ಮೋದಿ ಮತ್ತೆ ಪ್ರಧಾನಿಯಾಗಿಸಲು 28 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಿಸಿ - ಬಿ.ವೈ.ವಿಜಯೇಂದ್ರ

KannadaprabhaNewsNetwork |  
Published : Feb 02, 2024, 01:02 AM IST
1ಎಚ್‌ವಿಆರ್‌2, 2ಎ, | Kannada Prabha

ಸಾರಾಂಶ

ಮತ್ತೊಮ್ಮೆ ಮೋದಿ ಪ್ರಧಾನಿಯಾಗಿಸಲು ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಿಸಬೇಕು.

ಬಡವರು ಬಡವರಾಗಿಯೇ ಇರಲು ಕಾಂಗ್ರೆಸ್‌ ಕಾರಣ

ಬಿಜೆಪಿ ಜಿಲ್ಲಾಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ

ಕನ್ನಡಪ್ರಭ ವಾರ್ತೆ ಹಾವೇರಿ

ಮತ್ತೊಮ್ಮೆ ಮೋದಿ ಪ್ರಧಾನಿಯಾಗಿಸಲು ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಿಸಬೇಕು. ಮುಂದೆ ಯಾವತ್ತು ವಿಧಾನಸಭೆ ಚುನಾವಣೆ ನಡೆದರೂ ಬಿಜೆಪಿ 140 ಸ್ಥಾನ ಗೆದ್ದು ಮತ್ತೆ ಪಕ್ಷ ಅಧಿಕಾರಕ್ಕೆ ತರಲು ಕಾರ್ಯಕರ್ತರು ಶ್ರಮಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.

ಇಲ್ಲಿಯ ಶಿವಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಪಕ್ಷದ ಜಿಲ್ಲಾಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಅವರು, ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದು, ಪಕ್ಷದ ಕಾರ್ಯಕರ್ತರು ರಣೋತ್ಸಾಹದಲ್ಲಿದಾರೆ. ಕಳೆದ ಚುನಾವಣೆಯಲ್ಲಿ ನಮಗೆ ಅನಿರೀಕ್ಷಿತ ಸೋಲಾಯಿತು. ಕಳೆದ ಏಳೆಂಟು ತಿಂಗಳಿಂದ ಕಾರ್ಯಕರ್ತರ ಉತ್ಸಾಹ ಕುಗ್ಗಿತ್ತು. ಆದರೆ ಪಂಚ ರಾಜ್ಯಗಳ ಫಲಿತಾಂಶ ಇಡೀ ದೇಶದಲ್ಲಿ ಬಿಜೆಪಿ ಅಲೆ ಇರೋದನ್ನು ಸಾಬೀತುಪಡಿಸಿದೆ. ರಾಜ್ಯದ 28 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಿಸಲು ಕಾರ್ಯಕರ್ತರು ಶ್ರಮಿಸಬೇಕು. ಕೇಂದ್ರ ಸರ್ಕಾರದ ಯೋಜನೆಗಳನ್ನು ಮನೆಮನೆಗೆ ತಲುಪಿಸುವ ಕಾರ್ಯ ಮಾಡಬೇಕು ಎಂದು ಹೇಳಿದರು.

ಕಾಂಗ್ರೆಸ್‌ ಗ್ಯಾರಂಟಿಗಿಂತ ಮೋದಿ ಗ್ಯಾರಂಟಿ ಶ್ರೇಷ್ಠವಾಗಿದೆ. ಕಾಂಗ್ರೆಸ್‌ನವರು ಒಂದು ಸುಳ್ಳು ನೂರು ಬಾರಿ ಹೇಳಿ ಜನರ ಕಣ್ಣಿಗೆ ಮಣ್ಣೆರಚುವ ಕಾರ್ಯ ಮಾಡುತ್ತಿದ್ದಾರೆ. ಮಹಿಳೆಯರಿಗೆ ಉಚಿತ ಬಸ್ ಅಂತ ಹೇಳುತ್ತಾರೆ. ಆದರೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಬಸ್ ಗಳೇ ಸಿಗುತ್ತಿಲ್ಲ. ಶೇ. 50ರಷ್ಟು ಬಸ್ ರೂಟ್ ಕಟ್ ಮಾಡಿದ್ದಾರೆ. ಒಂದು ಕೈಯಿಂದ ಕೊಟ್ಟು ಇನ್ನೊಂದು ಕೈಯಿಂದ ಕಿತ್ತುಕೊಳ್ಳುವ ಕೆಲಸ ರಾಜ್ಯ ಸರ್ಕಾರ ಮಾಡುತ್ತಿದೆ. ರಾಜ್ಯದಲ್ಲಿ ಭೀಕರ ಬರಗಾಲವಿದ್ದರೂ ರೈತರ ಬೆಳೆ ಉಳಿಸಲು 7 ತಾಸು ಕರೆಂಟ್ ಕೊಡುತ್ತಿಲ್ಲ. ರಾಜ್ಯದಲ್ಲಿ 500ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೂ ಸಿದ್ದರಾಮಯ್ಯನವರಿಗೆ ರೈತರ ಬಗ್ಗೆ ಕನಿಕರ ಬರುತ್ತಿಲ್ಲ. ಆದರೆ, ಅಲ್ಪಸಂಖ್ಯಾತರಿಗೆ ₹10 ಸಾವಿರ ಕೋಟಿ ಕೊಡುತ್ತೇವೆ ಎನ್ನುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಬಡವರು ಬಡವರಾಗಿಯೇ ಇರಲು ಕಾಂಗ್ರೆಸ್‌ ಕಾರಣ. ಎಲ್ಲಿ ಬಡತನ ಇರುತ್ತದೆಯೋ ಅಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿಕ್ಕೆ ಸಾಧ್ಯ ಅಂತ ಕಾಂಗ್ರೆಸ್ಸಿನವರು ಬಲವಾಗಿ ನಂಬಿದ್ದಾರೆ. ಒಂದೇ ಒಂದು ಹೊಸ ಯೋಜನೆ ಕೊಟ್ಟಿಲ್ಲ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲದಿದ್ದರೆ ಗ್ಯಾರಂಟಿ ಬಂದ್ ಮಾಡುತ್ತೇವೆ ಎಂದು ಮಾಗಡಿ ಕಾಂಗ್ರೆಸ್‌ ಶಾಸಕ ಬಾಲಕೃಷ್ಣ ಹೇಳಿದ್ದಾರೆ. ಆ ದುಸ್ಸಾಹಸಕ್ಕೆ ಕೈ ಹಾಕಿದರೆ ನಿಮ್ಮ ಕಿವಿ ಹಿಂಡಬೇಕಾಗುತ್ತದೆ. ಸಿಎಂ ತಮ್ಮ ಮನಸ್ಸಿನ ಮಾತನ್ನು ಮಾಗಡಿ ಶಾಸಕರ ಬಾಯಿಂದ ಹೇಳಿಸಿದ್ದಾರೆ ಎಂದು ಆರೋಪಿಸಿದರು.

