ಕಾಂಗ್ರೆಸ್ ಸರ್ಕಾರ ವಿರುದ್ಧ ಉಡುಪಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ

KannadaprabhaNewsNetwork |  
Published : Apr 11, 2025, 12:31 AM IST
೩೨ | Kannada Prabha

ಸಾರಾಂಶ

ಗುರುವಾರ ಉಡುಪಿಯಲ್ಲಿ ಬಿಜೆಪಿ ವತಿಯಿಂದ ನಡೆದ ಕಾಂಗ್ರೆಸ್ ಸರ್ಕಾರದ ವಿರುದ್ಧ ಜನಾಕ್ರೋಶ ಯಾತ್ರೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸಹಿತ ಹಲವು ಮುಖಂಡರು ಪಾಲ್ಗೊಂಡರು.

ಕನ್ನಡಪ್ರಭ ವಾರ್ತೆ ಉಡುಪಿ

ರಾಜ್ಯದಲ್ಲಿ ಹಿಂದುಗಳ ಮೇಲೆ ದಬ್ಬಾಳಿಕೆ ನಡೆಸುತ್ತಿರುವ ಹಿಟ್ಲರ್ ಸರ್ಕಾರಕ್ಕೆ ಮುಂದಿನ ಚುನಾವಣೆಯಲ್ಲಿ ಬಡ್ಡಿ ಸಮೇತ ಉತ್ತರ ನೀಡುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.ಗುರುವಾರ ಉಡುಪಿಯಲ್ಲಿ ಬಿಜೆಪಿ ವತಿಯಿಂದ ನಡೆದ ಕಾಂಗ್ರೆಸ್ ಸರ್ಕಾರದ ವಿರುದ್ಧ ಜನಾಕ್ರೋಶ ಯಾತ್ರೆಯಲ್ಲಿ ಅವರು ಮಾತನಾಡಿದರು.

ಕಾಂಗ್ರೆಸ್ ಸರ್ಕಾರವನ್ನು ಟೀಕಿಸುವ ಬಿಜೆಪಿ ಕಾರ್ಯಕರ್ತರ, ಪತ್ರಕರ್ತರ ಮೇಲೆ ಕೇಸುಗಳನ್ನು ಹಾಕುತ್ತಿದೆ. ಕಾರ್ಯಕರ್ತರು ಪೊಲೀಸ್ ದಬ್ಬಾಳಿಕೆಗೆ ಹೆದರಬೇಕಾಗಿಲ್ಲ, ಮುಂದೆ ನಡೆಯುವ ಚುನಾವಣೆಯಲ್ಲಿ ಬಿಜೆಪಿಯನ್ನು ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ತರುವುದು ನನ್ನ ಮುಂದೆ ಇರುವ ಸವಾಲು ಮತ್ತು ಗುರಿಯಾಗಿದೆ. ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರುತ್ತೇವೆ, ಆಗ ಬಡ್ಡಿ ಸಮೇತ ಉತ್ತರ ನೀಡೋಣ ಎಂದರು.ಸಿದ್ದರಾಮಯ್ಯ ಅವರ ಹಿಂದೂ ವಿರೋಧಿ ಧೋರಣೆ ನೋಡಿದರೆ, ತಾನು ಕೇವಲ ಸಾಬರಿಂದಲೇ ಅಧಿಕಾರಕ್ಕೆ ಬಂದಿದ್ದೇನೆ, ಅವರಿಗೆ ಮಾತ್ರ ತಾನು ಮುಖ್ಯಮಂತ್ರಿ ಎಂಬಂತಿದೆ ಅವರ ವರ್ತನೆ. ಅಹಿಂದದ ಹೆಸರು ಹೇಳಿ ಅಧಿಕಾರಕ್ಕೆ ಬಂದು ಹಿಂದುಳಿದವರನ್ನೇ ಮರೆತಿದ್ದಾರೆ. ಇದು ಜನಪ್ರಿಯ ಸರ್ಕಾರ ಅಲ್ಲ, ಇದು ಜಾಹೀರಾತು ಸರ್ಕಾರ, ಇದು ಅಭಿವೃದ್ಧಿ ಪರವಲ್ಲ, ಅಭಿವೃದ್ಧಿ ಶೂನ್ಯ ಸರ್ಕಾರ, ಇದು ಬಡವರ ಪರವಲ್ಲ, ಬೆಲೆ ಏರಿಸಿ ಬಡವರಿಗೆ ಬರೆ ಎಳೆದ ಸರ್ಕಾರ ಎಂದವರು ಟೀಕಿಸಿದರು. ನಮ್ಮ ಜನಾಕ್ರೋಶ ಯಾತ್ರೆ ಯಾವುದೇ ಗಿಮಿಕ್ ಅಲ್ಲ, ಗಿಮಿಕ್ ಮಾಡುವುದಕ್ಕೆ ಈಗ ಯಾವುದೇ ಚುನಾವಣೆಗಳು ನಡೆಯುತ್ತಿಲ್ಲ. ರಾಜ್ಯ ಸರ್ಕಾರದ ಬೆಲೆ ಏರಿಕೆ, ಮುಸಲ್ಮಾನರ ಓಲೈಕೆ, ಎಸ್ಸಿಎಸ್ಟಿ ಅನುದಾನದ ದುರ್ಬಳಕೆ, ಭ್ರಷ್ಟಾಚಾರ ವಿರುದ್ಧ ಜನತೆಗೆ ನ್ಯಾಯ ಕೊಡಿಸುವುದೇ ಈ ಯಾತ್ರೆಯ ಉದ್ದೇಶ ಎಂದವರು ಹೇಳಿದರು.ಸಿದ್ದರಾಮಯ್ಯ ಚುನಾವಣೆಗೆ ಮೊದಲು ಕೃಷ್ಣೆಯ ಕಡೆಗೆ ಪಾದಯಾತ್ರೆ ಮಾಡಿದರು, ಡಿ.ಕೆ. ಶಿವಕುಮಾರ್ ಮೇಕೆದಾಟು ಪಾದಯಾತ್ರೆ ಮಾಡಿದರು. ಅಧಿಕಾರಕ್ಕೆ ಬಂದ ಮೇಲೆ ಇಬ್ಬರಿಗೂ ರಾಜ್ಯಕ್ಕೆ ಒಂದೇ ಒಂದು ನೀರಾವರಿ ಯೋಜನೆ ಕೊಡುವುದಕ್ಕಾಗಿಲ್ಲ. ಇವರು ಮಾಡಿದ್ದು ಗಿಮಿಕ್ ಯಾತ್ರೆ ಎಂದು ತಿರುಗೇಟು ನೀಡಿದರು.ದೇವಾಲಯಗಳಿಗೆ ಒಂದು ನಯಾಪೈಸೆ ನೀಡಿಲ್ಲ

