ಕನ್ನಡಪ್ರಭ ವಾರ್ತೆ ಮಂಗಳೂರು
ನಗರದ ಪದವು ಶಕ್ತಿನಗರದ ಶ್ರೀ ಕೃಷ್ಣ ಭಜನಾ ಮಂದಿರದ ಧಾರ್ಮಿಕ ಕಾರ್ಯಕ್ರಮದ ವೇಳೆ ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿ ದೌರ್ಜನ್ಯ ಎಸಗಿರುವುದು ಖಂಡನೀಯ. ಕಾನೂನಿಗೆ ಗೌರವ ಕೊಟ್ಟು ಕಾಂಗ್ರೆಸ್ ಸುಮ್ಮನಿದ್ದರೆ ಅದನ್ನೇ ದೌರ್ಬಲ್ಯ ಎಂದು ಭಾವಿಸಬೇಡಿ, ಕಾಂಗ್ರೆಸ್ ಕಾರ್ಯಕರ್ತರು ಕೈಗೆ ಬಳೆ ತೊಟ್ಟು ಕೂತಿಲ್ಲ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದ ಜವಾಬ್ದಾರಿಯುತ ಸ್ಥಾನದಲ್ಲಿರುವ ಶಾಸಕ ವೇದವ್ಯಾಸ ಕಾಮತ್ ಅವರು ಕಾಂಗ್ರೆಸ್ ಕಾರ್ಯಕರ್ತರನ್ನು ಉದ್ದೇಶಿಸಿ ‘ದೇವಸ್ಥಾನಕ್ಕೆ ಕಲ್ಲು ಹೊಡೆಯುವ ನಿಮಗೆ ಇಲ್ಲೇನು ಕೆಲಸ’ ಎಂದು ನಿಂದಿಸಿರುವುದು ಮಾತ್ರವಲ್ಲದೆ, ನಮ್ಮ ಕಾರ್ಯಕರ್ತರ ಹುಟ್ಟಿನ ಬಗ್ಗೆಯೂ ಕೀಳಾಗಿ ಮಾತನಾಡಿ ದುಷ್ಪ್ರೇರಣೆ ನೀಡಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಹಲ್ಲೆಗೆ ಒಳಗಾದ ಕಾಂಗ್ರೆಸ್ ಕಾರ್ಯಕರ್ತ ಯಶವಂತ ಪ್ರಭು ಅವರ ತಂದೆ ಶ್ರೀಕೃಷ್ಣ ಭಜನಾ ಮಂದಿರ ಸ್ಥಾಪಕರಲ್ಲಿ ಒಬ್ಬರು. ಇದೀಗ ಮಂದಿರದ ಜೀರ್ಣೋದ್ಧಾರ ಕಾರ್ಯವನ್ನು ಪಕ್ಷಾತೀತವಾಗಿ ಅಲ್ಲಿನ ಸ್ಥಳೀಯರು ಸೇರಿ ನಡೆಸಿದ್ದಾರೆ. ಆದರೆ ಶಾಸಕರು ವೇದಿಕೆಯ ಕೆಳಗೆ ಮಾತ್ರವಲ್ಲದೆ, ವೇದಿಕೆ ಮೇಲೆ ತಮ್ಮ ಭಾಷಣದಲ್ಲೂ ‘ಭಜನಾ ಮಂದಿರ, ದೇವಸ್ಥಾನಗಳಿಗೆ ಕಲ್ಲು ಹೊಡೆಯುವವರೂ ಇಲ್ಲಿದ್ದಾರೆ’ ಎಂದು ಹೇಳಿದ್ದಾರೆ. ಹಲ್ಲೆಗೊಳಗಾಗಿದ್ದ ಯಶವಂತ ಪ್ರಭು ಅವರನ್ನು ಆಸ್ಪತ್ರೆಗೆ ದಾಖಲಿಸಿದ ಮೇಲೂ ಗಲಾಟೆ ಮಾಡಿಸಿದ್ದಾರೆ ಎಂದು ಹರೀಶ್ ಕುಮಾರ್ ಆರೋಪಿಸಿದರು.ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್. ಮಾತನಾಡಿ, ಶಾಸಕ ವೇದವ್ಯಾಸ ಕಾಮತ್ ಅವರ ವರ್ತನೆ ಅವರ ಸ್ಥಾನಕ್ಕೆ ಶೋಭೆ ತರುವಂಥದ್ದಲ್ಲ. ಇಂಥ ಹೇಳಿಕೆಗಳನ್ನು ನೀಡುವ ಮೂಲಕ ಹಿಂದೂಗಳನ್ನು ವಿಭಜಿಸೋದು ಇವರೇ. ಶಾಸಕರ ಹೇಳಿಕೆ ಸ್ವತಃ ಬಿಜೆಪಿ ಕಾರ್ಯಕರ್ತರಿಗೇ ನೋವು ತರಿಸಿದೆ ಎಂದು ಹೇಳಿದರು.ಕಾಂಗ್ರೆಸ್ ಮುಖಂಡರಾದ ಪದ್ಮರಾಜ್ ಆರ್., ಪ್ರಕಾಶ್ ಸಾಲ್ಯಾನ್, ಶಾಲೆಟ್ ಪಿಂಟೋ, ವಿಶ್ವಾಸ್ ದಾಸ್, ಲಾರೆನ್ಸ್ ಡಿಸೋಜ, ಶುಭೋದಯ ಆಳ್ವ, ದಯಾನಂದ ನಾಯ್ಕ್ ಮತ್ತಿತರರಿದ್ದರು.............
ಇಂದು ಸತ್ಯಪ್ರಮಾಣಕ್ಕೆ ಆಹ್ವಾನಘಟನೆ ವೇಳೆ ಕಾಂಗ್ರೆಸ್ ಕಾರ್ಯಕರ್ತರು ದಲಿತ ನಿಂದನೆ ಮಾಡಿದ್ದೇ ನಿಜವಾದರೆ ಶಾಸಕರು ಹಾಗೂ ಮಣಿ ಎಂಬವರು ಮಂಗಳವಾರ ಬೆಳಗ್ಗೆ 11 ಗಂಟೆಗೆ ಕದ್ರಿ ಮುಂಜನಾಥ ದೇವಸ್ಥಾನಕ್ಕೆ ಹಾಜರಾಗಿ ಈ ಬಗ್ಗೆ ಸತ್ಯಪ್ರಮಾಣ ಮಾಡಲಿ, ನಾವೂ ಬರುತ್ತೇವೆ ಎಂದು ಕಾಂಗ್ರೆಸ್ ಮುಖಂಡ ಪ್ರಕಾಶ್ ಸಾಲ್ಯಾನ್ ಆಹ್ವಾನ ನೀಡಿದರು.