ಕಾವೇರಿ ಆರತಿಗೆ ನ್ಯಾಯಾಲಯ ಈಗಾಗಲೇ ತನ್ನ ಅಸಮ್ಮತಿ ವ್ಯಕ್ತಪಡಿಸಿ ತಡೆಯಾಜ್ಞೆ ನೀಡಿದೆ. ರೈತರ ಬಗ್ಗೆ ಯಾವುದೇ ಕಾಳಜಿಯಿಲ್ಲದ ಸರ್ಕಾರ ಹಿಂಬಾಗಿಲ ಮೂಲಕ ಕಾವೇರಿ ಆರತಿಯನ್ನು ಜೊತೆಗೆ ಅಮ್ಯೂಸ್ಮೆಂಟ್ನಂತಹ ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸುವ ಪ್ರಯತ್ನ ನಡೆದಿದೆ.
ಕನ್ನಡಪ್ರಭ ವಾರ್ತೆ, ಮಂಡ್ಯ
ರಾಜ್ಯ ಸರ್ಕಾರ ಕೆಆರ್ಎಸ್ನಲ್ಲಿ ಕಾವೇರಿ ಆರತಿ ಮಾಡುವುದನ್ನು ವಿರೋಧಿಸಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಹಾಗೂ ಕನ್ನಡಪರ ಸಂಘಟನೆಯವರು ಗುರುವಾರ ನಗರದ ಕಾವೇರಿ ವನದಲ್ಲಿರುವ ಕಾವೇರಿ ಪ್ರತಿಮೆ ಎದುರು ಕಪ್ಪುಪಟ್ಟಿ ಧರಿಸಿ ವಿರೋಧ ವ್ಯಕ್ತಪಡಿಸಿದರು.
ಪ್ರತಿಮೆ ಎದುರು ಸೇರಿದ ಪದಾಧಿಕಾರಿಗಳು ದಸರಾ ನೆಪದಲ್ಲಿ ಕಾಏರಿ ಆರತಿಯಂಥಹ ರೈತರಿಗೆ ಉಪಯೋಗಿಲ್ಲದ ಕಾರ್ಯಕ್ರಮಗಳನ್ನು ಏರ್ಪಡಿಸಿರುವುದು ಖಂಡನೀಯ ಎಂದು ಕಿಡಿಕಾರಿದರು.
ಕಾವೇರಿ ಆರತಿಗೆ ನ್ಯಾಯಾಲಯ ಈಗಾಗಲೇ ತನ್ನ ಅಸಮ್ಮತಿ ವ್ಯಕ್ತಪಡಿಸಿ ತಡೆಯಾಜ್ಞೆ ನೀಡಿದೆ. ರೈತರ ಬಗ್ಗೆ ಯಾವುದೇ ಕಾಳಜಿಯಿಲ್ಲದ ಸರ್ಕಾರ ಹಿಂಬಾಗಿಲ ಮೂಲಕ ಕಾವೇರಿ ಆರತಿಯನ್ನು ಜೊತೆಗೆ ಅಮ್ಯೂಸ್ಮೆಂಟ್ನಂತಹ ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸುವ ಪ್ರಯತ್ನ ನಡೆದಿದೆ ಎಂದು ದೂರಿದರು.
ಕೆರೆಗಳಿಗೆ ನೀರು ತುಂಬಿಸುವ, ರೈತರ ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ದೊರಕಿಸುವುದಕ್ಕೆ ಸರ್ಕಾರ ಮೊದಲು ಆದ್ಯತೆ ನೀಡಲಿ. ಕಾವೇರಿ ನೀರು ಹಂಚಿಕೆ ಸಂಬಂಧ ನೀರು ನಿರ್ವಹಣಾ ಮಂಡಳಿ ಮತ್ತು ಪ್ರಾಧಿಕಾರಗಳಿಂದ ಎಂದು ರಾಜ್ಯಕ್ಕೆ ನ್ಯಾಯ ಸಿಗುವುದೋ ಅಂದು ಕಾವೇರಿಗೆ ಸಲ್ಲಿಸುವ ನಿಜವಾದ ನ್ಯಾಯ ಸಲ್ಲಿಸಿದಂತಾಗುತ್ತದೆ ಎಂದರು.
ಕೃಷ್ಣರಾಜಸಾಗರಕ್ಕೆ ೨೦೩೧ಕ್ಕೆ ನೂರು ವರ್ಷ ಪೂರೈಸಲಿದೆ. ಅಣೆಕಟ್ಟೆಯ ಸುರಕ್ಷತೆ ದೃಷ್ಟಿಯಿಂದ ಅಣೆಕಟ್ಟೆ ಸುತ್ತ ಯಾವುದೇ ಕಾಮಗಾರಿಗಳು ನಡೆಯುವಂತೆ ನೋಡಿಕೊಳ್ಳಬೇಕಿದೆ. ಅದೇ ಕಾರಣಕ್ಕೆ ಹೈಕೋರ್ಟ್ ಯಾವುದೇ ಕಾಮಗಾರಿ ನಡೆಸದಂತೆ ತಡೆಯಾಜ್ಞೆ ನೀಡಿದೆ. ಆದರೆ, ಇವೆಲ್ಲವನ್ನೂ ಬದಿಗಿಟ್ಟು ರಾಜ್ಯಸರ್ಕಾರ ಕಾವೇರಿ ಆರತಿ ಕಾರ್ಯಕ್ರಮ ನಡೆಸುತ್ತಿರುವುದು ಖಂಡನೀಯ ಎಂದರು.