ಗ್ಯಾರಂಟಿಯೇ ಕಾಂಗ್ರೆಸ್‌ಗೆ ತಿರುಗುಬಾಣ:

ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಗ್ಯಾರಂಟಿ ಸೌಲಭ್ಯ ಸಿಗದ ಜನರು ಕಾಂಗ್ರೆಸ್‌ ಸರ್ಕಾರಕ್ಕೆ ಶಾಪ ಹಾಕುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳೇ ಕಾಂಗ್ರೆಸ್‌ಗೆ ತಿರುಗುಬಾಣವಾಗಲಿದ್ದು, ಲೋಕಸಭಾ ಚುನಾವಣೆ ನಡೆದು 3 ತಿಂಗಳಲ್ಲಿ ಈ ದರಿದ್ರ ರಾಜ್ಯ ಸರ್ಕಾರ ಬಿದ್ದು ಹೋಗಲಿದೆ ಎಂದು ಹೇಳಿದರು.

ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ರಾಜ್ಯದಲ್ಲಿ ಕಾಂಗ್ರೆಸ್‌ ಸಚಿವರೂ ಧೈರ್ಯ ತೋರುತ್ತಿಲ್ಲ. ಮತ್ತೊಂದು ಕಡೆ ಇಂಡಿಯಾ ಒಕ್ಕೂಟ ಮುರಿದು ಬೀಳುತ್ತಿದೆ. ದೇಶದ ಸರ್ವಾಂಗೀಣ ವಿಕಾಸಕ್ಕಾಗಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರಲಿದೆ. ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾದ ತಕ್ಷಣ ಕಿಸಾನ್‌ ಸಮ್ಮಾನ್‌ ಯೋಜನೆಯಡಿ ರಾಜ್ಯ ಸರ್ಕಾರ ರೈತರಿಗೆ ನೀಡುತ್ತಿದ್ದ ₹4 ಸಾವಿರ ನಿಲ್ಲಿಸಿದರು. ರೈತರ ವಿದ್ಯಾನಿಧಿ ಮತ್ತು ರೈತಶಕ್ತಿ ಯೋಜನೆಯನ್ನು ಸ್ಥಗಿತಗೊಳಿಸಿದರು. ರೈತರ ಪಾಲಿಗೆ ಕಾಂಗ್ರೆಸ್ ಸರ್ಕಾರ ಸತ್ತು ಹೋಗಿದೆ ಎಂದು ಆರೋಪಿಸಿದರು.

ಇದೇ ಸಂದರ್ಭದಲ್ಲಿ ಪಕ್ಷದ ನೂತನ ಜಿಲ್ಲಾಧ್ಯಕ್ಷರಾಗಿ ಅರುಣಕುಮಾರ ಪೂಜಾರ ಪಕ್ಷದ ಧ್ವಜ ಸ್ವೀಕರಿಸುವ ಮೂಲಕ ಪದಗ್ರಹಣ ಮಾಡಿದರು.

ಮಾಜಿ ಸಚಿವ ಬಿ.ಸಿ. ಪಾಟೀಲ, ಶಾಸಕ ಅರವಿಂದ ಬೆಲ್ಲದ, ಮಾಜಿ ಶಾಸಕರಾದ ಪಿ. ರಾಜೀವ, ಶಿವರಾಜ ಸಜ್ಜನರ, ಪ್ರದೀಪ ಶೆಟ್ಟರ್‌, ಕಳಕಪ್ಪ ಬಂಡಿ, ವಿರುಪಾಕ್ಷಪ್ಪ ಬಳ್ಳಾರಿ, ಜಿಲ್ಲಾ ಮಾಜಿ ಅಧ್ಯಕ್ಷ ಸಿದ್ದರಾಜ ಕಲಕೋಟಿ, ಮುಖಂಡರಾದ ಬಸವರಾಜ ಕೇಲಗಾರ, ಲಿಂಗರಾಜ ಪಾಟೀಲ, ಶೋಭಾ ನಿಸ್ಸೀಮಗೌಡರ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಸ್ಸಿ ಒಳ ಮೀಸಲಾತಿ ಜಾರಿ ವಿಧೇಯಕಕ್ಕೆ ಸಂಪುಟ ಅಸ್ತು
ಗ್ರಾಮೀಣ ಭಾಗದಲ್ಲೂ ವಸತಿ ಕಟ್ಟಡಗಳಿಗೆ ಒಸಿ-ಸಿಸಿ ಬೇಕಿಲ್ಲ