;Resize=(412,232))
ಬೆಂಗಳೂರು : ‘ಬೆಂಗಳೂರಿನ ಅಭಿವೃದ್ಧಿಗೆ ಶಾಪವಿದ್ದರೆ ಅದು ಬಿಜೆಪಿಯವರು ಮಾತ್ರ. ನಗರದ ಸಂಚಾರದಟ್ಟಣೆ ನಿಯಂತ್ರಣಕ್ಕೆ ಟನಲ್ ರಸ್ತೆ, ಡಬಲ್ ಡೆಕ್ಕರ್ ಮಾರ್ಗದಂತಹ ಯೋಜನೆ ಅತ್ಯಗತ್ಯ.
ಇವು ಬೇಡ ಪರ್ಯಾಯ ಏನು ಎಂಬುದನ್ನು ಹೇಳಲಿ’ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸವಾಲು ಹಾಕಿದ್ದಾರೆ. ಉದ್ಯಾನಗಳ ಜಾಗ ಬಳಕೆ ವಿಚಾರದಲ್ಲೂ ತಪ್ಪಾಗಿಲ್ಲ. ಬಿಜೆಪಿಯವರು ಅನಗತ್ಯವಾಗಿ ನನ್ನನ್ನು ಕೆಣಕುವುದು ಬೇಡ. ಜೆ.ಪಿ.ಪಾರ್ಕ್ ಸೇರಿ ಎಲ್ಲೆಲ್ಲಿ ಏನಾಗಿದೆ ಎಂಬ ದಾಖಲೆ ಬಿಡುಗಡೆ ಮಾಡುತ್ತೇನೆ ಎಂದು ಎಚ್ಚರಿಕೆ ನೀಡಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಯೂಟರ್ನ್ ಏಕೆ ಮಾಡಬೇಕು. ಜನರ ಭಾವನೆಗಳಿಗೆ ಬೆಲೆ ನೀಡಿದ್ದೇವೆ. ಯಡಿಯೂರಪ್ಪ, ಬೊಮ್ಮಾಯಿ ಅವರ ಕಾಲದಲ್ಲಿ ಏನಾಗಿದೆ ಎಂಬ ಪಟ್ಟಿ ಬಿಡುಗಡೆ ಮಾಡುತ್ತೇವೆ. ಈ ಬಗ್ಗೆ ಚರ್ಚೆಯಾಗಬೇಕು. ಲಾಲ್ ಬಾಗ್‌ನಲ್ಲಿಯೇ ಟನಲ್ ಮಾಡಬೇಕೆಂಬ ಉದ್ದೇಶವಿಲ್ಲ. ಇದಕ್ಕೆ ಪರ್ಯಾಯ ಮಾರ್ಗವನ್ನು ಪರಿಶೀಲಿಸಲಾಗುವುದು ಎಂದರು.
ಹಿಂದೆ ಸಿದ್ದರಾಮಯ್ಯನವರು ಸ್ಟೀಲ್ ಬ್ರಿಡ್ಜ್ ಮಾಡಲು ಹೊರಟಾಗಲು ಬಿಜೆಪಿ ವಿರೋಧಿಸಿತ್ತು. ಬಿಜೆಪಿಯವರು ಅಭಿವೃದ್ದಿಯ ವಿರೋಧಿಗಳು. ಬೆಂಗಳೂರಿಗೆ ಏನಾದರೂ ಶಾಪವಿದ್ದರೆ ಅದು ಬಿಜೆಪಿಯವರು. ಅವರ ಕಾಲದಲ್ಲಿ ಯಾವುದಾದರೂ ಒಂದು ಗುರುತರ ಯೋಜನೆ ಮಾಡಿದ್ದರೆತೋರಿಸಲಿ. ಇವರಿಗೆ ಬದ್ಧತೆಯಿದ್ದರೆ ಮಹಾರಾಷ್ಟ್ರ, ದೆಹಲಿಯಲ್ಲಿ ಟನಲ್ ರಸ್ತೆ ನಿಲ್ಲಿಸಲಿ ಎಂದು ಹೇಳಿದರು.
ಇನ್ನು ಬೆಂಗಳೂರಿನ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಟನಲ್ ರಸ್ತೆ, ಡಬಲ್ ಡೆಕ್ಕರ್ ಮಾರ್ಗದಂತಹ ಯೋಜನೆ ಅತ್ಯಗತ್ಯ. ಟನಲ್ ರಸ್ತೆ ಬೇಡ ಎನ್ನುವವರು ಅದಕ್ಕೆ ಪರ್ಯಾಯ ಏನು ಎಂಬುದನ್ನು ಹೇಳಬೇಕಲ್ಲವೇ ಎಂದರು.
