ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಭ್ಯರ್ಥಿ ಎಚ್ಡಿಕೆಗೆ ಆಶೀರ್ವಾದ ಮಾಡಿ: ಬಿ.ವೈ.ವಿಜಯೇಂದ್ರ

KannadaprabhaNewsNetwork |  
Published : Apr 18, 2024, 02:24 AM ISTUpdated : Apr 18, 2024, 09:01 AM IST
17ಕೆಎಂಎನ್ ಡಿ24 | Kannada Prabha

ಸಾರಾಂಶ

ಕಳೆದ ಉಪ ಚುನಾವಣೆಯಲ್ಲಿ ಕೆ.ಆರ್.ಪೇಟೆ ಉಸ್ತುವಾರಿ ತೆಗೆದುಕೊಂಡು ನಮ್ಮ ಅಭ್ಯರ್ಥಿ ಕೆ.ಸಿ.ನಾರಾಯಣಗೌಡರನ್ನು ಗೆಲ್ಲಿಸಿಕೊಟ್ಟರೆ ಕ್ಷೇತ್ರದ ಅಭಿವೃದ್ಧಿ ಮಾಡುವುದಾಗಿ ಮಾತು ಕೊಟ್ಟಿದ್ದೆ  ಅನುದಾನ ನೀಡಿ ಕ್ಷೇತ್ರದ ಅಭಿವೃದ್ಧಿ ಮಾಡಿದೆ.

 ಕೆ.ಆರ್.ಪೇಟೆ :  ಮಂಡ್ಯ ಲೋಕಸಬಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಹಣ ಬಲವುಳ್ಳ ಗುತ್ತಿಗೆದಾರನನ್ನು ಚುನಾವಣೆಗೆ ನಿಲ್ಲಿಸಿದೆ. ಪ್ರಧಾನಿ ಮೋದಿ ನೇತೃತ್ವದ ಮೈತ್ರಿಕೂಟ ಜನ ನಾಯಕ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರನ್ನು ನಿಲ್ಲಿಸಿದೆ. ಜಿಲ್ಲೆಯ ಜನರು ಜನನಾಯಕನಿಗೆ ಆಶೀರ್ವಾದ ಮಾಡಬೇಕು ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಮನವಿ ಮಾಡಿದರು.

ಪಟ್ಟಣದ ಪುರಸಭಾ ಮೈದಾನದಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಪಕ್ಷಗಳು ಆಯೋಜಿಸಿದ್ದ ಬೃಹತ್ ಬಹಿರಂಗ ಸಭೆಯಲ್ಲಿ ಮಾತನಾಡಿ, ಹಣ ಬಲ ಮತ್ತು ಜನಬಲದ ನಡುವೆ ಚುನಾವಣೆ ನಡೆಯುತ್ತಿದೆ. ಜನ ಬಲದ ನಾಯಕ ಕುಮಾರಸ್ವಾಮಿ ಅವರನ್ನು ಅತ್ಯಧಿಕ ಬಹುಮತದಿಂದ ಚುನಾಯಿಸಿ ಲೋಕಸಭೆಗೆ ಕಳುಹಿಸಬೇಕು ಎಂದರು.

ಮಂಡ್ಯ ಜಿಲ್ಲೆಯಲ್ಲಿ ಸ್ಪರ್ಧಿಸಲು ಎಚ್.ಡಿ.ಕುಮಾರಸ್ವಾಮಿ ಅವರನ್ನು ಕರೆ ತಂದವರು ನಾವು. ಜಿಲ್ಲೆಯ ಪ್ರಜ್ಞಾವಂತ ಮತದಾರರು ಮತ್ತು ತಾಯಂದಿರು ತಮ್ಮ ಮತವನ್ನು ಆಸೆ ಆಮಿಷಗಳಿಗೆ ಮಾರಿಕೊಳ್ಳದೇ ಎಚ್ಡಿಕೆಯನ್ನು ಬೆಂಬಲಿಸಬೇಕು ಎಂದು ಕೋರಿದರು.

