ಧಾರವಾಡ: ಹೊಸದಾಗಿ ಅಸ್ತಿತ್ವಕ್ಕೆ ಬರುತ್ತಿರುವ ಧಾರವಾಡ ಮಹಾನಗರ ಪಾಲಿಕೆ ಬಗ್ಗೆ ಬಿಜೆಪಿ ದ್ವೀಮುಖ ನೀತಿ ಅನುಸರಿಸುತ್ತಿದ್ದು, ಬಿಜೆಪಿಯ ಸ್ಥಳೀಯ ಮುಖಂಡರು ಧಾರವಾಡ ಜನರ ಭಾವನೆಗಳೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಅರವಿಂದ ಏಗನಗೌಡರ ಹೇಳಿದರು.
ಇದಕ್ಕಿಂತ ಬೇಸರ ಸಂಗತಿ ಏನೆಂದರೆ, ಮೌಜಿ ಮೇಯರ್ ಈರೇಶ ಅಂಚಟಗೇರಿ ಅವರ ಮೂಲಕ ಪೌರಾಡಳಿತ ನಿರ್ದೇಶನಾಲಯಕ್ಕೆ ಅಸಂಬದ್ಧ 19 ಆಕ್ಷೇಪಣೆ ಸಲ್ಲಿಸುವ ಮೂಲಕ ಬಿಜೆಪಿಯ ಹುಬ್ಬಳ್ಳಿಯ ಮುಖಂಡರು ಧಾರವಾಡ ಜನತೆಗೆ ಮೋಸ ಮಾಡುತಿದ್ದಾರೆ ಎಂದು ಆರೋಪಿಸಿದ ಏಗನಗೌಡರ, ಒಂದು ವೇಳೆ ಬಿಜೆಪಿಯ ಈ ನೀತಿಯಿಂದಾಗಿ ಧಾರವಾಡಕ್ಕೆ ಪಾಲಿಕೆ ಭಾಗ್ಯ ತಪ್ಪಿದರೆ ಅದಕ್ಕೆ ಬಿಜೆಪಿ ಮುಖಂಡರೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿಷ ಬೀಜ ಬಿತ್ತಿದರುಪಾಲಿಕೆ ವಿರೋಧ ಪಕ್ಷದ ನಾಯಕ ರಾಜಶೇಖರ ಕಮತಿ, ಸದಸ್ಯರಾದ ಶಂಭುಗೌಡ ಸಾಲಿಮನಿ ಹಾಗೂ ಕವಿತಾ ಕಬ್ಬೇರ ಮಾತನಾಡಿ, ಧಾರವಾಡದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಧಾರವಾಡ ಪಾಲಿಕೆ ರಚಿಸಿದ್ದು, ಬಿಜೆಪಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಪ್ರತ್ಯೇಕ ಪಾಲಿಕೆಗೆ ಯಾವ ಪ್ರಯತ್ನ ಮಾಡದೇ, ನಾವೇ ಮಾಡಿರುವುದಾಗಿ ದೊಡ್ಡ ಬ್ಯಾನರ್ ಹಾಕಿದರು. ಈಗ ಪಾಲಿಕೆಯ ಪ್ರಕ್ರಿಯೆಗೆ ಹೆಜ್ಜೆ ಹೆಜ್ಜೆಗೂ ಅಡ್ಡಗಾಲು ಹಾಕುತ್ತಿದ್ದಾರೆ. ಸುತ್ತಲಿನ ಹಳ್ಳಿಗಳಲ್ಲಿ ವಿಷಬೀಜ ಬಿತ್ತಿ ಅವರಿಂದ ಪ್ರತಿಭಟನೆ ಮಾಡಿಸಿದರು. ಈಗ ಅನವಶ್ಯಕವಾದ ಆಕ್ಷೇಪಣೆಗಳನ್ನು ಒಂದೇ ಮಾದರಿಯಲ್ಲಿ ಸಲ್ಲಿಸಿದ್ದಾರೆ. ಈ ದ್ವಿಮುಖ ನೀತಿಯನ್ನು ಧಾರವಾಡ ಜನರು ಅರ್ಥೈಸಿಕೊಳ್ಳಬೇಕು ಎಂದರು.