ಬಿಜಿಕೆರೆ ಬಸವರಾಜ
------ ಪ್ರತಿ ಕೆ.ಜಿಗೆ ₹200 ರಿಂದ ₹250 | ತಾಲೂಕಿನಲ್ಲಿ ಒಟ್ಟು 15 ಹೆಕ್ಟೇರ್ ಪ್ರದೇಶದಲ್ಲಿ ನೇರಳೆ ಕೃಷಿ
ಕನ್ನಡಪ್ರಭ ವಾರ್ತೆ ಮೊಳಕಾಲ್ಮುರುಮಾವಿನ ಹಣ್ಣಿನ ಭರಾಟೆ ಮುಗಿದು ಮುಂಗಾರು ಪ್ರಾರಂಭವಾಗಿದೆ. ಇದರ ನಡುವೆ ಗ್ರಾಮೀಣ ಭಾಗಗಳಲ್ಲಿ ಕಪ್ಪು ಸುಂದರಿ ಎಂದೇ ಕರೆಸಿಕೊಳ್ಳುವ ನೇರಳೆ ಹಣ್ಣಿನ ಸುಗ್ಗಿ ಆರಂಭವಾಗಿದೆ. ಇದೀಗ ಬಯಲು ಸೀಮೆಯ ಮಾರುಕಟ್ಟೆಯಲ್ಲಿ ಹಿಂದೆಂದಿಗಿಂತಲೂ ಹೆಚ್ಚು ಬೇಡಿಕೆ ನೇರಳೆಗೆ ಇದೆ. ಆದ್ದರಿಂದ ಈ ಬಾರಿ ವ್ಯಾಪಾರಸ್ತರಿಗೆ ಬಂಪರ್ ಬೆಲೆ ಸಿಗುತ್ತಿದೆ. ಔಷಧೀಯ ಗುಣಗಳನ್ನು ಹೊಂದಿರುವ ಈ ಹಣ್ಣು ಆರೋಗ್ಯ ಸಮಸ್ಯೆಗಳ ನಿವಾರಣೆಗೆ ಅತ್ಯುತ್ತಮವಾದ ರಾಮಬಾಣ. ಈ ಜಂಬುನೇರಳೆ ಆಯುರ್ವೇದದಲ್ಲಿಯೂ ವಿಶಿಷ್ಟ ಪ್ರಾಶಸ್ತ್ಯ ಪಡೆದಿದೆ. ಯಾವುದೇ ರಸಾಯನಿಕ ಗೊಬ್ಬರಗಳ ಬಳಕೆ ಇಲ್ಲದೇ ನೈಸರ್ಗಿಕವಾಗಿ ಬೆಳೆಯುವ ನೇರಳೆ ಹಣ್ಣನ್ನು ಮೇ, ಜೂನ್, ಜುಲೈ ತಿಂಗಳಲ್ಲಿ ಮಾತ್ರ ಕಾಣಲು ಸಾಧ್ಯ. ಮದುಮೇಹ, ಅಸ್ತಮಾ, ಉರಿಗಂಟು, ಪ್ರಾಣಿಗಳಿಗೆ ಉಂಟಾಗುವ ಕೆಮ್ಮು, ನೆಗಡಿಗೂ ಸೇರಿದಂತೆ ಅನೇಕ ಖಾಯಿಲೆಗಳಿಗ ಸಂಜೀವಿನಿಯೂ ಹೌದು.
ಕಪ್ಪು, ನೀಲಿ, ಕೆಂಪು ಮಿಶ್ರಿತ ಹೊಳಪಿನ ಜಂಬು ನೇರಳೆ, ಬಹುತೇಕ ಮಳೆಯನ್ನೇ ಅವಲಂಬಿಸಿ ಅರಣ್ಯ, ರಸ್ತೆಗಳ ಇಕ್ಕೆಲ, ನಡುತೋಪು, ಹಾಗೂ ಕೃಷಿ ಭೂಮಿಗಳಲ್ಲಿ ಹೆಚ್ಚಾಗಿ ಬೆಳೆಯುತ್ತದೆ. ಈ ಸಂದರ್ಭದಲ್ಲಿ ನೇರಳೆ ಮರಗಳು ರೈತರ ಪ್ರಮುಖ ಆದಾಯದ ಮೂಲ. ಪಟ್ಟಣದ ಬಸ್ ನಿಲ್ದಾಣ, ಮುಖ್ಯ ರಸ್ತೆ ಬದಿ, ರಾಷ್ಟ್ರೀಯ ಹೆದ್ದಾರಿಗಳು, ಹಾಗೂ ಸಂತೆ ಬೀದಿಗಳಲ್ಲಿ ನೇರಳೆ ಹಣ್ಣುಗಳದ್ದೇ ದರ್ಬಾರ್. ತಳ್ಳು ಗಾಡಿ, ಸಣ್ಣ ಸಣ್ಣ ಬುಟ್ಟಿಗಳಲ್ಲಿ ತರುವ ಹಣ್ಣುಗಳು ಗ್ರಾಹಕರನ್ನು ಆಕರ್ಷಿಸುತ್ತಿವೆ. ಸದ್ಯ ಗ್ರಾಮೀಣ ಭಾಗದಲ್ಲಿ ಪ್ರತಿ ಕೆ.ಜಿಗೆ ₹200 ಇದ್ದರೆ ಪಟ್ಟಣ ಹಾಗೂ ಹೆದ್ದಾರಿ ಬದಿಯಲ್ಲಿ ₹250 ಕ್ಕೂ ಹೆಚ್ಚಿನ ದರದಲ್ಲಿ ಮಾರಾಟವಾಗುತ್ತಿದೆ.