ರಾಜ್ಯ ಸರ್ಕಾರವು ಅಬಕಾರಿ ಸುಂಕ ಹೆಚ್ಚಿಸಿಕೊಳ್ಳಲು ವೈನ್‌ಸ್ಟೋರ್‌ಗಳಿಗೆ ಪರವಾನಗಿ ನೀಡಲು ಮುಂದಾಗಿದೆ ಎಂದು ಆರೋಪಿಸಿ ಬಿಜೆಪಿ ಜಿಲ್ಲಾ ಘಟಕ ಹಾಗೂ ಮಹಿಳಾ ಮೋರ್ಚಾದ ವತಿಯಿಂದ ಸರ್ಕಾರದ ಅಣಕು ಶವಯಾತ್ರೆ ನಡೆಸಿ ಪ್ರತಿಭಟನೆ ನಡೆಸಲಾಯಿತು
ಮದ್ಯ ಮಳಿಗೆಗೆ ಪರವಾನಗಿಗೆ ಆಕ್ರೋಶ | ಸಂತೇಮರಹಳ್ಳಿ ವೃತ್ತದಿಂದ ಮರಳ್ಳಿ ರಸ್ತೆಯ ಕಟ್ಟೆ ಹಳ್ಳದವರೆಗೆ ಮದ್ಯದ ಬಾಟಲಿಗಳ ಅಣಕು ಶವಯಾತ್ರೆ ಕನ್ನಡಪ್ರಭ ವಾರ್ತೆ ಚಾಮರಾಜನಗರ ರಾಜ್ಯ ಸರ್ಕಾರವು ಅಬಕಾರಿ ಸುಂಕ ಹೆಚ್ಚಿಸಿಕೊಳ್ಳಲು ವೈನ್‌ಸ್ಟೋರ್‌ಗಳಿಗೆ ಪರವಾನಗಿ ನೀಡಲು ಮುಂದಾಗಿದೆ ಎಂದು ಆರೋಪಿಸಿ ಬಿಜೆಪಿ ಜಿಲ್ಲಾ ಘಟಕ ಹಾಗೂ ಮಹಿಳಾ ಮೋರ್ಚಾದ ವತಿಯಿಂದ ಸರ್ಕಾರದ ಅಣಕು ಶವಯಾತ್ರೆ ನಡೆಸಿ ಪ್ರತಿಭಟನೆ ನಡೆಸಲಾಯಿತು. ನಗರದ ಸಂತೇಮರಹಳ್ಳಿ ವೃತ್ತ ಅಂಚೆ ಕಚೇರಿ ಬಳಿ ಜಮಾಯಿಸಿದ ಪ್ರತಿಭಟನಾಕಾರರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಸಂತೇಮರಹಳ್ಳಿ ವೃತ್ತದಿಂದ ಮರಳ್ಳಿ ರಸ್ತೆಯ ಕಟ್ಟೆ ಹಳ್ಳದವರೆಗೆ ಮಧ್ಯದ ಬಾಟಲಿಗಳ ಅಣಕು ಶವಯಾತ್ರೆ ನಡೆಸಿದರು. ಬಳಿಕ ಅಣಕು ಶವವನ್ನು ಸ್ಮಶಾನಕ್ಕೆ ತೆಗೆದುಕೊಂಡು ಹೋಗಿ ಸುಟ್ಟು ಹಾಕಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಎನ್.ಮಹೇಶ್ ಮಾತನಾಡಿ, ರಾಜ್ಯ ಸರ್ಕಾರ ಗ್ರಾಮ ಪಂಚಾಯತಿಯಲ್ಲಿ ಒಂದು ಬಾರ್ ತೆರೆಯಲು ತೆಗೆದುಕೊಂಡಿರುವ ತೀರ್ಮಾನ ಖಂಡನೀಯ. ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಐದು ಗ್ಯಾರಂಟಿಗಳಿಗೆ ಹಣಕಾಸು ಒದಗಿಸಿಕೊಳ್ಳಲು ಈ ಯೋಜನೆ ಮಾಡಿದೆ. ಕಳೆದ ವರ್ಷ 23 ಸಾವಿರ ಕೋಟಿ ರು. ಅಬಕಾರಿ ಆದಾಯ ಇತ್ತು. ಇದನ್ನು 40 ಸಾವಿರ ಕೋಟಿ ರು.