ಸಾರಾಂಶ
ನಗರದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ಕಾರ್ಯ ನಿರೀಕ್ಷಿತ ಮಟ್ಟದಲ್ಲಿ ನಡೆಯುತ್ತಿಲ್ಲ. ಹೀಗಾಗಿ ಈ ಸಮೀಕ್ಷಾ ಕಾರ್ಯಕ್ಕೆ ವೇಗ ನೀಡುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅವರು ಜಿಬಿಎ ಮುಖ್ಯ ಆಯುಕ್ತ ಎಂ. ಮಹೇಶ್ವರ್ ರಾವ್ ಅವರಿಗೆ ಪತ್ರ ಬರೆದಿದ್ದಾರೆ.
ಬೆಂಗಳೂರು : ನಗರದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ಕಾರ್ಯ ನಿರೀಕ್ಷಿತ ಮಟ್ಟದಲ್ಲಿ ನಡೆಯುತ್ತಿಲ್ಲ. ಹೀಗಾಗಿ ಈ ಸಮೀಕ್ಷಾ ಕಾರ್ಯಕ್ಕೆ ವೇಗ ನೀಡುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅವರು ಗ್ರೇಟರ್ ಬೆಂಗಳೂರು ಪ್ರಾಧಿಕಾರದ(ಜಿಬಿಎ) ಮುಖ್ಯ ಆಯುಕ್ತ ಎಂ. ಮಹೇಶ್ವರ್ ರಾವ್ ಅವರಿಗೆ ಪತ್ರ ಬರೆದಿದ್ದಾರೆ.
ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪ್ರತಿ ಸಮೀಕ್ಷೆದಾರನಿಗೆ ದಿನಕ್ಕೆ ಸರಾಸರಿ 16 ಮನೆಗಳನ್ನು ಗುರಿಯಾಗಿಸಿಕೊಂಡು ಕಾರ್ಯ ನಿರ್ವಹಿಸುವಂತೆ ನಿರ್ಧರಿಸಲಾಗಿತ್ತು. ಈ ವೇಗದಲ್ಲಿ ಸಮೀಕ್ಷೆ ಕಾರ್ಯ ಮುಂದುವರಿದರೆ, ಅ.18 ಅಥವಾ ಅ.19ರೊಳಗೆ ನಗರದಲ್ಲಿ ಸಮೀಕ್ಷೆ ಪೂರ್ಣಗೊಳಿಸಲು ಸಾಧ್ಯವಾಗಲಿದೆ ಎಂದು ಅಂದಾಜಿಸಲಾಗಿತ್ತು.
ಆದರೂ ಅ.13ರವರೆಗೆ ನಗರದಲ್ಲಿ ಕೇವಲ ಶೇ.30ರಷ್ಟು ಮನೆಗಳಷ್ಟೇ ಸಮೀಕ್ಷೆಯಾಗಿದೆ. ದಿನಕ್ಕೆ ಕೇವಲ ಸರಾಸರಿ 7-8 ಮನೆಗಳಷ್ಟೇ ಸಮೀಕ್ಷೆಯಾಗುತ್ತಿರುವುದು ವರದಿಯಾಗಿದೆ. ಇದರನ್ವಯ ಸಮೀಕ್ಷೆದಾರರು ನಿರೀಕ್ಷಿತ ಮಟ್ಟದಲ್ಲಿ ಫಲಿತಾಂಶ ನೀಡದಿರುವುದು ಮತ್ತು ಅವರ ಮೇಲ್ವಿಚಾರಕರ ಕಾರ್ಯದಕ್ಷತೆಯಲ್ಲಿ ಕೊರೆತೆಯಾಗಿರುವುದು ಕಂಡು ಬಂದಿದೆ.
ಸಮೀಕ್ಷೆ ಅವಧಿ ವಿಸ್ತರಿಸುವುದು ತುಂಬಾ ಕಷ್ಟಕರವಾಗಿದೆ. ಸಮೀಕ್ಷೆದಾರರಿಗೆ ನೀಡಿರುವ ಇಲಾಖೆಗಳ ನಿಯಮಿತ ಕಾರ್ಯದಲ್ಲಿ ಅಡಚಣೆ ಉಂಟಾಗುವ ಸಾಧ್ಯತೆ ಇದೆ. ಹೀಗಾಗಿ ಜಿಬಿಎ ವ್ಯಾಪ್ತಿಯ ಐದು ಪಾಲಿಕೆಗಳ ಆಯುಕ್ತರು ಸಮೀಕ್ಷೆಯ ಪ್ರಗತಿಗೆ ವೈಯಕ್ತಿಕ ಗಮನಹರಿಸಿ ತಕ್ಷಣ ಕ್ರಮ ಕೈಗೊಳ್ಳುವಂತೆ ಸೂಚಿಸುವಂತೆ ಪತ್ರದಲ್ಲಿ ಸೂಚಿಸಿದ್ದಾರೆ.
