ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಿಂದ ಕಪ್ಪು ಬಾವುಟ ಹಿಡಿದು ಮೆರವಣಿಗೆ ಹೊರಟ ಸಮಿತಿಯ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
ಪರಿಶಿಷ್ಟರ ಮೀಸಲು ಎಸ್‌ಸಿಎಸ್‌ಪಿ ಹಾಗೂ ಟಿಎಸ್‌ಪಿ ಅನುದಾನದಲ್ಲಿ ೨೫,೨೮೨ ಕೋಟಿ ರು.ಗಳನ್ನು ಗ್ಯಾರಂಟಿ ಯೋಜನೆಗೆ ವರ್ಗಾವಣೆ ಮಾಡಿದ್ದಲ್ಲದೆ ರಾಜ್ಯ ಸರ್ಕಾರ ೧,೦೫,೪೬೯ ಕೋಟಿ ಹಣವನ್ನು ದುರ್ಬಳಕೆ ಮಾಡಿಕೊಂಡಿದೆ, ಅದೇ ರೀತಿ ವಾಲ್ಮೀಕಿ ನಿಗಮದಲ್ಲಿ ೧೮೭ ಕೋಟಿ ರು. ಭ್ರಷ್ಟಾಚಾರ ನಡೆಸಿ ಹಣ ಗುಳುಂ ಮಾಡಲಾಗಿದೆ. ಆರ್ಥಿಕ ಅಶಿಸ್ತಿನ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.ಪರಿಶಿಷ್ಟ ಜಾತಿ- ಪರಿಶಿಷ್ಟ ಪಂಗಡಗಳ ಉಪಯೋಜನಾ ಕಾಯ್ದೆಯಡಿ ದಲಿತರ ಅಭಿವೃದ್ಧಿಗೆ ಮೀಸಲಿರಿಸಿದ್ದ ಅನುದಾನ ದುರ್ಬಳಕೆ ಮಾಡಿಕೊಳ್ಳುವ ಉದ್ದೇಶದಿಂದ ಕಲಂ ೭ (ಸಿ) (ಡಿ) ಸೇರಿಸಲಾಗಿದೆ, ಇದೊಂದು ನಯ ವಂಚನೆ ಕ್ರಮವಾಗಿದ್ದು,ಇಂತಹ ಅನ್ಯಾಯ ತಡೆಯಲು ವಿಫಲವಾಗಿರುವ ಸಮುದಾಯದ ಸಚಿವರು, ಶಾಸಕರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಸಮಿತಿಯ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ, ಜಿಲ್ಲಾಧ್ಯಕ್ಷ ಬಿ ಆನಂದ್, ಮರಂಕಯ್ಯ, ಈಚಗೆರೆ ನಾಗರಾಜ್, ವೈ ಸುರೇಶ್ ಕುಮಾರ್, ಹೊನ್ನಯ್ಯ, ಎನ್.ಸಿ.ರಾಜು, ಸುರೇಶ್ ಮರಳಗಾಲ, ಮಹದೇವ್ ಕೊತ್ತತ್ತಿ, ಭಾಗ್ಯಮ್ಮ, ಗೀತಾ, ಸುಕನ್ಯ, ಸರಳ ನೇತೃತ್ವ ವಹಿಸಿದ್ದರು.