ಈ ಬಾರಿ ಬಿಜೆಪಿ ಗೆಲ್ಲೋದೇ 200 ಸೀಟು: ಸಿದ್ದು

KannadaprabhaNewsNetwork |  
Published : Apr 02, 2024, 01:13 AM ISTUpdated : Apr 02, 2024, 06:02 AM IST
Siddaramaiah

ಸಾರಾಂಶ

ಈ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯವರು ಗೆಲ್ಲೋದೇ 200 ಕ್ಷೇತ್ರ ಮಾತ್ರ. ಕರ್ನಾಟಕದಲ್ಲಿ 18 ರಿಂದ 20 ಕ್ಷೇತ್ರದಲ್ಲಿ ನಾವೇ ಗೆಲ್ಲುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

  ಮೈಸೂರು :  ಈ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯವರು ಗೆಲ್ಲೋದೇ 200 ಕ್ಷೇತ್ರ ಮಾತ್ರ. ಕರ್ನಾಟಕದಲ್ಲಿ 18 ರಿಂದ 20 ಕ್ಷೇತ್ರದಲ್ಲಿ ನಾವೇ ಗೆಲ್ಲುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಸೋಮವಾರ ಸುದ್ದಿಗಾರರು ಹಾಗೂ ಮೈಸೂರಲ್ಲಿ ಪಕ್ಷದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಮೋದಿ ಅವರು ಇಲ್ಲಿವರೆಗೆ ಹೇಳಿರುವುದೆಲ್ಲ ಸುಳ್ಳು. ದೇಶದ ಜನ ಈ ಬಾರಿ ಮೋದಿ ಅವರ ಮಾತು ಮತ್ತು ಕೆಲಸ ಎರಡನ್ನೂ ತುಲನೆ ಮಾಡಿ ಮತ ಹಾಕುತ್ತಾರೆ. ಹೀಗಾಗಿ ಅವರಿಗೆ 200 ಸೀಟು ದಾಟುವುದೇ ಕಷ್ಟ ಎನ್ನುವ ವಾಸ್ತವದ ಮನವರಿಕೆಯಾಗಿದೆ. ಅವರು ಕೂಡ ಸರ್ವೆ ಮಾಡಿಸಿದ್ದಾರೆ. ಈ ಬಾರಿ ಕಡಿಮೆ ಸ್ಥಾನ ಗ್ಯಾರಂಟಿ ಎಂದು ಗೊತ್ತಾದ ಮೇಲೆಯೇ ಹೆಚ್ಚು ಸ್ಥಾನ ಗೆಲ್ಲುತ್ತೇವೆಂದು ಬಿಂಬಿಸುವ ಪ್ರಯತ್ನ ಮಾಡುತ್ತಿದ್ದಾರೆ‌. ಇದು ಕೂಡ ಅವರ ತಂತ್ರಗಾರಿಕೆ ಎಂದು ಟೀಕಿಸಿದರು.

ಕರ್ನಾಟಕದಲ್ಲಿ ಕಾಂಗ್ರೆಸ್‌ 18 ರಿಂದ 20 ಸ್ಥಾನ ಗೆಲ್ಲುವ ವಿಶ್ವಾಸವಿದೆ. ಈ ಬಾರಿ ಬಿಜೆಪಿಯ ಸುಳ್ಳಿಗೆ ಯಾರೂ ಮರುಳಾಗುವುದಿಲ್ಲ. ವಿಧಾನಸಭೆ ಚುನಾವಣೆಯಲ್ಲಿ ಪ್ರಧಾನಿ ಮೋದಿ ಅವರು ರಾಜ್ಯದಲ್ಲಿ ಪ್ರಚಾರ ಮಾಡಿದರು. ಆಗ ಏನಾಯಿತು ಎಂಬುದು ಗೊತ್ತಿದೆ. ಈಗಲೂ ಅವರು ಬಂದು ಪ್ರಚಾರ ಮಾಡಲಿ ಬಿಡಿ ಎಂದು ಟಾಂಗ್‌ ನೀಡಿದರು.ಕೇಂದ್ರ ಸರ್ಕಾರದ ಜನ ವಿರೋಧಿ ನೀತಿ, ನಮ್ಮ ಸರ್ಕಾರದ ಜನಪರ ಆಡಳಿತ ನಮ್ಮ ಕೈ ಹಿಡಿಯುತ್ತದೆ. ಪೆಟ್ರೋಲ್, ಡಿಸೇಲ್, ಗ್ಯಾಸ್ ಬೆಲೆ ಎಷ್ಟು ಏರಿದೆ ಎಂಬುದು ಜನರಿಗೆ ಗೊತ್ತು. ಅಚ್ಛೇ ದಿನ ಬರಲೇ ಇಲ್ಲ. ಹೀಗಾಗಿ, ಜನ ನಮ್ಮ ಪರ ಮತ ಹಾಕುತ್ತಾರೆ ಎಂದರು.

ದೇಶದ ಸಂಪತ್ತನ್ನು 5 ಟ್ರಿಲಿಯನ್‌ಗೇರಿಸುತ್ತೇವೆ, ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುತ್ತೇವೆ ಎಂದು ಮೋದಿ ಹೇಳಿದ್ದರು. ಆದರೆ ಈಗ ದೇಶದಲ್ಲಿ ನಿರುದ್ಯೋಗ ಹೆಚ್ಚಾಗಿದೆ ಎಂದು ಆರೋಪಿಸಿದ ಸಿದ್ದರಾಮಯ್ಯ, ಮೋದಿ ತಮಗೆ 56 ಇಂಚಿನ ಎದೆ ಇದೆ ಅಂದ್ರು. ಆದರೆ ಕೇವಲ 56 ಇಂಚಿನ ಎದೆ ಇದ್ದರೆ ಸಾಲದು ಬಡವರ ಪರವಾದ ಮಾತೃ ಹೃದಯವೂ ಇರಬೇಕು ಎಂದರು. ಜತೆಗೆ, ನಾನು ಬಡವರ ಪರವಾಗಿ ಇದ್ದೇನೆ ಎಂಬ ಕಾರಣಕ್ಕೆ ಬಿಜೆಪಿಯವರಿಗೆ ನನ್ನ ಮೇಲೆ ಕೋಪ ಎಂದು ಹರಿಹಾಯ್ದರು.

PREV

Recommended Stories

ರೇಣುಕಾಂಬೆ ದರ್ಶನಕ್ಕೆ ಬಂದಿದ್ದಾಗ ಮಗುವಿಗೆ ಜನ್ಮ ನೀಡಿದ ಅವಿವಾಹಿತೆ
ರಾಜ್ಯದಲ್ಲಿ ಆ.15ರ ಬಳಿಕ ಭಾರೀ ಮಳೆ