ಹುಬ್ಬಳ್ಳಿ: ಬಿಜೆಪಿಯವರಿಗೆ ಟೀಕೆ ಮಾಡುವುದೇ ಕೆಲಸವಾಗಿದೆ - ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್

KannadaprabhaNewsNetwork | Updated : Jan 13 2025, 12:48 PM IST

ಸಾರಾಂಶ

ಸಿಎಲ್‌ಪಿ ಸಭೆಯಲ್ಲಿ ಚರ್ಚೆ ನಡೆಸುವ ವಿಚಾರದಲ್ಲಿ ಯಾವುದೇ ಅಜೆಂಡಾ ಈ ವರೆಗೂ ಅಂತಿಮವಾಗಿಲ್ಲ ಎಂದು ಸಚಿವ ಲಾಡ್ ಹೇಳಿದರು.

ಹುಬ್ಬಳ್ಳಿ: ಕಾಂಗ್ರೆಸ್ ಸರ್ಕಾರ ಏನೇ ಮಾಡಿದರೂ ಬಿಜೆಪಿ ಟೀಕೆ ಮಾಡುತ್ತದೆ. ಬಿಜೆಪಿಗೆ ಯಾವುದು ಸರಿ, ಯಾವುದು ತಪ್ಪು ಎಂಬ ಅರಿವಿಲ್ಲ. ಟೀಕೆ ಮಾಡುವುದನ್ನೇ ಒಂದು ಕೆಲಸ ಮಾಡಿಕೊಂಡಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಟೀಕಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಕ್ಸಲ್ ಶರಣಾಗತಿಯ ಬಗ್ಗೆ ಬಿಜೆಪಿಯವರು ಬೇಕಾಬಿಟ್ಟಿಯಾಗಿ ಆರೋಪಿಸುತ್ತಿದ್ದಾರೆ. ನಕ್ಸಲರು ಮುಖ್ಯಮಂತ್ರಿಗಳ ಹತ್ತಿರ ಬಂದು ಶರಣಾಗತಿಯಾಗಿರುವುದು ತಪ್ಪಾ? ಯಾವುದು ಸರಿ, ಯಾವುದು ತಪ್ಪು ಎಂಬುದನ್ನು ಪರಿಶೀಲಿಸಿಕೊಂಡು ಮಾತನಾಡಬೇಕು ಎಂದು ಕಿಡಿಕಾರಿದರು.

ಸಿಎಲ್‌ಪಿ ಸಭೆಯಲ್ಲಿ ಚರ್ಚೆ ನಡೆಸುವ ವಿಚಾರದಲ್ಲಿ ಯಾವುದೇ ಅಜೆಂಡಾ ಈ ವರೆಗೂ ಅಂತಿಮವಾಗಿಲ್ಲ. ಸಭೆಯಲ್ಲಿ ಏನು ಚರ್ಚೆಯಾಗುತ್ತದೆಯೋ ಅದನ್ನು ನಾವು ಹೇಳುತ್ತೇವೆ. ಗಾಂಧಿ ಭಾರತ ಕಾರ್ಯಕ್ರಮ ಬಗ್ಗೆ ಚರ್ಚೆಯಾಗಲಿದೆ ಎಂದರು.

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಾನು ಮುಖ್ಯಮಂತ್ರಿಯಾಗಲು ಯಾವುದೇ ಶಾಸಕರ ಬೆಂಬಲ ಬೇಡ ಎಂದಿರುವ ಕುರಿತು ಮಾತನಾಡಿದ ಅವರು, ಈ ಬಗ್ಗೆ ಡಿ.ಕೆ. ಶಿವಕುಮಾರ್ ಅವರನ್ನೇ ಕೇಳಿ. ನನಗೆ ಕೇಳಿದರೆ ನಾನೇನು ಹೇಳಲಿ? ಎಂದರು.

