಮುತ್ತಿಗೆ ಕಾರ್ಯಕ್ರಮವನ್ನು ಬಿಜೆಪಿಯಿಂದ ಹಮ್ಮಿಕೊಳ್ಳಲಾಗಿದೆ. ಪ್ರಕರಣವನ್ನು ಮುಚ್ಚಿಹಾಕುವ ಅಥವಾ ಸಿಬಿಐ ತನಿಖೆಗೆ ಒಪ್ಪಿಸುವ ನಿರ್ಧಾರ ಮಾಡದಿದ್ದರೆ ಮಂಡ್ಯದಿಂದ ಗೆಜ್ಜಲಗೆರೆವರೆಗೆ ಮನ್‌ಮುಲ್ ಚಲೋ ಪಾದಯಾತ್ರೆ ನಡೆಸಲಾಗುವುದು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪ್ರಕರಣ ಸಂಬಂಧ ಪೊಲೀಸರಿಂದ ಪಾರದರ್ಶಕ ತನಿಖೆ ನಡೆಯುತ್ತಿಲ್ಲ. ರಾಜಕೀಯ ಒತ್ತಡಗಳಿಗೆ ಮಣಿದು ಹಳ್ಳ ಹಿಡಿಸುವ ಪ್ರಯತ್ನ ನಡೆಸಿದ್ದಾರೆ. ಪ್ರಕರಣವನ್ನು ಸಿಬಿಐಗೆ ವಹಿಸುವ ಸಂಬಂಧ ಕೇಂದ್ರ ಸಚಿವ ಅಮಿತ್ ಶಾ ಅವರಿಗೂ ರಾಜ್ಯ ನಾಯಕರ ಮೂಲಕ ಪತ್ರ ಬರೆಯಲಾಗುವುದು ಎಂದರು.
ನಾವು ಆಡಳಿತ ಮಂಡಳಿ ಸೇರಿದಂತೆ ಯಾರ ಪರವಾಗಿಯೂ ಇಲ್ಲ. ನಮ್ಮ ಪಕ್ಷದ ನಿರ್ದೇಶಕರು ಭಾಗಿಯಾಗಿದ್ದರೂ ಅವರನ್ನು ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ. ಯಾರ್ಯಾರು ಹಗರಣದಲ್ಲಿ ಭಾಗಿಯಾಗಿರುವರೋ ಅವರೆಲ್ಲರನ್ನೂ ಜೈಲಿಗೆ ಹಾಕಿ ಕಾನೂನು ಕ್ರಮ ಜರುಗಿಸಲಿ ಎಂದು ಆಗ್ರಹಪಡಿಸಿದರು.
ಗೋಷ್ಠಿಯಲ್ಲಿ ಮಾಜಿ ಸಚಿವ ಕೆ.ಸಿ.ನಾರಾಯಣಗೌಡ, ಅಶೋಕ್, ಪ್ರಸನ್ನ, ಸಿ.ಟಿ.ಮಂಜುನಾಥ, ಪುಟ್ಟಸ್ವಾಮಿಗೌಡ, ಮನು, ಅಶೋಕ್ ಜಯರಾಂ ಇದ್ದರು.
ಕೇವಲ ೩ ಕೋಟಿ ರು. ಹಗರಣ ಅಷ್ಟೇ: ಎಸ್.ಪಿ.ಸ್ವಾಮಿ
ಮನ್‌ಮುಲ್‌ನಲ್ಲಿ ನಡೆದಿರುವುದು ನೂರಾರು ಕೋಟಿ ರು. ಹಗರಣವೇನಲ್ಲ. ಕೇವಲ ೩ ಕೋಟಿ ರು. ಹಗರಣವಷ್ಟೇ. ಇದರಲ್ಲಿ ಆಡಳಿತ ಮಂಡಳಿ ಪಾತ್ರವಿಲ್ಲ ಎಂದು ಒಕ್ಕೂಟದ ನಿರ್ದೇಶಕ ಎಸ್.ಪಿ.ಸ್ವಾಮಿ ಪ್ರಕರಣದ ಬಗ್ಗೆ ಲಘುವಾಗಿ ಮಾತನಾಡಿದ ಪ್ರಸಂಗ ಸುದ್ದಿಗೋಷ್ಠಿಯಲ್ಲಿ ನಡೆಯಿತು.
