ಎಸ್.ಜಿ. ತೆಗ್ಗಿನಮನಿ
ನರಗುಂದ:ರೈತ ಮುಂಗಾರಿಯಲ್ಲಿ ಬಿತ್ತನೆ ಮಾಡಿದ ಹೆಸರು ಬೆಳೆ ಸದ್ಯ ಕಟಾವಿಗೆ ಬಂದಿವೆ. ಈ ಬೆಳೆಯನ್ನು ಕಟಾವು ಮಾಡಲು ನೂರಾರು ಯಂತ್ರಗಳು ತಾಲೂಕಿನಲ್ಲಿ ಬಂದಿವೆ. ಆದರೆ ಕಳೆದೊಂದು ವಾರದಿಂದ ಮಳೆ ನಿರಂತರ ಸುರಿಯುತ್ತಿರುವುದರಿಂದ ಈ ಯಂತ್ರಗಳಿಗೆ ಕೆಲಸವಿಲ್ಲದೆ ಖಾಲಿ ನಿಂತಿವೆ. ತಾಲೂಕಿನ ರೈತರು ಮುಂಗಾರು ಹಂಗಾಮಿನ ಜೂನ್ ತಿಂಗಳಲ್ಲಿ ವಾಣಿಜ್ಯ ಬೆಳೆಯಾದ ಹೆಸರು ಬೆಳೆ ಬಿತ್ತನೆ ಮಾಡಿದ್ದರು. ಈ ಬೆಳೆ ಕಟಾವಿಗೆ ಬಂದು 10 ದಿನವಾಗಿದೆ. ರೈತ ಬೇಗ ಯಂತ್ರಗಳ ಮೂಲಕ ಬೆಳೆ ಕಟಾವು ಮಾಡಿ ಹೆಸರು ರಾಶಿ ಮಾಡಬೇಕು ಎನ್ನುವ ತವಕದಲ್ಲಿದ್ದಾನೆ. ಆದರೆ ಮಳೆ ಕಳೆದೊಂದು ವಾರದಿಂದ ಪಟ್ಟಣ ಸೇರಿದಂತೆ ತಾಲೂಕಿನ ಗ್ರಾಮಗಳಲ್ಲಿ ಹಗಲು ರಾತ್ರಿ ಹೊತ್ತು ಎನ್ನದೇ ಧೋ ಎಂದು ಸುರಿಯುತ್ತಿರುವುದರಿಂದ ಜಮೀನುಗಳು ಸಂಪೂರ್ಣ ತೇವಾಂಶಗೊಂಡು ಸದ್ಯ ಯಂತ್ರಗಳು ಜಮೀನುಗಳಲ್ಲಿ ಓಡಾಟ ಮಾಡಿ ಬೆಳೆ ಕಟಾವು ಮಾಡಲು ಯೋಗ್ಯ ಇಲ್ಲದ್ದರಿಂದ ಬೆಳೆ ಕಟಾವು ಮಾಡುವುದು ರೈತ ಸಮುದಾಯಕ್ಕೆ ದೊಡ್ಡ ಸವಾಲು ಆಗಿದೆ.ಕೈಗೆ ಬಾರದ ಬೆಳೆ ಸ್ಥಿತಿ:ಅನ್ನದಾತರು ಜೂನ್ ತಿಂಗಳಲ್ಲಿ ಬಿತ್ತನೆ ಮಾಡಿದ ಹೆಸರು ಬೆಳೆ ಅತೀವೃಷ್ಟಿ ಮತ್ತು ಅನಾವೃಷ್ಟಿ ಎದುರಿಸಿ ಅಲ್ಪಸ್ವಲ್ಪ ಬೆಳೆ ಜಮೀನುಗಳಲ್ಲಿ ಉಳಿದಿದೆ. ಈ ಬೆಳೆಯನ್ನಾದರೂ ರೈತ ಪಡೆದುಕೊಳ್ಳಬೇಕೆಂದರೆ ಮಳೆ ಕಳೆದ ಹಲವು ದಿನಗಳಿಂದ ಸುರಿಯುತ್ತಿವುದರಿಂದ ಸದ್ಯ ಹೆಸರು ಕಾಳಿನ ಬುಡ್ಡಿಯಲ್ಲಿ ತೇವಾಂಶ ಹೆಚ್ಚಾಗಿ ಮೊಳಕೆ ಒಡೆದಿದ್ದರಿಂದ ರೈತನಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದ ಸ್ಥಿತಿ ಬಂದಿರುವುದು ದುರದೃಷ್ಟಕರ.