ಮುಂಡಗೋಡ:ಚುನಾವಣೆ ಸಮೀಪ ಬಂದಾಗ ಬಿಜೆಪಿಯವರೇ ಬಾಂಬ್ ಸ್ಫೋಟಿಸಿ ಬೇರೆಯವರ ಮೇಲೆ ಹಾಕುತ್ತಾರೆ ಎಂದು ಸಚಿವ ಮಂಕಾಳ ವೈದ್ಯ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.ಬೆಂಗಳೂರಿನಲ್ಲಿ ಶುಕ್ರವಾರ ಸಂಭವಿಸಿದ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ಪಟ್ಟಣದಲ್ಲಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಗೆಲುವಿಗಾಗಿ ಬಿಜೆಪಿಯವರು ಏನು ಬೇಕಾದರೂ ಸೃಷ್ಟಿಸುತ್ತಾರೆ ಎಂದು ಕಿಡಿಕಾರಿದರು.ಬಿಜೆಪಿ ಅಭಿವೃದ್ಧಿ ಮಾಡಿ ಮತ ಕೇಳಿದ ಉದಾಹರಣೆಯೇ ಇಲ್ಲ. ಅವರು ಬಡವರ ಪರವಾದ ಕೆಲಸ ಮಾಡಿದ್ದೇನಾದರೂ ಇದೆಯಾ? ಪ್ರತಿಯೊಬ್ಬರ ಖಾತೆಗೆ ₹ ೧೫ ಲಕ್ಷ ಹಣ ಬರುತ್ತದೆ ಎಂದು ಹೇಳಿದ್ದರು. ಯಾರಿಗಾದರೂ ಹಣ ಬಂತಾ? ಅವರು ಒಂದಾದರೂ ನಿಜ ಹೇಳುತ್ತಾರಾ? ಸುಳ್ಳು ಹೇಳುವುದೇ ಅವರ ಜಾಯಮಾನ. ಈಗ ಮತ್ತೆ ಮೋದಿ ಗ್ಯಾರಂಟಿ ಎಂದು ಹೇಳಿಕೊಂಡು ಚುನಾವಣೆಗೆ ಹೋಗುತ್ತಿದ್ದಾರೆ. ಕೇವಲ ಮೋದಿ ಹೆಸರು ಹೇಳಿ ಮತ ಕೇಳುತ್ತಾರೆ. ರಾಜಕಾರಣಕ್ಕೆ ಅವರು ಏನು ಬೇಕಾದರೂ ಮಾಡುತ್ತಾರೆ ಎಂದರು.
ರಾಜ್ಯದಲ್ಲಿ ಸುಭದ್ರ ಸರ್ಕಾರ:ಉಚಿತ ವಿದ್ಯುತ್, ಮಹಿಳೆಯರಿಗೆ ಬಸ್ ಪ್ರಯಾಣ, ಉಚಿತ ಅಕ್ಕಿ ಜತೆಗೆ ಹಣ ನೀಡಲಾಗುತ್ತಿದೆ. ಇದಕ್ಕಿಂತ ಸುಭದ್ರ ಸರ್ಕಾರ ಬೇಕಾ? ಬಡವರು, ಜನಸಾಮಾನ್ಯರು ನೆಮ್ಮದಿಯಿಂದ ಇರುತ್ತಾರೆ ಎಂದರೆ ಇದಕ್ಕಿಂತ ಉತ್ತಮ ಸರ್ಕಾರ ಇರಲು ಸಾಧ್ಯವಿಲ್ಲ. ಜನರಿಗೆ ಎಲ್ಲವನ್ನೂ ನೀಡಿದರೂ ಕೂಡ ಸರ್ಕಾರದಲ್ಲಿ ಹಣಕ್ಕೆ ಕೊರತೆ ಇಲ್ಲ ಹಾಗೂ ರಾಜ್ಯ ಕೂಡ ಸುಭದ್ರವಾಗಿದೆ ಎಂದು ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ಆರೋಪಕ್ಕೆ ತುರುಗೇಟು ನೀಡಿದರು. ಅನಂತ್ ವಿರುದ್ಧ ವಾಗ್ದಾಳಿ:ಸಂಸದ ಅನಂತಕುಮಾರ ಹೆಗಡೆ ಈ ವರೆಗೆ ಯಾರಿಗಾದರೂ ಗೌರವದಿಂದ ಮರ್ಯಾದೆ ಕೊಟ್ಟು ಮಾತನಾಡಿದ ಇತಿಹಾಸವೇ ಇಲ್ಲ. ಯಾರಿಗೂ ಗೌರವ ಕೊಡುವ ವ್ಯಕ್ತಿ ಅವರಲ್ಲ. ಮನಸ್ಥಿತಿ ಸರಿ ಇಲ್ಲದವರ ಬಗ್ಗೆ ಯಾರು ತಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ಹಾಗಾಗಿ ಅನಂತಕುಮಾರ ಬಗ್ಗೆ ರಾಜ್ಯದಲ್ಲಿ ಯಾರು ಕೂಡ ಮಾತನಾಡುವುದಿಲ್ಲ ಎಂದು ಮಂಕಾಳ ವೈದ್ಯ ಹೇಳಿದರು.ಶಿವರಾಮ ಹೆಬ್ಬಾರ ಕಾಂಗ್ರೆಸ್ಸಿಗೆ ಬಂದರೆ ಸ್ವಾಗತ ಮಾಡಲೇಬೇಕಲ್ಲ. ಹೈಕಮಾಂಡ್ ತೀರ್ಮಾನದಂತೆ ಅವರು ಬಂದರೆ ಸ್ವಾಗತಿಸಲು ಆಗಲ್ಲ ಎನ್ನಲಾಗುವುದಿಲ್ಲ. ಬಿಜೆಪಿ ಬಿಟ್ಟು ಬರುವುದಿಲ್ಲ ಎಂದು ಮಾದ್ಯಮದ ಮುಂದೆ ಹೆಬ್ಬಾರ ಹೇಳಿದ್ದಾರೆ. ಇದರಿಂದ ಅವರು ಬರುವುದಿಲ್ಲ ಎಂದು ನಮಗೆ ಸಮಾಧಾನವಾಗಿದೆ ಎಂದು ಹೇಳಿದರು.ಈ ವೇಳೆ ಮಾಜಿ ಶಾಸಕ ವಿ.ಎಸ್. ಪಾಟೀಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜ್ಞಾನದೇವ ಗುಡಿಯಾಳ, ಕೃಷ್ಣ ಹಿರೇಹಳ್ಳಿ, ಎಂ.ಎನ್. ದುಂಡಸಿ ಉಪಸ್ಥಿತರಿದ್ದರು.