ಹಗರಣದಲ್ಲಿ ಅಧಿಕಾರಿಗಳ ಪಾತ್ರವಿರುವುದಾಗಿ ಹೇಳಿ ಆಡಳಿತ ಮಂಡಳಿ ಪರ ನಿಲ್ಲುವ ಪ್ರಯತ್ನ ನಡೆಸಿದರು. ಆ ಸಮಯಕ್ಕೆ ಪತ್ರಕರ್ತರು ಇನ್ನೂ ತನಿಖೆ ಆರಂಭಿಕ ಹಂತದಲ್ಲಿದೆ. ಆಗಲೇ ಆಡಳಿತ ಮಂಡಳಿ ಪಾತ್ರವಿಲ್ಲ. ಇದು ಕೇವಲ ೩ ಕೋಟಿ ರು. ಹಗರಣ ಎಂದೇಳುತ್ತಿದ್ದ ಎಸ್.ಪಿ.ಸ್ವಾಮಿ ವಿರುದ್ಧ ತಿರುಗಿಬಿದ್ದರು. ಹಾಲಿಗೆ ಒಂದು ತೊಟ್ಟು ವಿಷ ಹಾಕಿದರೂ ಅದು ವಿಷವೇ. ೩ ಕೋಟಿ ರು. ಹಗರಣವಾಗಲೀ, ನೂರು ಕೋಟಿ ರು. ಹಗರಣವಾಗಲಿ. ತನಿಖೆಗೆ ಮುನ್ನವೇ ಆಡಳಿತಮಂಡಳಿ ಪಾತ್ರವಿಲ್ಲವೆಂದು ಏಕಾಏಕಿ ಹೇಗೆ ಹೇಳುತ್ತೀರಿ ಎಂದು ಖಾರವಾಗಿಯೇ ಪ್ರಶ್ನಿಸಿದಾಗ ತಬ್ಬಿಬ್ಬಾದರು.
ಆಗ ಜಿಲ್ಲಾಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್ ಮಧ್ಯಪ್ರವೇಶಿಸಿ, ಮನ್‌ಮುಲ್ ಆಡಳಿತ ಮಂಡಳಿಯನ್ನು ನಾವೇನು ಸಮರ್ಥಿಸಿಕೊಳ್ಳುತ್ತಿಲ್ಲ. ಯಾರೇ ತಪ್ಪು ಮಾಡಿದ್ದರೂ ಅದು ತಪ್ಪೇ. ಆಡಳಿತ ಮಂಡಳಿಯಲ್ಲಿ ಯಾವ ಪಕ್ಷದವರೇ ಭಾಗಿಯಾಗಿದ್ದರೂ ಅವರಿಗೆ ಶಿಕ್ಷೆಯಾಗಬೇಕು ಎಂದು ಹೇಳುವ ಮೂಲಕ ತೆರೆ ಎಳೆದರು.
ಎಸ್.ಪಿ.ಸ್ವಾಮಿ ಪರವಾಗಿ ಕ್ಷಮೆ ಕೇಳಿದ ಕೆ.ನಾರಾಯಣಗೌಡ
ಹಾಲಿನಪುಡಿ ಕಲಬೆರಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಲಘುವಾಗಿ ಮಾತನಾಡಿದ ಒಕ್ಕೂಟದ ನಿರ್ದೇಶಕ ಎಸ್.ಪಿ.ಸ್ವಾಮಿ ಪರವಾಗಿ ಮಾಜಿ ಸಚಿವ ಕೆ.ನಾರಾಯಣಗೌಡ ಅವರು ಕ್ಷಮೆಯಾಚಿಸಿದರು.
ಸ್ವಾಮಿ ಅವರಿಗೆ ನಾವು ಸಪೋರ್ಟ್ ಮಾಡುತ್ತಿಲ್ಲ. ಇದರಲ್ಲಿ ಯಾರನ್ನೂ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ. ಆಡಳಿತ ಮಂಡಳಿ ಪಾತ್ರವಿರುವುದು ಕಂಡುಬಂದರೆ ಒದ್ದು ಒಳಗೆ ಹಾಕಲಿ. ಸ್ವಾಮಿ ಅವರ ಪರವಾಗಿ ನಾನು ಕ್ಷಮೆ ಕೇಳುತ್ತೇನೆ ಎಂದರು.
ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲೇಬೇಕು. ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕು. ಇಲ್ಲದಿದ್ದರೆ ದೊಡ್ಡಮಟ್ಟದ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.