ಕನ್ನಡಪ್ರಭ ವಾರ್ತೆ ರಾಣಿಬೆನ್ನೂರು
ಇಡೀ ರಾಜ್ಯದಲ್ಲಿಯೇ ಹಾವೇರಿ ಜಿಲ್ಲೆಯಲ್ಲಿ ಬಿಜೆಪಿಯನ್ನು ಸಂಘಟನೆ ದೃಷ್ಟಿಯಿಂದ ಬಲಿಷ್ಠವನ್ನಾಗಿ ಮಾಡುವ ಕನಸಿದ್ದು, ಅದಕ್ಕಾಗಿ ಜಿಲ್ಲೆಯಲ್ಲಿ ಕೆಲವೊಂದು ಕಡೆಗೆ ಇರುವ ಸಣ್ಣಪುಟ್ಟ ಸಮಸ್ಯೆಗಳನ್ನು ಬಗೆಹರಿಸಿ ಪಕ್ಷ ಸಂಘಟನೆಗೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವೆ ಎಂದು ಮಾಜಿ ಶಾಸಕ ಹಾಗೂ ಬಿಜೆಪಿ ನೂತನ ಜಿಲ್ಲಾಧ್ಯಕ್ಷ ಅರುಣಕುಮಾರ ಪೂಜಾರ ಹೇಳಿದರು.ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಮಾಜಿ ಸಿಎಂಗಳಾದ ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವರು ಸಂಕ್ರಾಂತಿ ಹಬ್ಬದ ಕೊಡುಗೆಯಾಗಿ ನನಗೆ ಜಿಲ್ಲಾಧ್ಯಕ್ಷ ಸ್ಥಾನವನ್ನು ನೀಡಿದ್ದು, ಅವರಿಗೆ ನನ್ನ ಹಾಗೂ ಜಿಲ್ಲೆಯ ಪರವಾಗಿ ಕೃತಘ್ನತೆ ಸಲ್ಲಿಸುತ್ತೇನೆ. ರಾಣಿಬೆನ್ನೂರು ವಿಧಾನಸಭಾ ಕ್ಷೇತ್ರವು ಸೇರಿದಂತೆ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಸೋಲುಂಡಿದ್ದು ಮುಂದಿನ ದಿನಮಾನಗಳಲ್ಲಿ ಈ ಕ್ಷೇತ್ರಗಳಲ್ಲಿ ಕಾರ್ಯಕರ್ತರನ್ನೂ ಒಗ್ಗೂಡಿಸಿಕೊಂಡು ಬಿಜೆಪಿಯನ್ನು ಮತ್ತಷ್ಟು ಗಟ್ಟಿಗೊಳಿಸುವ ಸಂಕಲ್ಪ ಹೊಂದಿದ್ದೇನೆ ಎಂದರು.
ಪಕ್ಷ ಸಂಘಟನೆಯ ಹಿತದೃಷ್ಟಿಯಿಂದ ಜ.20ರಂದು ಹಾನಗಲ್ ತಾಲೂಕಿನಲ್ಲಿ ವಿನೂತನ ಕಾರ್ಯಕ್ರಮದ ಮೂಲಕ ಜಿಲ್ಲಾ ಪ್ರವಾಸ ಮಾಡಿ ಜಿಲ್ಲೆಯ ಪ್ರತಿ ಗ್ರಾಮಗಳಲ್ಲೂ ಕಾರ್ಯಕರ್ತರ ಸಭೆ ಮೂಲಕ ಬಿಜೆಪಿ ಪಕ್ಷಕ್ಕೆ ಆನೆಬಲ ತರುವ ಕೆಲಸ ಮಾಡುತ್ತೇನೆ. ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಮತ್ತೊಮ್ಮೆ ಪಕ್ಷ ಪುಟಿದೇಳುವ ಸಮಯ ಬಂದಿದೆ. ಅವರ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿರುವುದು ನನಗೆ ಹೆಮ್ಮೆಯಾಗಿದೆ. ಜಿಲ್ಲೆಯ ಅಧ್ಯಕ್ಷನಾಗಿ ನಾನು ಕಠಿಣ ಸವಾಲು ಎದುರಿಸಬೇಕಾಗಿದೆ. ಮುಂಬರುವ ಲೋಕಸಭೆ, ಜಿಪಂ, ತಾಪಂ, ನಗರಸಭೆ, ಪುರಸಭೆ, ಪಪಂ, ಗ್ರಾಪಂ, ಎಪಿಎಂಸಿ, ಪಿಎಲ್‌ಡಿ ಸೇರಿದಂತೆ 9 ಚುನಾವಣೆ ಎದುರಿಸಬೇಕಾಗಿದ್ದು, ಈ ದಿಸೆಯಲ್ಲಿ ಅಸಮಾಧಾನಗೊಂಡಿರುವ, ಭಿನ್ನಾಭಿಪ್ರಾಯ ಹೊಂದಿರುವ, ಪಕ್ಷದಿಂದ ದೂರ ಇರುವವರನ್ನು ಪಕ್ಷಕ್ಕೆ ಸೇರಿಸಿಕೊಂಡು ಸಕ್ರಿಯವಾಗಿ ಕೆಲಸ ಮಾಡಲು ನಾನು ಎಲ್ಲಾ ರೀತಿಯ ತ್ಯಾಗಕ್ಕೂ ಸಹ ಸಿದ್ಧನಿದ್ದೇನೆ ಎಂದರು.ಮುಂಬರುವ ಲೋಕಸಭಾ ಚುನಾವಣೆಯ ಟಿಕೆಟ್ ಅಕಾಂಕ್ಷಿ ನಾನಲ್ಲ ಎಂದು ಸ್ಪಷ್ಟಪಡಿಸಿದರಲ್ಲದೇ, ಪಕ್ಷ ಸೂಚಿಸುವ ಅಭ್ಯರ್ಥಿಯನ್ನು ಗೆಲ್ಲಿಸುವ ಹೊಣೆಗಾರಿಕೆಯಾಗಿದೆ. ಈ ನಿಟ್ಟಿನಲ್ಲಿ ಸರ್ವರೂ ಪಕ್ಷದ ತತ್ವ ಸಿದ್ದಾಂತಗಳಿಗೆ ಬದ್ಧರಾಗಿ ಕಾರ್ಯನಿರ್ವಹಿಸಬೇಕು. ಪಕ್ಷದ ಸಂಘಟನೆಗಾಗಿ ಇಂದಿನಿಂದಲೇ ಜಿಲ್ಲೆಯ ಬಿಜೆಪಿಯ ಹಾಲಿ, ಮಾಜಿ ಶಾಸಕರನ್ನು, ಮಾಜಿ ಜಿಲ್ಲಾಧ್ಯಕ್ಷರನ್ನು ಹಾಗೂ ಮುಖಂಡರ ಮನೆಗಳಿಗೆ ತೆರಳಿ ಅವರನ್ನು ವಿಶ್ವಾಸ ತೆಗೆದುಕೊಂಡು ಪಕ್ಷವನ್ನು ಬಲಿಷ್ಠಗೊಳಿಸುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷನಾಗಿರುವುದು ಅನಿರೀಕ್ಷಿತ ಬೆಳವಣಿಗೆ ನಿನ್ನೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ನಮ್ಮ ಮನೆಗೆ ಆಗಮಿಸಿ ಭೋಜನಾ ಸವಿದು ಕಾರ್ಯಕರ್ತರೊಂದಿಗೆ ಉಭಯ ಕುಶಲೋಪರಿ ನಡೆಸಿದರು ಸಹ ಜಿಲ್ಲಾಧ್ಯಕ್ಷ ಸ್ಥಾನದ ಬಗ್ಗೆ ಸುಳಿವು ಬಿಟ್ಟು ಕೊಟ್ಟಿರಲಿಲ್ಲ. ಪಕ್ಷವು ನನಗೆ ನೀಡಿರುವ ಅಧ್ಯಕ್ಷ ಸ್ಥಾನದ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಲಿದ್ದು, ಜಿಲ್ಲೆಯ ಸಮಸ್ತ ಬಿಜೆಪಿ ಹಿರಿಯ, ಕಿರಿಯ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಪಕ್ಷದ ಬೆಳವಣಿಗೆಯ ಹಿತದೃಷ್ಠಿಯಿಂದ ನನಗೆ ಸಹಕಾರ ನೀಡಬೇಕೆಂದು ವಿನಂತಿಸಿದರು.