ಹೊಸಪೇಟೆ: ವಿಧಾನ ಪರಿಷತ್‌ನ ಸದಸ್ಯರು ಹಾಗೂ ಕಾಂಗ್ರೆಸ್ ಮುಖಂಡ ಐವನ್ ಡಿಸೋಜಾ ರಾಜ್ಯಪಾಲರ ಬಗ್ಗೆ ನೀಡಿರುವ ಹೇಳಿಕೆ ಖಂಡಿಸಿ ಜಿಲ್ಲಾ ಬಿಜೆಪಿ ಯುವ ಮೋರ್ಚಾದಿಂದ ಮಂಗಳವಾರ ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ಅವರ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಲಾಯಿತು.ಯುವ ಮೋರ್ಚಾ ಜಿಲ್ಲಾಧ್ಯಕ್ಷ ಕಿಚಿಡಿ ಕೊಟ್ರೇಶ್ ಮಾತನಾಡಿ, ಕಾಂಗ್ರೆಸ್ ನಾಯಕ ಐವನ್ ಡಿಸೋಜಾ ರಾಜ್ಯದ ಘನತೆವೆತ್ತ ರಾಜ್ಯಪಾಲರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮುಡಾ ಹಗರಣದ ತನಿಖೆಗೆ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದನ್ನು ವಿರೋಧಿಸಿ ಮಂಗಳೂರಿನಲ್ಲಿ ತಮ್ಮ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುವಾಗ, ರಾಜ್ಯಪಾಲರ ವಿರುದ್ಧ ಬಾಂಗ್ಲಾದೇಶದಲ್ಲಿ ಆದ ಹಿಂಸಾಚಾರದ ಸ್ವರೂಪದಲ್ಲಿ ದಾಳಿ ಮಾಡುವುದಾಗಿ ರಾಷ್ಟ್ರ ವಿರೋಧಿ ಹೇಳಿಕೆ ಮತ್ತು ದುರುದ್ದೇಶ ಪೂರ್ವಕವಾದ ಪ್ರಚೋದನಾತ್ಮಕ ಹೇಳಿಕೆ ನೀಡಿರುವುದು ಖಂಡನೀಯ ಎಂದರು. ಐವನ್ ಡಿಸೋಜರ ವಿರುದ್ಧ ಕಾನೂನು ಪ್ರಕರಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ರಾಜ್ಯಪಾಲರನ್ನು ನಿಂದಿಸಲಾಗಿದೆ. ರಾಷ್ಟ ವಿರೋಧಿ ಹಾಗೂ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡಿಸುವ ದುರುದ್ದೇಶದಿಂದ ತಮ್ಮ ಕಾರ್ಯಕರ್ತರಿಗೆ ದೇಶ ವಿರೋಧಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಕುಮ್ಮಕು ನೀಡುವ ರೀತಿ ಪ್ರಚೋದನಾತ್ಮಕ ಹೇಳಿಕೆಗಳನ್ನು ನೀಡಿರುತ್ತಾರೆ. ಹಾಗಾಗಿ ಐವನ್ ಡಿಸೋಜಾ ವಿರುದ್ಧ ಸೂಕ್ತ ಪ್ರಕರಣ ದಾಖಲಿಸಿ, ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಎಸ್ಪಿ ಶ್ರೀಹರಿಬಾಬು ಅವರಿಗೆ ಮನವಿ ಸಲ್ಲಿಸಲಾಯಿತು.
ಯುವ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿನೋದ್ ಜಾಡರ್, ನಗರ ಘಟಕ ಅಧ್ಯಕ್ಷ ರೇವಣಸಿದ್ದಪ್ಪ, ಮುಖಂಡರಾದ ಚಂದ್ರು ದೇವಲಾಪುರ, ಯುವ ಮೋರ್ಚಾ ಮಂಡಲ ಅಧ್ಯಕ್ಷ ಎಚ್.ರಾಘವೇಂದ್ರ, ಮಧುರಚನ್ನಶಾಸ್ತ್ರಿ, ಕೆ.ಹೊನ್ನೂರಪ್ಪ, ಕಿರಣ್, ತಿರುಮಲೇಶ್,, ಸೂರಿ ಬಂಗಾರು, ವ್ಯಾಸರಾಜ್, ಹರ್ಷ, ಶಶಿಕುಮಾರ್, ಪ್ರಮೋದ್, ಗೌಳಿ ಬಸವರಾಜ್, ಕುಮಾರಪ್ಪ, ಶಂಕರ್, ಮಲ್ಲಿಕಾರ್ಜುನ ಮತ್ತಿತರರಿದ್ದರು.