ಕಳೆದ ಉಪ ಚುನಾವಣೆಯಲ್ಲಿ ಕೆ.ಆರ್.ಪೇಟೆ ಉಸ್ತುವಾರಿ ತೆಗೆದುಕೊಂಡು ನಮ್ಮ ಅಭ್ಯರ್ಥಿ ಕೆ.ಸಿ.ನಾರಾಯಣಗೌಡರನ್ನು ಗೆಲ್ಲಿಸಿಕೊಟ್ಟರೆ ಕ್ಷೇತ್ರದ ಅಭಿವೃದ್ಧಿ ಮಾಡುವುದಾಗಿ ಮಾತು ಕೊಟ್ಟಿದ್ದೆ. ಅದರಂತೆ ಬಿಜೆಪಿ ಸರ್ಕಾರ ಕೆ.ಸಿ. ನಾರಾಯಣಗೌಡರನ್ನು ಸಚಿವರನ್ನಾಗಿ ಮಾಡಿ 1800 ಕೋಟಿಗೂ ಅಧಿಕ ಅನುದಾನ ನೀಡಿ ಕ್ಷೇತ್ರದ ಅಭಿವೃದ್ಧಿ ಮಾಡಿದೆ ಎಂದರು.

ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ ಕಳೆದ 10 ತಿಂಗಳಿಂದ ಯಾವುದೇ ಅಭಿವೃದ್ಧಿ ಕೆಲಸಗಳು ಆಗಿಲ್ಲ. ರಾಜ್ಯದಲ್ಲಿ ತೀವ್ರ ಬರಗಾಲವಿದೆ. ಈಗಾಗಲೇ 800ಕ್ಕೂ ಅಧಿಕ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮುಖ್ಯಮಂತ್ರಿಗಳಿಗೆ ರೈತರ ಆತ್ಮಹತ್ಯೆಗಳು ಕಣ್ಣಿಗೆ ಕಾಣುತ್ತಿಲ್ಲ. ರೈತರ ಬದುಕು ನಾಶವಾಗುತ್ತಿದ್ದರೂ ಒಂದೇ ಒಂದು ನಯಾಪಯಸೆ ಪರಿಹಾರ ನೀಡಿಲ್ಲ ಎಂದು ಕಿಡಿಕಾರಿದರು.

ಸಂಕಷ್ಟಕದ ಕಾಲದಲ್ಲಿ ರೈತರ ಸಾಲಮನ್ನಾ ಮಾಡಿದ ಕೀರ್ತಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರದ್ದು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪನವರು ಸದಾ ರೈತರ ಪರ ಚಿಂತಿಸುವವರು. ಬರಗಾಲದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಣೆಕಟ್ಟೆಗಳಲ್ಲಿ ನೀರಿದ್ದರೂ ಬಿಡದೆ ರೈತರ ಬದುಕಿನ ಮೇಲೆ ಬರೆ ಎಳೆದಿದ್ದಾರೆ. ಗ್ಯಾರಂಟಿ ಹೆಸರಿನಲ್ಲಿ ಒಂದು ಕೈಯಲ್ಲಿ ನೀಡಿ ಮತ್ತೊಂದು ಕೈಯಲ್ಲಿ ಕಿತ್ತು ಕೊಳ್ಳಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಮಾರಂಭದಲ್ಲಿ ಶಾಸಕ ಎಚ್.ಟಿ.ಮಂಜು, ಮಾಜಿ ಸಚಿವರಾದ ಸಿ.ಎಸ್.ಪುಟ್ಟರಾಜು, ಕೆ.ಸಿ.ನಾರಾಯಣಗೌಡ, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಬಿಜೆಪಿ ಮುಖಂಡ ನಂಜುಂಡೇಗೌಡ, ಜೆಡಿಎಸ್ ಮುಖಂಡ ಅಬ್ಬಾಸ್ ಆಲಿ ಬೊಹ್ರಾ ಮಾತನಾಡಿದರು. ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ರಾಜ್ಯ ಸಹಕಾರ ಮಾರಾಟ ಮಹಾ ಮಂಡಲಿ ನಿರ್ದೇಶಕ ಚೋಳೇನಹಳ್ಳಿ ಪುಟ್ಟಸ್ವಾಮೀಗೌಡ, ಜಿಲ್ಲಾ ಬಿಜೆಪಿ ಅಧ್ಯಕ್ಷ ಇಂದ್ರೇಶ್, ತಾಲೂಕು ಜೆಡಿಎಸ್ ಅಧ್ಯಕ್ಷ ಎ.ಎನ್.ಜಾನಕೀರಾಂ, ಮನ್ಮುಲ್ ನಿರ್ದೇಶಕ ಡಾಲು ರವಿ, ಮುಡಾ ಮಾಜಿ ಅಧ್ಯಕ್ಷ ಕೆ.ಶ್ರೀನಿವಾಸ್ , ಬಿಜೆಪಿ ನಾಯಕ ಸಿದ್ದರಾಮಯ್ಯ, ಮುಖಂಡರಾದ ಎಂ.ಬಿ.ಹರೀಶ್, ಎ.ಆರ್.ರಘು ಸೇರಿದಂತೆ ಹಲವು ಮುಖಂಡರು ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