ಮೆಟ್ರೋ, ಶಾಸಕರ ಭವನ, ಪ್ರೆಸ್ ಕ್ಲಬ್, ಬಸವ ಭವನ, ಹೈಕೋರ್ಟ್ ಪಾರ್ಕಿಂಗ್ ಹಾಗೂ ಇಂದಿರಾ ಗಾಂಧಿ ಫೌಂಟೇನ್‌ಗೆ ಹಿಂದೆ ಸಾರ್ವಜನಿಕ ಭೂಮಿಯನ್ನೇ ನೀಡಲಾಗಿತ್ತು. ಕಾಲಕಾಲಕ್ಕೆ ಕೆಲವು ನಿರ್ಣಯಗಳಾಗಿವೆ. ಎಲ್ಲಾ ಸೇರಿ ಕೆಲಸ ಮಾಡೋಣ ಎಂದು ಈಗಾಗಲೇ ಹೇಳಿದ್ದೇನೆ. ಸಲಹೆ ಸ್ವೀಕಾರ ಮಾಡಿದರೆ ಯೂ ಟರ್ನ್ ಮಾಡಿದ್ದೇನೆ ಎಂದಾಗುತ್ತದೆಯೇ ಎಂದು ಪ್ರಶ್ನಿಸಿದರು.
ಚರ್ಚೆ ಮಾಡಬೇಕೆನ್ನುವ ಕಾರಣದಿಂದ ವಿಧೇಯಕವನ್ನು ಹಿಂಪಡೆಯಲಾಗಿದೆ. 16.5 ಕಿ.ಮೀ ಟನಲ್ ರಸ್ತೆ ಯೋಜನೆಗಾಗಿ ಲಾಲ್‌ಬಾಗ್ ಜಾಗವನ್ನು ಕಬಳಿಸುವ ಯಾವುದೇ ಉದ್ದೇಶ ಸರ್ಕಾರಕ್ಕಿಲ್ಲ. ನಾವು ಉದ್ಯಾನವನಗಳನ್ನು ಮಾರಾಟ ಮಾಡುತ್ತಿಲ್ಲ. ಮೆಟ್ರೋಗೆ ಜಾಗ ಕೊಡಲು ಭೂಮಿಯನ್ನು ವರ್ಗಾಯಿಸಬೇಕು ಎಂದು ಶಿವಕುಮಾರ್ ಸ್ಪಷ್ಟಪಡಿಸಿದರು.
ನಾನು ಮುಖ್ಯಮಂತ್ರಿ ಸ್ಥಾನದಲ್ಲಿ ಕೂತು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಕೇಂದ್ರ ಸಚಿವ ಕುಮಾರಸ್ವಾಮಿ, ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಬಳಸುವ ಪದಗಳನ್ನು ಬಳಸಲಾಗುವುದಿಲ್ಲ. ನನಗೆ ಗೌರವ ಕೊಡದಿದ್ದರೂ ನಾಡಿನ ಜನತೆ ಹಾಗೂ ಪಕ್ಷ ಕೊಟ್ಟಿರುವ ಸ್ಥಾನಕ್ಕಾದರೂ ಬೆಲೆ ಕೊಡಲಿ. ನಿಮ್ಮ ನಾಲಿಗೆಯ ಮೇಲೆ ಹತೋಟಿ ಇರಲಿ ಎಂದು ನಮ್ರತೆಯಿಂದ ಹೇಳುತ್ತಿದ್ದೇನೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ನಿಮ್ಮ ತಂದೆಯವರೂ ಕೂಡ ಇದೇ ಸ್ಥಾನವನ್ನು ಅಲಂಕರಿಸಿದ್ದರು ಎನ್ನುವ ಪರಿವೆ ಇರಲಿ. ಅವರ ಬೇಡಿಕೆಗಳನ್ನು ಕೇಳಲಿ, ಅದರಲ್ಲಿ ತಪ್ಪಿಲ್ಲ. ಈ ಬಗ್ಗೆ ಸದನದಲ್ಲಿ ವಿಸ್ತೃತ ಚರ್ಚೆಗೆ ಅವಕಾಶ ಮಾಡಿಕೊಡಲು ಮಾತ್ರ ವಿಧೇಯಕ ಹಿಂಪಡೆಯಲಾಗಿದೆ ಎಂದರು.