ಸ್ಪಷ್ಟಪಡಿಸಲಿ

ಗೃಹ ಸಚಿವ ಅಮಿತ್ ಶಾ ಹೇಳಿಕೆಯಿಂದ ಉಂಟಾಗಿರುವ ಅಂಬೇಡ್ಕ‌ರ್ ಅಭಿಮಾನಿಗಳ ಹಾಗೂ ಸಾರ್ವಜನಿಕರ ಆಕ್ರೋಶವನ್ನು ಶಮನ ಮಾಡಲು ಬಿಜೆಪಿಯವರು ಕಾಂಗ್ರೆಸ್ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕ‌ರ್ ಸಿದ್ಧಾಂತವನ್ನು ಬಿಜೆಪಿ, ಆರ್‌ಎಸ್‌ಎಸ್‌ನವರು ಮನಃಪೂರ್ವಕವಾಗಿ ಒಪ್ಪುತ್ತಾರೆಯೇ? ಎಂಬುದು ಮೊದಲು ಸ್ಪಷ್ಟವಾಗಬೇಕಿದೆ ಎಂದರು.

ಸಿದ್ಧಾಂತ ಒಪ್ಪಿಲ್ಲ

ಬಿಜೆಪಿಯವರಾಗಲಿ, ಆರ್‌ಎಸ್‌ಎಸ್‌ನವರಾಗಲಿ ಎಂದಿಗೂ ಅಂಬೇಡ್ಕ‌ರ್, ಬಸವಣ್ಣನವರ ಸಿದ್ಧಾಂತ ಒಪ್ಪುವುದಿಲ್ಲ. ಇಂದಿಗೂ ಬಿಜೆಪಿ, ಆರ್‌ಎಸ್‌ಎಸ್‌ ಕಚೇರಿಯಲ್ಲಿ ಡಾ. ಬಿ.ಆರ್‌. ಅಂಬೇಡ್ಕರ್ ಫೋಟೋ ಇಲ್ಲ. ಮಾಜಿ ಸಚಿವ ಅನಂತಕುಮಾರ ಹೆಗಡೆ ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದು ಹೇಳಿದ್ದಾಗ ಬಿಜೆಪಿ, ಆರ್‌ಎಸ್‌ಎಸ್‌ನವರು ಏಕೆ ಪ್ರತಿಭಟಿಸಲಿಲ್ಲ ಎಂದು ಪ್ರಶ್ನಿಸಿದರು.

ಗೆಲ್ಲಿಸಿದ್ದಾರೆಯೇ?

ಕಾಂಗ್ರೆಸ್ ಹಾಗೂ ಅಂಬೇಡ್ಕರ್ ನಡುವೆ ರಾಜಕೀಯ ಭಿನ್ನಾಭಿಪ್ರಾಯವಿತ್ತು. ಅಂಬೇಡ್ಕರ್ ಅವರು ತಮ್ಮದೇ ಪಕ್ಷದಿಂದ ಸ್ಪರ್ಧೆ ಮಾಡಿದ್ದಾಗ ಅವರ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಿದ್ದರು. ರಾಜಕೀಯದಲ್ಲಿ ಇದು ಸಾಮಾನ್ಯ. ನಾವು ಗೆಲ್ಲುವಾಗ ಇನ್ನೊಬ್ಬರು ಸೋಲಬೇಕು. ಅಂಬೇಡ್ಕರ್ ಅವರನ್ನು ಬಿಜೆಪಿ, ಆರ್‌ಎಸ್‌ಎಸ್‌ನವರು ಎಂದಾದರೂ ಗೆಲ್ಲಿಸಿದ್ದಾರೆಯೆ? ಅಂಬೇಡ್ಕ‌ರ್ ಅವರನ್ನು ಕಾರ್ಮಿಕ ಸಚಿವರನ್ನಾಗಿ ಮಾಡಿದ್ದು ಕಾಂಗ್ರೆಸ್. ಅವರಿಗೆ ಎಲ್ಲ ರೀತಿಯ ಗೌರವ ಕೊಟ್ಟಿದ್ದೇವೆ. ಅವರಿಗೆ ಭಾರತ ರತ್ನ ಕೊಡದಿರಲು ಕಾರಣವೇನು ಎಂಬುದು ನನಗೆ ಗೊತ್ತಿಲ್ಲ. ಅದಕ್ಕೆ ರಾಜಕೀಯ ಅಥವಾ ರಾಜಕೀಯೇತರ ಕಾರಣಗಳು ಇರಬಹುದು ಎಂದರು.

Share this article