ಹೊಸಪೇಟೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ರಾಜ್ಯಪಾಲ ಥಾವರ್‌ಚಂದ್ ಗೆಹಲೊತ್ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದನ್ನು ಖಂಡಿಸಿ ನಗರದ ಮಹಾತ್ಮ ಗಾಂಧಿ ವೃತ್ತದಿಂದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದ ವರೆಗೆ ಜಿಲ್ಲಾ ಕಾಂಗ್ರೆಸ್ ವತಿಯಿಂದ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಸೋಮವಾರ ಪಾದಯಾತ್ರೆ ನಡೆಸಿದರು.
ಮಾಜಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಮಾತನಾಡಿ, ದೇಶದಲ್ಲಿ ಚುನಾಯಿತ ಸರ್ಕಾರಗಳನ್ನು ಅಸ್ಥಿರಗೊಳಿಸಿ, ಬಿಜೆಪಿ ಬ್ರಿಟಿಷರ ರೀತಿ ಆಡಳಿತ ನಡೆಸಲು ಹೊರಟಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾವುದೇ ತಪ್ಪು ಮಾಡದಿದ್ದರೂ ರಾಜ್ಯಪಾಲರನ್ನು ಬಳಸಿಕೊಂಡು ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಡಿಸಿದ್ದಾರೆ. ಅವರ ಹುನ್ನಾರ ಎಂದಿಗೂ ಫಲಿಸುವುದಿಲ್ಲ. ರಾಜ್ಯದ ಕಾಂಗ್ರೆಸ್ ಸರ್ಕಾರವನ್ನು ಅಲುಗಾಡಿಸಲು ಆಗುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವುದೇ ತಪ್ಪು ಮಾಡಿಲ್ಲ. ಮುಡಾ ಅವರ ಧರ್ಮ ಪತ್ನಿ ಪಾರ್ವತಮ್ಮ ಹೆಸರಿನಲ್ಲಿದ್ದ ಜಮೀನನ್ನು ಸ್ವಾಧೀನಪಡಿಸಿಕೊಂಡಿತ್ತು. ಈ ತಪ್ಪನ್ನು ಸರಿಪಡಿಸಿಕೊಳ್ಳಲು 3 ಎಕರೆ 16 ಗುಂಟೆ ಜಮೀನು ಬದಲಿಗೆ 14 ನಿವೇಶನಗಳನ್ನು ನೀಡಿದೆ. ಇದರಲ್ಲಿ ಭ್ರಷ್ಟಾಚಾರವೇ ನಡೆದಿಲ್ಲ. ಈ ಪ್ರಕ್ರಿಯೆ ನಡೆದಿರುವುದು ಬಿಜೆಪಿ ಆಡಳಿತದಲ್ಲಿದ್ದಾಗ, ಆದರೆ, ಇದನ್ನೇ ಹಗರಣ ಎಂದು ಹುನ್ನಾರ ನಡೆಸಿ, ಬಿಜೆಪಿ-ಜೆಡಿಎಸ್‌ನವರು ಸಿಎಂ ವಿರುದ್ಧ ಪ್ರಾಸಿಕ್ಯೂಷನ್ ಕೊಡಿಸಿದ್ದಾರೆ. ಇದು ಪಕ್ಕಾ ರಾಜಕೀಯ ದುರುದ್ದೇಶಪೂರಿತ ನಡೆಯಾಗಿದೆ. ರಾಜ್ಯಪಾಲರ ನಡೆ ವಿರುದ್ಧ ಕಾಂಗ್ರೆಸ್ ಹಾಗೂ ರಾಜ್ಯ ಸರ್ಕಾರ ಕಾನೂನು ಹೋರಾಟ ನಡೆಸಲಿದೆ ಎಂದರು.ಸಂಸದ ಈ. ತುಕಾರಾಂ ಮಾತನಾಡಿ, ರಾಜ್ಯದಲ್ಲಿ ದೇವರಾಜ್ ಅರಸು ಮಾದರಿಯಲ್ಲಿ ಸಿದ್ದರಾಮಯ್ಯ ಅವರು ಆಡಳಿತ ನೀಡಿದ್ದಾರೆ. ಬಿಜೆಪಿ ಸರ್ಕಾರ ಕಾರ್ಪೊರೇಟ್ ಪರವಾಗಿ ಕೆಲಸ ಮಾಡುತ್ತದೆ. ಆದರೆ, ಕಾಂಗ್ರೆಸ್ ಜನಪರ ಆಡಳಿತ ನೀಡುತ್ತದೆ ಎಂಬುದಕ್ಕೆ ಪಂಚ ಗ್ಯಾರಂಟಿಗಳೇ ಸಾಕ್ಷಿ. ಈ ಗ್ಯಾರಂಟಿಗಳನ್ನು ಬಂದ್ ಮಾಡಲು ಸುಖಾಸುಮ್ಮನೇ ಕೇಂದ್ರ ಸರ್ಕಾರ ಕಾಟ ಕೊಡುತ್ತಿದೆ. 136 ಶಾಸಕರನ್ನು ಹೊಂದಿದ ಸರ್ಕಾರವನ್ನು ಅಭದ್ರ ಮಾಡಲು ಹೊರಟಿದ್ದಾರೆ. ಇವರ ಆಸೆ ಎಂದಿಗೂ ಫಲಿಸುವುದಿಲ್ಲ. ರಾಜ್ಯಪಾಲರು ಸಂವಿಧಾನ ಉಳಿಸಬೇಕು. ಸಂವಿಧಾನವನ್ನು ಕಗ್ಗೊಲೆ ಮಾಡಬಾರದು. ಪ್ರಜಾಪ್ರಭುತ್ವ ಆಶಯದ ವಿರುದ್ಧ ನಡೆದುಕೊಳ್ಳಬಾರದು ಎಂದರು.
ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಅವರ ಮೂಲಕ ರಾಷ್ಟ್ರಪತಿಗೆ ಮನವಿಪತ್ರ ರವಾನಿಸಿದರು.