ಲವ್ ಜಿಹಾದಿಗೆ ಬಲಿಯಾದ ಹಿಂದೂ ಹೆಣ್ಣು ಮಕ್ಕಳ ರಕ್ಷಣೆಗೆ ಯಾವುದೇ ಕ್ರಮ ಕೈಗೊಳ್ಳದ ಸರ್ಕಾರ, ಬಜೆಟ್ಟಿನಲ್ಲಿ ಮುಸ್ಲಿಂ ಹೆಣ್ಣುಮಕ್ಕಳ ಆತ್ಮಸಂರಕ್ಷಣೆಗೆ ಹಣ ಇಟ್ಟಿದೆ, ದೇವಾಲಯಗಳಿಗೆ ಒಂದು ನಯಾಪೈಸೆ ನೀಡಿಲ್ಲ, ಮೌಲ್ವಿಗಳ ಸಂಬಳ ಜಾಸ್ತಿ ಮಾಡಿದೆ, ಮುಸ್ಲಿಮರಿಗೆ ಸರ್ಕಾರಿ ಕಾಮಗಾರಿ ಗುತ್ತಿಗೆಯಲ್ಲಿ ಶೇ 4 ಮೀಸಲಾತಿ ಹೆಚ್ಚಿಸಿದೆ. ಇದರ ವಿರುದ್ಧ ಹೋರಾಟ ಮಾಡಿದ ಬಿಜೆಪಿ ಶಾಸಕರನ್ನೇ ಆರು ತಿಂಗಳು ಸಸ್ಪೆಂಡ್ ಮಾಡಿದ್ದಾರೆ. ಇವರು ಅಂಬೇಡ್ಕರ್ ಸಂವಿಧಾನದ ಬಗ್ಗೆ ಮಾತನಾಡುತ್ತಾರೆ ಎಂದವರು ಟೀಕಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಾಸಕರಾದ ವಿ.ಸುನಿಲ್ ಕುಮಾರ್, ಕಿರಣ್ ಕುಮಾರ್ ಕೊಡ್ಗಿ, ಹರೀಶ್‌ ಪೂಂಜಾ, ಗುರುರಾಜ ಗಂಟಿಹೊಳೆ, ಸುರೇಶ್‌ ಶೆಟ್ಟಿ, ದಕ್ಷಿಣ ಕನ್ನಡ ಸಂಸದ ಬ್ರಿಜೇಶ್‌ ಚೌಟ, ವಿಪ ಸದಸ್ಯರಾದ ರವಿಕುಮಾರ್, ಕಿಶೋರ್ ಕುಮಾರ್, ಡಾ.ಧನಂಜಯ ಸರ್ಜಿ, ಮಾಜಿ ಸಚಿವ ಪ್ರಮೋದ್ ಮದ್ವರಾಜ್, ಪಕ್ಷದ ನಾಯಕರಾದ ಉದಯಕುಮಾರ್ ಶೆಟ್ಟಿ, ಕುಯಿಲಾಡಿ ಸುರೇಶ್‌ ನಾಯಕ್, ದಿನೇಶ್‌ ಅಮೀನ್, ಜಿತೇಂದ್ರ ಶೆಟ್ಟಿ, ದೀಪಕ್‌ ಕುಮಾರ್ ಶೆಟ್ಟಿ, ಸುರೇಶ್‌ ಶೆಟ್ಟಿ ಗೋಪಾಡಿ, ರಾಜೀವ್ ಕುಲಾಲ್, ನವೀನ್‌ ನಾಯಕ್‌, ಪ್ರಭಾಕರ ಪೂಜಾರಿ, ಶಿಲ್ಪಾ ಜಿ. ಸುವರ್ಣ ಉಪಸ್ಥಿತರಿದ್ದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನಕರ ಶೆಟ್ಟಿ ಹೆರ್ಗ ಸ್ವಾಗತಿಸಿದರು, ರೇಶ್ಮಾ ಉದಯ ಶೆಟ್ಟಿ ವಂದಿಸಿದರು, ಪ್ರಸಾದ್‌ ಶೆಟ್ಟಿ ಕುತ್ಯಾರು ಕಾರ್ಯಕ್ರಮ ನಿರೂಪಿಸಿದರು.......................

