ಬಿಜೆಪಿ ಭಾರಿ ಅಂತರದಿಂದ ಗೆಲ್ಲಲಿದೆ: ದಿನೇಶ್ ವಿಶ್ವಾಸ

KannadaprabhaNewsNetwork | Published : Apr 22, 2024 2:05 AM

ಸಾರಾಂಶ

ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಘೋಷಿಸಿದ ಗ್ಯಾರಂಟಿ ಮೊತ್ತ ದೇಶದ ಬಜೆಟ್ ಮೊತ್ತಕ್ಕಿಂತಲೂ ಹೆಚ್ಚಾಗುತ್ತದೆ. ಇದನ್ನು ಸರಿದೂಗಿಸಲು ಸಾಧ್ಯವಿಲ್ಲ.

ಕನ್ನಡಪ್ರಭ ವಾರ್ತೆ ಕೊಪ್ಪ

ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ಪೂಜಾರಿ ಅತಿಹೆಚ್ಚು ಮತಗಳಿಂದ ಗೆಲುವು ಸಾಧಿಸುತ್ತಾರೆ ಎಂಬ ವಿಶ್ವಾಸ ನಮಗಿದೆ ಎಂದು ಕೊಪ್ಪ ಬಿಜೆಪಿ ಮಂಡಲ ಅಧ್ಯಕ್ಷ ದಿನೇಶ್ ಹೊಸೂರು ತಿಳಿಸಿದರು.

ಬಿಜೆಪಿ ಕಚೇರಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೇಶದಲ್ಲಿ ೧೪೦ ಕೋಟಿ ಜನಸಂಖ್ಯೆ ಇದ್ದು, ೬೦ ಕೋಟಿ ಕುಟುಂಬಗಳಿವೆ. ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಘೋಷಿಸಿದ ಗ್ಯಾರಂಟಿ ಮೊತ್ತ ದೇಶದ ಬಜೆಟ್ ಮೊತ್ತಕ್ಕಿಂತಲೂ ಹೆಚ್ಚಾಗುತ್ತದೆ. ಇದನ್ನು ಸರಿದೂಗಿಸಲು ಸಾಧ್ಯವಿಲ್ಲ. ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಕೇವಲ ೨೦೧ ಸ್ಥಾನಗಳಲ್ಲಿ ಸ್ಪರ್ಧಿಸಿದ್ದು ಅದು ಸ್ವಂತ ಬಲದಿಂದ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಆದ್ದರಿಂದ ಈ ಬಾರಿ ಕಾಂಗ್ರೆಸ್ ಗ್ಯಾರಂಟಿ ಸುಳ್ಳು ಭರವಸೆಯಾಗಿದೆ ಎಂದರು.

ಕಳೆದ ಬಾರಿಗಿಂತ ಹೆಚ್ಚಿನ ಮತಗಳಿಂದ ನಾವು ಗೆಲುವು ಸಾಧಿಸುತ್ತೇವೆ ಎಂದ ಅವರು, ಮತಾಂಧ ಶಕ್ತಿಗಳಿಂದ ರಾಜ್ಯದಲ್ಲಿ ದುಷ್ಕೃತ್ಯಗಳು ನಡೆಯುತ್ತಿದೆ. ಕಾಂಗ್ರೆಸ್ ಕಾರ್ಪೋರೇಟರ್ ಮಗಳ ಹತ್ಯೆಯಾಗಿದ್ದರೂ ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷದವರಿಗೆ ರಕ್ಷಣೆ ಎನ್ನುವುದಿಲ್ಲ. ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಹನುಮಾನ್ ಚಾಲೀಸ್ ಪಠಿಸಿದರೆ, ಜೈ ಶ್ರೀರಾಮ್ ಘೋಷಣೆ ಕೂಗಿದ್ರೆ ದಾಳಿ ನಡೆಯುತ್ತಿದೆ. ಜನ ಈ ಬಾರಿ ಚುನಾವಣೆಯಲ್ಲಿ ಇದಕ್ಕೆ ಉತ್ತರ ನೀಡಲಿದ್ದಾರೆ ಎಂದರು. ೨೫ ಎಕರೆ ಕಾಫಿ ಒತ್ತುವರಿ ಪ್ರದೇಶ ಲೀಸ್ ಕೊಡುವ ನಿಟ್ಟಿನಲ್ಲಿ ಆರ್.ಅಶೋಕ್ ಕಂದಾಯ ಸಚಿವರಿದ್ದಾಗ ಚಾಲನೆ ಕೊಟ್ಟರು. ಯೋಜನೆಗೆ ಸಂಬಂಧ ಕ್ಷೇತ್ರದ ಈಗಿನ ಶಾಸಕರು ಫಲಾನುಭವಿಗಳನ್ನು ತಮ್ಮ ಮನೆಗೆ ಕರೆಯಿಸಿ ಸನ್ಮಾನ ಮಾಡಿಸಿಕೊಳ್ಳುತ್ತಿದ್ದಾರೆ ಎಂದು ದೂರಿದರು.