ಸಮೀಕ್ಷೆ ಕುಂಠಿತ: 13 ಮಂದಿಗೆ ನೋಟಿಸ್
ನಗರದ ಜಯನಗರ ವಿಧಾನಸಭಾ ಕ್ಷೇತ್ರದ 6 ವಾರ್ಡ್‌ಗಳಲ್ಲಿ ಗಣತಿದಾರರು 5ಕ್ಕಿಂತ ಕಡಿಮೆ ಮನೆಗಳ ಸಮೀಕ್ಷೆ ಮಾಡಿರುವ ಸಂಬಂಧ 13 ಮಂದಿ ಮೇಲ್ವಿಚಾರಕರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ.
ಜಯನಗರ ವಿಧಾನಸಭಾ ಕ್ಷೇತ್ರದ ವಾರ್ಡ್‌ಗಳಲ್ಲಿ 5ಕ್ಕಿಂತ ಕಡಿಮೆ ಕಡಿಮೆ ಮನೆ ಸಮೀಕ್ಷೆ ಮಾಡಿರುವ ಗಣತಿದಾರರು ಕರ್ತವ್ಯ ಲೋಪ ಎಸಗಿರುವುದು ಕಂಡು ಬಂದಿದೆ. ಹೀಗಾಗಿ, ಕಾರಣ ಕೇಳಿ ನೋಟಿಸ್ ಜಾರಿಗೊಳಿಸಲಾಗಿದ್ದು, ನೋಟಿಸ್ ತಲುಪಿದ 24 ಗಂಟೆಯಲ್ಲಿ ಸಮಜಾಯಿಷಿ ನೀಡಬೇಕು. ಕೂಡಲೇ ಸಮೀಕ್ಷೆ ಹೆಚ್ಚಿನ ಪ್ರಗತಿ ಸಾಧಿಲು ಕ್ರಮ ವಹಿಸಬೇಕು. ಇಲ್ಲವಾದ್ದಲ್ಲಿ ತಮ್ಮ ಸಮಜಾಯಿಷಿ ಏನು ಇಲ್ಲವೆಂದು ಭಾವಿಸಿ ಕಡಿಮೆ ಪ್ರಗತಿ ಹೊಂದಿರುವ ಗಣತಿದಾರರ ಬಗ್ಗೆ ಎಚ್ಚರವಹಿಸದೇ ಸರ್ಕಾರ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಯಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿದ್ದೇರಿ ಎಂದು ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ದಕ್ಷಿಣ ನಗರ ಪಾಲಿಕೆ ಜಂಟಿ ಆಯುಕ್ತರ ನೋಟಿಸ್‌ನಲ್ಲಿ ತಿಳಿಸಲಾಗಿದೆ.
ಪಟ್ಟಾಭಿರಾಮನಗರ ವಾರ್ಡ್‌ನ ಮೇಲ್ವಿಚಾರಕ ಎಂ.ಗುರು ಹಾಗೂ ಗಿರೀಶ್, ಬೈರಸಂದ್ರ ವಾರ್ಡ್‌ನ ನರಸರಾಜು ಮತ್ತು ಜಿ.ಎಂ.ಮಲ್ಲೇಶ್, ಜಯನಗರ ವಾರ್ಡ್‌ನ ಅನುರಾಧ, ಶ್ರೀಕಾಂತ್, ಗುರಪ್ಪನಪಾಳ್ಯ ವಾರ್ಡ್‌ನ ಸುಷ್ಮಾಶ್ರೀ, ಕೆ.ಎಸ್.ಸುನೀಲ್‌ಕುಮಾರ್, ಆಂಜನ್, ಜಿ.ಪಿ.ನಗರ ವಾರ್ಡ್‌ನ ಎಂ.ಎಂ.ಬಾಬು, ಶ್ರೀನಿವಾಸ್, ಸಾರಕ್ಕಿ ವಾರ್ಡ್‌ನ ಜಗದೀಶ್ ಹಾಗೂ ಲಿಂಗೇಗೌಡ ಎಂಬ ಮೇಲ್ವಿಚಾರಕರಿಗೆ ನೋಟಿಸ್ ನೀಡಲಾಗಿದೆ.