ಈಗಾಗಲೇ ಮಳೆ ಕೊರತೆಯಿಂದ ಕೆರೆಗಳು ಖಾಲಿಯಾಗಿವೆ. ಬೆಳೆ ನಷ್ಟವಾಗಿ ರೈತರು ಸಂಕಷ್ಟದಲ್ಲಿದ್ದಾರೆ. ಬೆಳೆ ನಷ್ಟಕ್ಕೆ ಪರಿಹಾರ ನೀಡಿ ರೈತನ ನೆರವಿಗೆ ಧಾವಿಸಬೇಕಿದ್ದ ಸರ್ಕಾರ ಕಾವೇರಿ ಆರತಿಯಂತಹ ಭಾವನಾತ್ಮಕ ಪ್ರಹಸನ ನಡೆಸಿದೆ ಎಂದು ದೂಷಿಸಿದರು.
ತೆರಿಗೆ ಹಣದಲ್ಲಿ ಸರ್ಕಾರದಿಂದ ಕಾವೇರಿ ಆರತಿ ಆಚರಣೆ: ವಿ.ಸಿ.ಉಮಾಶಂಕರ್ ಕಿಡಿ
ಮದ್ದೂರು: ನಾಡಿನಲ್ಲಿ ತೀವ್ರ ಬರಗಾಲವಿದೆ. ಜಲಾಶಯದಲ್ಲಿ ನೀರಿನ ಮಟ್ಟ ನೂರು ಅಡಿಗೆ ಇಳಿದಿದ್ದರೂ ತೆರಿಗೆ ಹಣದಲ್ಲಿ ಕೆಆರ್ಎಸ್ನಲ್ಲಿ ಕಾವೇರಿ ಆರತಿ ಮಾಡಲು ಹೊರಟಿರುವ ರಾಜ್ಯ ಸರ್ಕಾರದ ಕ್ರಮ ಜನವಿರೋಧಿ ನೀತಿಯಾಗಿದೆ ಎಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ವಿ.ಸಿ.ಉಮಾಶಂಕರ್ ಟೀಕಿಸಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಜಿಲ್ಲೆಯಲ್ಲಿ ರೈತರು ಬೆಳೆದಿರುವ ಭತ್ತ, ರಾಗಿ, ರೇಷ್ಮೆಯ ಹಿಪ್ಪನೆರಳೆ ಗಿಡ, ಕಬ್ಬು, ತೆಂಗು, ಬಾಳೆ, ಅಡಿಕೆ ಬೆಳೆಗಳಿಗೆ ನೀರಿಲ್ಲದೆ ಒಣಗುತ್ತಿವೆ. ಕೆ ಆರ್ ಎಸ್ ಜಲಾಶಯದಿಂದ ನಾಲೆಗಳಿಗೆ ಕಟ್ಟು ಪದ್ಧತಿ ನೀರು ಹರಿಸಬೇಕಿದೆ. ಎಲ್ಲದೇ ಅಣೆಕಟ್ಟೆಯಿಂದ ಐದಾರು ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸಬೇಕು. ಇಂತಹ ಪರಿಸ್ಥಿತಿಯಲ್ಲಿ ಎಲ್ಲಿಂದ ನೀರು ತರುತ್ತಾರೆ ಎಂದು ಕಿಡಿಕಾರಿದ್ದಾರೆ.
ಮಳೆ ಕೊರತೆಯಿಂದ ಕೆರೆಕಟ್ಟೆಗಳು ನೀರಿಲ್ಲದೆ ಖಾಲಿಯಾಗುತ್ತಿವೆ. ಮದ್ದೂರು ತಾಲೂಕಿನ ಕೊನೆ ಭಾಗಕ್ಕೆ ನೀರು ತಲುಪದೇ ರೈತ ಕಂಗಾಲಾಗಿದ್ದಾನೆ. ಇಂತಹ ಪರಿಸ್ಥಿತಿ ಅವಲೋಕನ ಮಾಡದೆ ತೆರಿಗೆ ಹಣದಲ್ಲಿ ಕೋಟ್ಯಾಂತರ ರು ವ್ಯಯ ಮಾಡುತ್ತಿರುವ ಸರ್ಕಾರದ ಕ್ರಮ ಸರಿಯಲ್ಲ. ಆದ್ದರಿಂದ ಕಾವೇರಿ ಆರತಿ ಹಿಂಪಡೆದು ರೈತರ ನೆರವಿಗೆ ಧಾವಿಸಬೇಕು ಎಂದು ಮುಖ್ಯಮಂತ್ರಿಗಳನ್ನು ಆಗ್ರಹಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.