ಸರ್ಕಾರ ಉರುಳಬಹುದು: ಕೋಟ

ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಈ ಜನಾಕ್ರೋಶ ಯಾತ್ರೆ ಮುಗಿಯುವುದರೊಳಗೆ ರಾಜ್ಯದಲ್ಲಿ ಸಿದ್ದರಾಮಯ್ಯ - ಡಿಕೆ ಶಿವಕುಮಾರ್ ನಡುವೆ ಜಟಾಪಟಿ ತಾರಕ್ಕೇರಿ ಸರ್ಕಾರ ಉರುಳಲೂಬಹುದು, ಬಿಜೆಪಿ ಮತ್ತೆ ಅಧಿಕಾರ ನಡೆಸಲು ಸಿದ್ಧರಾಗಬೇಕು ಎಂದು ಕರೆ ನೀಡಿದರು.ಕಾಂಗ್ರೆಸ್‌ಗೆ ಗೊತ್ತಾಗಿದೆ-ಛಲವಾದಿ:

ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಕಾಂಗ್ರೆಸ್‌ನವರಿಗೆ ಸರ್ಕಾರದ ಅವಧಿ ಇನ್ನೂ 3 ವರ್ಷ ಇರುವಾಗಲೇ ತಾವು ಮತ್ತೆ ಅಧಿಕಾರಕ್ಕೆ ಖಂಡಿತಾ ಬರುವುದಿಲ್ಲ. ಆದ್ದರಿಂದ ಬೇಕಾದಷ್ಟು ಇಷ್ಟಾಚಾರ, ಭ್ರಷ್ಟಾಚಾರ ನಡೆಸೋಣ ಎಂದು ಹೊರಟಿದ್ದಾರೆ ಎಂದು ಟೀಕಿಸಿದರು.ಭ್ರಷ್ಟಚಾರಕ್ಕೂ ಸ್ಪರ್ಧೆ - ರಾಮುಲು:

ಮಾಜಿ ಸಚಿವ ಶ್ರೀರಾಮುಲು ಮಾತನಾಡಿ, ರಾಜ್ಯದಲ್ಲಿ ಮೂಕ, ಕಿವುಡ, ಕುರುಡ ಸರ್ಕಾರ ಇದೆ. ಜಾಸ್ತಿ ವಸೂಲಿ ಮಾಡಿ ಹೈಕಮಾಂಡ್‌ಗೆ ಹೆಚ್ಚು ಕೊಡುವವರನ್ನು ಮಂತ್ರಿಗಳನ್ನಾಗಿ ಮಾಡಲಾಗಿದೆ. ಕಾಂಗ್ರೆಸ್ ನಲ್ಲಿ ಭ್ರಷ್ಟಾಚಾರ ಮಾಡುವುದಕ್ಕೂ ಸ್ಪರ್ಧೆ ಏರ್ಪಟ್ಟಿದೆ ಎಂದು ಲೇವಡಿ ಮಾಡಿದರು.ನಟ್‌ಬೋಲ್ಟ್ ಟೈಟ್ ಮಾಡ್ಬೇಕು - ಯಶ್‌ಪಾಲ್:

ಉಡುಪಿ ಶಾಸಕ ಯಶ್‌ಪಾಲ್‌ ಸುವರ್ಣ ಮಾತನಾಡಿ, ಬಿಜೆಪಿ ಕಾರ್ಯಕರ್ತರ ಮೇಲೆ ಸುಳ್ಳು ಕೇಸು ಹಾಕಿ ಜೈಲಿಗಟ್ಟಲಾಗುತ್ತಿದೆ. ಕರಾವಳಿಯ ಜಿಲ್ಲೆಗಳಿಗೆ ಅನುದಾನ ನೀಡದೆ ಅನ್ಯಾಯ ಮಾಡಲಾಗುತ್ತಿದೆ. ಸರ್ಕಾರಿ ಇಲಾಖೆಗಳ ನಟ್ಟು ಬೋಲ್ಟುಗಳನ್ನು ಟೈಟ್ ಮಾಡಬೇಕಾಗಿದೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಮುದಾಯ ಭವನ ನಿರ್ಮಾಣಕ್ಕೆ ಭೂಮಿ ಪೂಜೆ
ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಪೋಲಿಯೋ ಹಾಕಿಸಿ