ಎಸ್.ಎನ್.ರಾಮಸ್ವಾಮಿ ಮಾತನಾಡಿ, ಅಲ್ಪಸಂಖ್ಯಾತರು ಕಾಂಗ್ರೆಸ್‌ಗೆ ಮತ ಹಾಕುವಂತೆ ಮಸೀದಿಗಳಲ್ಲಿ ಫತ್ವ ಹೊರಡಿಸುವ ಮೂಲಕ ಪರಸ್ಪರ ಸಮಾನವಾಗಿ ಬಾಳಬೇಕಾದ ಮುಸ್ಲಿಂ ಮತಕ್ಕಾಗಿ ಒಡೆಯುತ್ತಿದ್ದಾರೆ. ಇದರಿಂದ ಸಮಾಜಕ್ಕೆ ಒಳಿತಲ್ಲ ಎಂದರು.

ಜೆಡಿಎಸ್ ಕ್ಷೇತ್ರ ಘಟಕದ ಅಧ್ಯಕ್ಷ ದಿವಾಕರ್ ಭಟ್ ಮಾತನಾಡಿ, ಕಾಂಗ್ರೆಸ್‌ದವರು ಮತಕ್ಕಾಗಿ ಹಿಂದೂ ಮುಸ್ಲಿಂರ ನಡುವೆ ದ್ವೇಷ ಬೆಳೆಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಅಲ್ಪಸಂಖ್ಯಾತರು ಇದಕ್ಕಾಗಿ ಪಶ್ಚಾತ್ತಾಪ ಪಡಬೇಕಾದ ಪರಿಸ್ಥಿತಿ ಬರಲಿದೆ ಎಂದರು. ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಜಿ.ಎಸ್.ಮಹಾಬಲ ರಾವ್ ಮಾತನಾಡಿ, ಅಡಕೆ ಬೆಲೆ ಸ್ಥಿರವಾಗಿದೆ. ಕಾಫಿ ಬೆಲೆ ಹೆಚ್ಚಾಗಿದೆ ಇದಕ್ಕೆ ಬಿಜೆಪಿಯೇ ಕಾರಣ ಎಂದರು.

ವಿರೋಧಪಕ್ಷ ನಾಯಕ ಕೊಪ್ಪಕ್ಕೆ:

ಏ.೨೩ರಂದು ಮಧ್ಯಾಹ್ನ ೩ ಗಂಟೆಗೆ ಕೊಪ್ಪ ಬಸ್‌ಸ್ಟಾಂಡ್ ನಲ್ಲಿ ನಡೆಯುವ ಪ್ರಚಾರ ಕಾರ್ಯಕ್ರಮದಲ್ಲಿ ವಿಧಾನಸಭೆ ವಿರೋಧಪಕ್ಷದ ನಾಯಕ ಆರ್.ಅಶೋಕ್ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಜೆ.ಪುಣ್ಯಪಾಲ್, ಜಿಲ್ಲಾ ಕಾರ್ಯದರ್ಶಿ ಅದ್ದಡ ಸತೀಶ್, ಮುಖಂಡರಾದ ಎಚ್.ಎಂ.ರವಿಕಾಂತ್, ಭಿಷೇಜ ಭಟ್, ಅರುಣ್ ಶಿವಪುರ, ಎ.ದಿವಾಕರ್ ಇದ್ದರು.

Share this article