ನಾಪೋಕ್ಲು: ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನಲ್ಲಿ ಭತ್ತದ ನಾಟಿ ಕಾರ್ಯ ಪೂರ್ಣಗೊಂಡಿದ್ದು, ನಾಟಿ ಮಾಡಿದ 30ರಿಂದ 40 ದಿನಗಳಾಗಿರುವ ಗದ್ದೆಗಳಲ್ಲಿ ಬೆಂಕಿ ರೋಗ ಹಾಗೂ ಎಲೆ ಸುರುಳಿ ಹುಳುವಿನ ಬಾಧೆ ಕಂಡುಬಂದಿದೆ.
ಎಲೆ ಸುರುಳಿ ಹುಳು ಎಲೆಯ ಅಂಚನ್ನು ಮಡಚಿ ಸುರುಳಿಯಂತೆ ಸುತ್ತಿಕೊಂಡು ಹಸಿರು ಭಾಗವನ್ನು ಕೆರೆದು ತಿನ್ನುವುದರಿಂದ ಪೈರು ಬಿಳಿಚಿಕೊಂಡಂತೆ ಕಾಣುತ್ತದೆ. ಬಾಧೆ ತೀವ್ರವಾದರೆ ಬೆಳವಣಿಗೆ ಕುಂಠಿತವಾಗಿ ಇಳುವರಿ ಕಡಿಮೆಯಾಗಬಹುದು. ಮೋಡ ಕವಿದ ವಾತಾವರಣ, ತುಂತುರು ಮಳೆ ಹಾಗೂ ನಡುವೆ ಬಿಸಿಲು ಇರುವ ಪರಿಸ್ಥಿತಿಯಲ್ಲಿ ಹುಳುವಿನ ಬಾಧೆ ಹೆಚ್ಚಾಗುತ್ತದೆ.ನಿಯಂತ್ರಣಕ್ಕಾಗಿ ಗದ್ದೆಯ ಬದುವಿನಲ್ಲಿರುವ ಕಳೆಗಳನ್ನು ಸ್ವಚ್ಛಗೊಳಿಸಿ, ಶಿಫಾರಸು ಪ್ರಮಾಣದಲ್ಲೇ ಸಾರಜನಕ ಗೊಬ್ಬರ ಬಳಸಬೇಕು. ಬಾಧೆ ಕಂಡುಬಂದಲ್ಲಿ ಪ್ರತಿ ಲೀಟರ್ ನೀರಿಗೆ ಕ್ಲೋರಂಟ್ರಾನಿಲಿಪ್ರೋಲ್ 0.4 ಮಿ.ಲೀ., ಇಂಡಾಕ್ಸಕಾರ್ಬ್ 0.5 ಮಿ.ಲೀ. ಅಥವಾ ಫ್ಲುಬೆಂಡಮೈಡ್ 0.4 ಮಿ.ಲೀ. ಇವುಗಳಲ್ಲಿ ಯಾವುದಾದರೂ ಒಂದನ್ನು ಬೆರೆಸಿ ಸಿಂಪಡಿಸಬೇಕು.ಹೆಚ್ಚಿನ ಮಾಹಿತಿಗಾಗಿ ರೈತರು ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸುವಂತೆ ಮಡಿಕೇರಿ ಸಹಾಯಕ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.