ರೈತನಿಗೆ ಸಿಗದ ಹೆಚ್ಚಿನ ಬೆಲೆ: ಪ್ರತಿ ವರ್ಷ ಈ ಭಾಗದ ರೈತರು ಪ್ರತಿ 1 ಎಕರೆಗೆ 6ರಿಂದ 8 ಕ್ವಿಂಟಲ್ ಹೆಸರು ಬೆಳೆಯನ್ನು ತೆಗೆಯುತ್ತಿದ್ದರೂ ಕೂಡ ಮಾರುಕಟ್ಟೆಯಲ್ಲಿ ರೈತನಿಗೆ ಹೆಚ್ಚಿನ ಬೆಲೆ ಸಿಕ್ಕಿರಲಿಲ್ಲ. ಆದರೆ ಈ ವರ್ಷ ಹೆಸರು ಬೆಳೆ ಇಳುವರಿ ಕಡಿಮೆ ಇದ್ದು, ಮಾರುಕಟ್ಟೆಯಲ್ಲಿ ಪ್ರತಿ 1 ಕ್ವಿಂಟಲ್ ಹೆಸರಿಗೆ ₹ 8ರಿಂದ10 ಸಾವಿರ ಬೆಲೆ ಬಂದಿದೆ. ಆದರೆ ಈ ವರ್ಷ ಇಳುವರಿ ಹೆಚ್ಚಿಗೆ ಇಲ್ಲ, ಮತ್ತೊಂದು ಕಡೆ ರೈತ ಅಲ್ಪಸ್ವಲ್ಪ ಬೆಳೆಯನ್ನಾದರೂ ಬೇಗ ಕಟಾವು ಮಾಡಿ ಹೆಸರು ಮಾರಾಟ ಮಾಡಬೇಕೆಂದರೆ ತಾಲೂಕಿನಲ್ಲಿ ಕಳೆದ ಹಲವು ದಿನಗಳಿಂದ ನಿರಂತರ ಮಳೆ ಸುರಿಯುತ್ತಿರುವುದರಿಂದ ರೈತರಿಗೆ ಹೆಚ್ಚಿನ ಬೆಲೆ ಸಿಗುವುದು ಕನಸಿನ ಮಾತು ಎಂದು ರೈತರು ಹೇಳುವರು.
ಪ್ರತಿ ವರ್ಷದಂತೆ ಹೆಸರು ಕಟಾವು ಮಾಡಲು ಧಾರವಾಡ, ಬಾಗಲಕೋಟಿ, ಬೆಳಗಾವಿ, ವಿಜಯಪುರ ಜಿಲ್ಲೆಗಳಿಂದ ಹೆಸರು ಬೆಳೆ ಕಟಾವು ಮಾಡಲು ಈ ಪ್ರದೇಶಕ್ಕೆ ನೂರಾರು ಯಂತ್ರಗಳು ಬಂದಿವೆ. ಆದರೆ, ಮಳೆ ಬಿಡುವು ನೀಡಿದ್ದರಿಂದ ಇಂದು ಯಂತ್ರಗಳು ಕೆಲಸ ಇಲ್ಲದೆ ಖಾಲಿ ನಿಂತಿವೆ.ಪ್ರತಿ ವರ್ಷ ನಾವು ಸಿಂಧನೂರಗಳಿಂದ ಯಂತ್ರಗಳನ್ನು ತೆಗೆದುಕೊಂಡು ರೈತರ ಬೆಳೆ ಕಟಾವು ಮಾಡಿ 10ರಿಂದ 15 ದಿನಗಳಲ್ಲಿ 2ರಿಂದ 3 ಲಕ್ಷ ದುಡಿಮೆ ಮಾಡಿಕೊಂಡು ಹೋಗುತ್ತಿದ್ದೇವೆ. ಆದರೆ ಈ ವರ್ಷ ನಾವು ಬಂದು 10 ದಿನ ಆಗಿದೆ. ಮಳೆ ಬಿಡುವು ನೀಡದ್ದರಿಂದ ಯಂತ್ರಗಳನ್ನು ಖಾಲಿ ನಿಲ್ಲಿಸಿದ್ದೇವೆ ಎಂದು ಸಿಂಧನೂರಿನ ಯಂತ್ರದ ಮಾಲೀಕ ಸತೀಶ ಎಂ.ಹೇಳಿದರು.