ಗೆ ಏರಿಕೆ ಮಾಡಲು ಒಂದು ಸಾವಿರ ಜನಸಂಖ್ಯೆ ಇರುವ ಹಳ್ಳಿಗೆ ಒಂದು ಮದ್ಯದಂಗಡಿ ತೆರೆಯಲು ಸರ್ಕಾರ ತೀರ್ಮಾನ ತೆಗೆದುಕೊಂಡಿದೆ ಇದು ಖಂಡನೀಯ ಎಂದರು. ಮನೆ ಯಜಮಾನಿಗೆ 2000 ರು. ಕೊಟ್ಟು, ಅವರ ಮನೆಯವರಿಂದ 5000 ರು. ಕಿತ್ತುಕೊಂಡು ಆ ಸಂಸಾರವನ್ನು ಭಿಕಾರಿ ಮಾಡಲು ಈ ಸರ್ಕಾರ ಹೊರಟಿದೆ. ಜನರನ್ನು ಕುಡುಕರನ್ನಾಗಿ ಮಾಡಿ ಗ್ಯಾರಂಟಿ ಯೋಜನೆ ಮಾಡುವ ಅಗತ್ಯವೇನಿತ್ತು. ಇದು ಅಪಾಯಕಾರಿ ಬೆಳವಣಿಗೆಯಾಗಿದೆ ಎಂದು ಆರೋಪಿಸಿದರು. ಸರ್ಕಾರ ಈ ನೀತಿಯನ್ನು ಮುಂದುವರಿಸಿದ್ದೇ ಆದರೆ ಮಹಿಳಾ ಮೋರ್ಚಾ ವತಿಯಿಂದ ಉಗ್ರ ಹೋರಾಟ ಮಾಡಿ, ಹೆಣ್ಣುಮಕ್ಕಳ ತಾಳಿ ಭಾಗ್ಯ ಉಳಿಸುವ ಕಾರ್ಯ ಮಾಡಲಾಗುವುದು ಎಂದು ಎಚ್ಚರಿಸಿದರು, ಪ್ರತಿಭಟನೆಯಲ್ಲಿ ಮಾಜಿ ಶಾಸಕ ಎಸ್.ಬಾಲರಾಜ್, ಬಿಜೆಪಿ ಜಿಲ್ಲಾಧ್ಯಕ್ಷ ನಾರಾಯಣ ಪ್ರಸಾದ್, ಪ್ರಧಾನ ಕಾರ್ಯದರ್ಶಿ ನಾಗಶ್ರೀ ಪ್ರತಾಪ್, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಕಮಲಮ್ಮ, ಪ್ರಧಾನ ಕಾರ್ಯದರ್ಶಿ ಶೈಲಜಾ, ಪದಾಧಿಕಾರಿಗಳು, ನಗರಸಭಾ ಸದಸ್ಯೆ ಮಮತಾ, ಮುಖಂಡರಾದ ಮಹದೇವನಾಯಕ, ಶಿವಣ್ಣ, ಶಿವು ವಿರಾಟ್, ರಾಜು ಭಾಗವಹಿಸಿದ್ದರು. ಶವಯಾತ್ರೆಗೆ ತಡೆಯೊಡ್ಡಿದ ಪೊಲೀಸರು ರಾಜ್ಯ ಸರ್ಕಾರದ ಅಣಕು ಶವಯಾತ್ರೆ ಮಾಡಲು ಮುಂದಾದ ಬಿಜೆಪಿ ನಾಯಕರಿಂದ ಪೊಲೀಸರು ಅಣಕು ಶವವನ್ನು ಕಸಿದುಕೊಂಡರು. ಇದರಿಂದ ಆಕ್ರೋಶಗೊಂಡ ಬಿಜೆಪಿ ನಾಯಕರು ಅಣಕು ಶವ ಕೊಡುವ ತನಕ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ಪಟ್ಟುಹಿಡಿದು ಹೆದ್ದಾರಿಯಲ್ಲಿಯೇ ನಿಂತು ಪ್ರತಿಭಟನೆ ನಡೆಸಿದರು. ಇದರಿಂದ ಕೆಲಕಾಲ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತು. ಬಳಿಕ ಪೊಲೀಸರು ಪ್ರತಿಭಟನಾಕಾರರ ಮನವೊಲಿಸಿ ಅಣಕು ಶವ ಕೊಟ್ಟು ಪ್ರತಿಭಟನೆಗೆ ಸಹಕರಿಸಿದರು. ಬಳಿಕ ಅಣಕು ಶವಯಾತ್ರೆ ನಡೆಯಿತು. ರಾಜ್ಯ ಸರ್ಕಾರವು ವೈನ್‌ಸ್ಟೋರ್‌ಗಳಿಗೆ ಪರವಾನಗಿ ನೀಡಲು ಮುಂದಾಗಿರುವುದನ್ನು ಖಂಡಿಸಿ ಬಿಜೆಪಿ ಜಿಲ್ಲಾ ಘಟಕ ಹಾಗೂ ಮಹಿಳಾ ಮೋರ್ಚಾದ ವತಿಯಿಂದ ಸರ್ಕಾರದ ಅಣಕು ಶವಯಾತ್ರೆ ನಡೆಸಿ ಪ್ರತಿಭಟನೆ ನಡೆಸಲಾಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.