ಐರನ್ ಕಂಟೆಟ್, ಕ್ಯಾಲ್ಸಿಯಂ, ಪಟೋಶಿಯಂ ಸೇರಿದಂತೆ ವಿಟಮಿನ್ ಸಿ ಹೇರಳವಾಗಿರುವ ನೇರಳೆ ಹಲವು ಖಾಯಿಲೆಗಳಿಗೆ ಮನೆ ಮದ್ದು. ಮದುಮೇಹ ಇರುವಂತವರು ಸೇವನೆ ಮಾಡುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಲಿದ್ದು, ದೇಹದ ಉಷ್ಣಾಂಶ ಕಡಿಮೆಗೊಳಿಸಿ ಆರೋಗ್ಯ ಸಮಾತೋಲನ ಕಾಪಾಡುತ್ತದೆ. ನೈರ್ಸಗಿಕ ಆಮ್ಲೀಯ ಪದಾರ್ಥಗಳಿಂದ, ಪಿತ್ತ ಜನಕಾಂಗ ಕಾರ್ಯವನ್ನು ಉತ್ತೇಜಿಸಿ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ಜತೆಗೆ ಮೂಲವ್ಯಾದಿ ತೊಂದರೆಗಳಿಗೆ ಸಹಾಯಕಾರಿ. ಇದರೊಟ್ಟಿಗೆ ಅಜೀರ್ಣ ಸಮಸ್ಯೆ, ಅತಿಯಾದ ಮೂತ್ರ ವಿಸರ್ಜನ ತೊಂದರೆ, ಮತ್ತು ಕಿಡ್ನಿ ಸಮಸ್ಯೆಗಳನ್ನು ನಿವಾರಿಸಬಲ್ಲ ಶಕ್ತಿಯನ್ನೂ ಹೊಂದಿದೆ. ದೇವಸಮುದ್ರ ಹೋಬಳಿಯ ತಮ್ಮೇನಹಳ್ಳಿ ತೋಟಗಾರಿಕೆ ಪಾರಂ, ಮತ್ತು 6 ಕಸಬಾ ಹೋಬಳಿಯ ರಾಯಾಪುರ ಪಾರಂ ನಲ್ಲಿ 3 ಎಕರೆ ನೇರಳೆ ಕೃಷಿ ಬೆಳೆಯಲಾಗಿದೆ. ಇನ್ನು ಪೆನ್ನಮ್ಮನಹಳ್ಳಿ, ತಿಮಲಾ ಪುರ, ಕೋನಾಪುರ, ಮತ್ತು ಗುಂಡ್ಲೂರು ಭಾಗಗಳಲ್ಲಿ ತಲಾ ಒಂದು ಎಕರೆ ಕೃಷಿ ಭೂಮಿಯಲ್ಲಿ ನೇರಳೆ ಬೆಳೆಯಲಾಗಿದೆ. ತಾಲೂಕಿನಲ್ಲಿ ಒಟ್ಟು 15 ಹೆಕ್ಟೇರ್ ಪ್ರದೇಶದಲ್ಲಿ ನೇರಳೆ ಕೃಷಿ ಮಾಡಲಾಗುತ್ತದೆ. ಕಡಿಮೆ ಖರ್ಚು, ಹೆಚ್ಚು ಆದಾಯ ಇರುವ ನೇರಳೆ ಬೆಳೆಗೆ ಸರ್ಕಾರದಿಂದ ಸಹಾಯಧನವೂ ಸಿಗುತ್ತದೆ.ಬಾಕ್ಸ್ ಮಳೆಯಾಶ್ರಿತ ಬಯಲು ಸೀಮೆಯ ಭೂಮಿಯಲ್ಲಿ ನೇರಳೆ ಬೆಳೆಯಲು ಪೂರಕ ವಾತವರಣ ಇದ್ದು, ರೈತರಿಗೆ ಕಡಿಮೆ ಖರ್ಚಿನಲ್ಲಿ ಹೆಚ್ಚು ಲಾಭ ತರುವ ಆದಾಯದ ಮೂಲವಾಗಿದೆ. ನಾಟಿ ಮಾಡಿದ ಮೂರು ವರ್ಷಗಳಲ್ಲಿಯೇ ಸೊಂಪಾದ ಫಸಲು ಬರಲಿದೆ. ದೀರ್ಘಕಾಲ ಸಿಗುವಂತ ನೆರಳೆ ಬೆಳೆಗೆ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಸಹಾಯ ಧನವೂ ಸಿಗಲಿದೆ. ಆದರೂ ನಮ್ಮ ರೈತರು ನೇರಳೆ ಕೃಷಿಗೆ ಒಲವು ತೋರದೇ ಇರರುವುದು ವಿಪರ್ಯಾಸವೇ ಸರಿ.ಕೆ ಎ.ಸುಧಾಕರ್, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು. ಮೊಳಕಾಲ್ಮುರು.