ಹಾವೇರಿ: ರಾಜ್ಯ ಸರ್ಕಾರದ ಬೆಲೆ ಏರಿಕೆ ಖಂಡಿಸಿ ಹಾಗೂ ಕಾಂಗ್ರೆಸ್‌ನ ಜನವಿರೋಧಿ ನೀತಿ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಬಿಜೆಪಿ ಹಮ್ಮಿಕೊಂಡಿರುವ ಜನಾಕ್ರೋಶ ಯಾತ್ರೆ ಏ. 21ರಂದು ಮಧ್ಯಾಹ್ನ 2 ಗಂಟೆಗೆ ನಗರಕ್ಕೆ ಆಗಮಿಸಲಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಅರುಣಕುಮಾರ ಪೂಜಾರ ಹೇಳಿದರು.
ರಾಜ್ಯ ಸರ್ಕಾರ ದಿವಾಳಿ ಆಗಿದೆ. ಆದರೂ ರಾಜ್ಯದ ಜನರ ಲೂಟಿ ಹೊಡೆಯುವುದು ನಿಂತಿಲ್ಲ. ಜನರ ಮೇಲೆ ತಮ್ಮ ಭ್ರಷ್ಟಾಚಾರದ ಹೊರೆ ಹಾಕುತ್ತಿದ್ದಾರೆ. ದಿನನಿತ್ಯದ ವಸ್ತುಗಳ ಬೆಲೆ ಏರಿಸಿ ಜನರಿಗೆ ಮೋಸ ಮಾಡುತ್ತಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದ್ದು, ಕಾನೂನಿನ ಭಯವಿಲ್ಲದಂತಾಗಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿ ಖಂಡಿಸಿ, ರಾಜ್ಯದ ಜನರಲ್ಲಿ ಜಾಗೃತಿ ಮೂಡಿಸಲು ಬಿಜೆಪಿ ವತಿಯಿಂದ ರಾಜ್ಯಾದ್ಯಂತ ಜನಾಕ್ರೋಶ ಯಾತ್ರೆ ಆರಂಭಿಸಿದೆ ಎಂದರು.
ಗ್ಯಾರಂಟಿ ಯೋಜನೆಗಳ ಮೂಲಕ ಬಡವರ ಕಷ್ಟಗಳಿಗೆ ಸ್ಪಂದಿಸುತ್ತೇವೆ ಎಂದು ಅಧಿಕಾರಕ್ಕೆ ಬಂದ ರಾಜ್ಯ ಕಾಂಗ್ರೆಸ್ ಸರ್ಕಾರ ಈಗ ಬೆಲೆ ಏರಿಕೆ ಮಾಡಿ ಬಡರವನ್ನು ಸಂಕಷ್ಟಕ್ಕೆ ದುಡುತ್ತಿದೆ. ಸರ್ಕಾರಕ್ಕೆ ಗ್ಯಾರಂಟಿ ಯೋಜನೆಗಳಿಗೆ ಹಣ ಕೊಡಲು ಪರದಾಡುತ್ತಿದೆ. ಸಾಲ ಮಾಡುವುದರಲ್ಲಿ ರಾಜ್ಯ ಸರ್ಕಾರ ನಂಬರ್ ಒನ್ ಆಗಿದ್ದು, ರಾಜ್ಯದ ಆರ್ಥಿಕ ವ್ಯವಸ್ಥೆಯನ್ನು ದುರ್ಬಲ ಮಟ್ಟಕ್ಕೆ ಒಯ್ಯುತ್ತಿದೆ ಎಂದು ಅರುಣಕುಮಾರ ಪೂಜಾರ ಹೇಳಿದರು.ಮಾಜಿ ಸಚಿವ ಬಿ.ಸಿ. ಪಾಟೀಲ ಮಾತನಾಡಿ, ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಸಾರ್ವಜನಿಕ ಆಡಳಿತ, ಶಾಂತಿ -ಸುವ್ಯವಸ್ಥೆಯಲ್ಲಿ ಸಂಪೂರ್ಣ ಹದಗೆಟ್ಟಿದೆ. ರಾಜ್ಯದಲ್ಲಿ ಕೊಲೆ, ದರೋಡೆ, ಅತ್ಯಾಚಾರ, ಮಟ್ಕಾ, ಜೂಜಾಟ ಮುಕ್ತವಾಗಿ ನಡೆಯುತ್ತಿವೆ. ಇನ್ನು ರಾಜ್ಯದ ಗೃಹಮಂತ್ರಿ ಎನಿಸಿಕೊಂಡವರು ನಗರಗಳಲ್ಲಿ ಅತ್ಯಾಚಾರ ಎಂಬುದು ಸಹಜ ಎಂಬ ಹೇಳಿಕೆ ಮೂಲಕ ತಮ್ಮ ಅಸಮರ್ಥತೆಯನ್ನು ತೋರಿಸಿಕೊಂಡಿದ್ದಾರೆ. ರಾಜ್ಯದಲ್ಲಿ ಯಾರಿಗೆ ತೊಂದರೆ, ಅನ್ಯಾಯವಾದರೂ ನ್ಯಾಯ ಸಿಗಲಾರದ ಸ್ಥಿತಿ ಇದೆ. ಇಲ್ಲಿ ಪೊಲೀಸ್ ಠಾಣೆಗೆ ತೊಂದರೆಯಾಗಿದೆ ಎಂದು ದೂರು ನೀಡಲು ಹೋದರೆ ಮೊದಲು ಶಾಸಕರನ್ನು ಕೇಳಿ, ಅವರು ಒಪ್ಪಿಗೆ ನೀಡಿದಾಗ ಮಾತ್ರ ಎಫ್‌ಐಆರ್ ದಾಖಲಾಗುತ್ತಿವೆ. ಈ ಸರ್ಕಾರಕ್ಕೆ ನಾಚಿಕೆಯಾಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಂಜುಂಡೇಶ ಕಳ್ಳೇರ, ಸಂತೋಷ ಆಲದಕಟ್ಟಿ, ಪರಮೇಶಪ್ಪ ಮೇಗಳಮನಿ, ವೆಂಕಟೇಶ ನಾರಾಯಣಿ, ಗಿರೀಶ ತುಪ್ಪದ ಇತರರು ಇದ್ದರು.