ಕನ್ನಡಪ್ರಭ ವಾರ್ತೆ ಮಂಡ್ಯ
ಕೆಪಿಎಸ್ ಹಾಗೂ ಮ್ಯಾಗ್ನೆಟಿಕ್ ಶಾಲೆಗಳ ಹೆಸರಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿರುವುದನ್ನು ಖಂಡಿಸಿ ಉಸ್ತುವಾರಿ ಸಚಿವರಿಗೆ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟಿಸಲು ನಗರದ ಜಯಚಾಮರಾಜೇಂದ್ರ ವೃತ್ತದಲ್ಲಿ ಪ್ರತಿಭಟನಾಕಾರರು ಸೇರಿದ್ದರು. ಸಚಿವರು ವಿಶ್ವೇಶ್ವರಯ್ಯ ಕ್ರೀಡಾಂಗಣಕ್ಕೆ ತೆರಳುತ್ತಿದ್ದಂತೆ ಕಪ್ಪು ಬಾವುಟ ಹಿಡಿದು ಕ್ರೀಡಾಂಗಣದತ್ತ ಮುನ್ನುಗಿದರು.
ಈ ಸಮಯದಲ್ಲಿ ಪಶ್ಚಿಮ ಪೊಲೀಸ್ ಠಾಣೆಯ ಎದುರು ಪ್ರತಿಭಟನಾಕಾರರನ್ನು ತಡೆದ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿದರು. ಈ ಸಂದರ್ಭದಲ್ಲಿ ಸರ್ಕಾರಿ ಶಾಲೆಗಳ ಖಾಸಗೀಕರಣದ ವಿರುದ್ಧ ಘೋಷಣೆ ಕೂಗಿದರು.ರಾಜ್ಯ ಸರ್ಕಾರ ಕೆಪಿಎಸ್ಸಿ ಹಾಗೂ ಮ್ಯಾಗ್ನೆಟಿಕ್ ಶಾಲೆಗಳ ಹೆಸರಲ್ಲಿ ಸರ್ಕಾರಿ ಶಾಲೆಗಳ ಬಾಗಿಲು ಮುಚ್ಚುತ್ತಿದೆ. ಸಾರ್ವಜನಿಕ ಶಿಕ್ಷಣಕ್ಕೆ ಎಳ್ಳುನೀರು ಬಿಟ್ಟು ಶಿಕ್ಷಣವನ್ನು ಸಂಪೂರ್ಣವಾಗಿ ಖಾಸಗೀಕರಿಸಲಾಗುತ್ತಿದೆ. ರಾಜ್ಯದ ಜನಪ್ರತಿನಿಧಿಗಳು ಅವರ ಬೆಂಬಲಿಗರು ಶಿಕ್ಷಣವನ್ನು ಒಂದು ಉದ್ಯಮವಾಗಿಸಿಕೊಂಡಿದ್ದಾರೆ. ಅದರ ಪರಿಣಾಮವಾಗಿ ವಿಲೀನದ ಹೆಸರಲ್ಲಿ ಸರ್ಕಾರಿ ಶಾಲೆಗಳ ಭೂಮಿ ಕಸಿಯುವ ಹುನ್ನಾರವೂ ಅಡಗಿದೆ ಎಂದು ಗಂಭೀರವಾಗಿ ಆರೋಪಿಸಿದರು.
ಸರ್ಕಾರಿ ಶಾಲೆಗಳ ಉಳಿವಿಗಾಗಿ ಮುಂದಿನ ಎಪ್ರಿಲ್ ೧೧ ರಿಂದ ಜಿಲ್ಲೆಯ ೨೩೩ ಪಂಚಾಯತಿಗಳಿಗೂ ಪಾದಯಾತ್ರೆ ಮೂಲಕ ಜಾಗೃತಿ ಮೂಡಿಸಲಾಗುವುದು ಎಂದು ಘೋಷಿಸಿದರು.
ಪ್ರತಿಭಟನೆಯಲ್ಲಿ ರೈತಸಂಘದ ಜಿಲ್ಲಾಧ್ಯಕ್ಷ ಇಂಡುವಾಳು ಚಂದ್ರಶೇಖರ, ಶಿವಳ್ಳಿ ಚಂದ್ರು, ಸೋ.ಶಿ ಪ್ರಕಾಶ್, ಕೀಳಘಟ್ಟ ನಂಜುಂಡಯ್ಯ, ಪ್ರಭುಲಿಂಗು, ರಾಮಲಿಂಗೇಗೌಡ, ಎಸ್ ಡಿಎಂಸಿ ಸದಸ್ಯರ ಸಂಘದ ತಗ್ಗಳ್ಳಿ ಅನಿಲ್ ಕುಮಾರ್, ಅಣ್ಣೂರು ಮಹೇಂದ್ರ, ಸಂಪಳ್ಳಿ ಮರಿಚನ್ಮೇಗೌಡ, ಸಂತೋಷ್ ಗೌಡ, ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಎಚ್.ಡಿ. ಜಯರಾಮ, ಕರುನಾಡ ಸೇವಕರು ಸಂಘಟನೆಯ ರಾಜ್ಯ ವಕ್ತಾರ ಎಂ.ಬಿ.ನಾಗಣ್ಣಗೌಡ, ಮೈಸೂರು ಜಿಲ್ಲಾಧ್ಯಕ್ಷ ಎಸ್. ಕೆ. ರಾಜೂಗೌಡ ಸೇರಿದಂತೆ ಹಲವರು ಇದ್ದರು.ಬಂಧಿಸಿದ್ದ ಪ್ರತಿಭಟನಾಕಾರರನ್ನು ಜಿಲ್ಲಾ ಸಶಸ್ತ್ರ ಮೀಸಲು ಮೈದಾನದಲ್ಲಿ ಕೆಲ ಕಾಲ ತಂದಿರಿಸಿ ನಂತರ ಬಿಡುಗಡೆಗೊಳಿಸಲಾಯಿತು.