ಗಣತಿಗೆ ಗೈರಾದವರ ವೇತನ ಕಟ್:
ರಾಜಧಾನಿ ಬೆಂಗಳೂರಿನಲ್ಲಿ ಸಾಮಾಜಿಕ- ಶೈಕ್ಷಣಿಕ ಸಮೀಕ್ಷೆ ಕಾರ್ಯಕ್ಕೆ ಗೈರಾದ 2300 ಸರ್ಕಾರಿ ಸಿಬ್ಬಂದಿಯ ವೇತನ ಕಡಿತದೊಂದಿಗೆ ಅಮಾನತು ಹಾಗೂ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ತಿಳಿಸಿದ್ದಾರೆ.
ನಗರದಲ್ಲಿ ಅ.4 ರಿಂದ ಸಾಮಾಜಿಕ - ಶೈಕ್ಷಣಿಕ ಸಮೀಕ್ಷೆ ಆರಂಭಿಸಲಾಗಿದ್ದು, ಸಮೀಕ್ಷಾ ಕಾರ್ಯದಲ್ಲಿ ಭಾಗವಹಿಸುವುದಕ್ಕೆ ಸುಮಾರು 21 ಸಾವಿರ ಸರ್ಕಾರಿ ಅಧಿಕಾರಿ ಸಿಬ್ಬಂದಿಗೆ ನೇಮಕಾತಿ ಪತ್ರ ನೀಡಲಾಗಿತ್ತು. ಈ ಪೈಕಿ ಸುಮಾರು 18 ಸಾವಿರ ಮಂದಿ ಸಮೀಕ್ಷಾ ಕಾರ್ಯಕ್ಕೆ ಹಾಜರಾಗಿದ್ದಾರೆ. ಗರ್ಭಿಣಿಯರು, ಒಂದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಗುವುಳ್ಳ ತಾಯಂದಿರು ಹಾಗೂ ಗಂಭೀರ ಆರೋಗ್ಯ ಸಮಸ್ಯೆಯುಳ್ಳ ಸಮೀಕ್ಷಾದಾರರನ್ನು ಸಮೀಕ್ಷೆಯಿಂದ ವಿನಾಯಿತಿ ನೀಡಲಾಗಿದೆ.
ಆದರೆ, ಸುಮಾರು 2300 ಮಂದಿ ಯಾವುದೇ ಸೂಚನೆ ಇಲ್ಲದೇ ಅನಧಿಕೃತವಾಗಿ ಗೈರಾಗಿದ್ದಾರೆ. ಎಸ್‌ಎಂಎಸ್ ಮೂಲಕ ಸಂದೇಶ ಕಳುಹಿಸಿ ಸಮೀಕ್ಷಾ ಕಾರ್ಯದಲ್ಲಿ ಭಾಗವಹಿಸುವಂತೆ ನೋಟಿಸ್ ನೀಡಿದರೂ ಹಾಜರಾಗಿಲ್ಲ. ಹೀಗಾಗಿ, ಇಂಥವರ ನಡೆ ಗಂಭೀರ ಶಿಸ್ತು ಉಲ್ಲಂಘನೆಯಾಗಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರು ಅವರ ಅನಧಿಕೃತ ಗೈರು ಹಾಜರಿ ಅವಧಿಯ ವೇತನವನ್ನು ಕಡಿತಗೊಳಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಗೈರಾದವರು, ತಕ್ಷಣ ಕರ್ತವ್ಯಕ್ಕೆ ಹಾಜರಾಗಿ, ತಮಗೆ ಹಂಚಿಕೆಯಾಗಿರುವ ಮನೆಗಳ ಸಮೀಕ್ಷೆಯನ್ನು ಪೂರ್ಣಗೊಳಿಸಬೇಕು. ಇಲ್ಲವಾದರೆ ಕ್ರಮ ಕೈಗೊಳ್ಳಲಾಗುತ್ತದೆ. ಅನಧಿಕೃತವಾಗಿ ಗೈರುಹಾಜರಾಗುವುದನ್ನು ಮುಂದುವರಿಸಿದರೆ ಅಮಾನತು ಸೇರಿದಂತೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.