ಕನ್ನಡಪ್ರಭ ವಾರ್ತೆ ಯಳಂದೂರು
ಮಾಜಿ ಪ್ರಧಾನಮಂತ್ರಿ ಡಾ.ಮನಮೋಹನ್ ಸಿಂಗ್ ನಿಧನ ಹಿನ್ನೆಲೆಯಲ್ಲಿ ಯಳಂದೂರು ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು ಶುಕ್ರವಾರ ಶ್ರದ್ಧಾಂಜಲಿ ಸಲ್ಲಿಸಿದರು.ಪಟ್ಟಣ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಭಾವಚಿತ್ರಕ್ಕೆ ಪುಷ್ಪರ್ಚನೆ ಮಾಡಿ ನಂತರ ಎರಡು ನಿಮಿಷ ಮೌನಾಚರಣೆ ಸಲ್ಲಿಸಲಾಯಿತು. ಪಪಂ ಸದಸ್ಯ ವೈ.ಜಿ.ರಂಗನಾಥ್ ಮಾತನಾಡಿ, ಮನಮೋಹನ್ ಸಿಂಗ್ ನಿಧನದಿಂದ ಭಾರತ ದೇಶವು ಮಹಾನ್ ಅರ್ಥಶಾಸ್ತ್ರಜ್ಞ ಹಾಗೂ ಆದರ್ಶ ರಾಜಕಾರಣಿಕೆಯನ್ನು ಕಳೆದುಕೊಂಡಿದೆ. ಭಾರತದ 14ನೇ ಪ್ರಧಾನ ಮಂತ್ರಿಯಾಗಿದ್ದ ಡಾ.ಮನಮೋಹನ್ ಸಿಂಗ್ ಅವರು ಶ್ರೇಷ್ಠ ಅರ್ಥಶಾಸ್ತ್ರಜ್ಞರಾಗಿ ಭಾರತವನ್ನು ಆರ್ಥಿಕತೆಯೆಡೆಗೆ ಕೊಂಡೊಯ್ಯುವಲ್ಲಿ ಕೆಲವು ಪ್ರಮುಖ ನಿರ್ಣಾಯಕ ಆರ್ಥಿಕ ಬೆಳವಣಿಗೆ ಉತ್ತೇಜಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ೨೦೦೪ರಿಂದ ೨೦೧೪ರವರೆಗೆ ದೇಶದ ಪ್ರಧಾನ ಮಂತ್ರಿಯಾಗಿ ಸೇವೆಸಲ್ಲಿಸುವ ಮೂಲಕ ಶಿಕ್ಷಣ ಹಕ್ಕು, ಆಹಾರ ಹಕ್ಕು, ಮಾಹಿತಿ ಹಕ್ಕು ಮಸೂದೆಗಳನ್ನು ಜಾರಿಗೊಳಿಸುವ ಮೂಲಕ ಹಾಗೂ ಮಹಾತ್ಮ ಗಾಂಧೀ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ, ಆಧಾರ್ ಕಾರ್ಡ್ ಸೇರಿದಂತೆ ಸಾಕಷ್ಟು ಬಡ ವರ್ಗದ ಅನುಕೂಲವಾಗುವ ಯೋಜನೆ ಮಾಡಿದ್ದಾರೆ ಎಂದು ತಿಳಿಸಿದರು. ಪಪಂ ನಾಮ ನಿರ್ದೇಶನ ಸದಸ್ಯರಾದ ಬಳೇಪೇಟೆ ಲಿಂಗರಾಜುಮೂರ್ತಿ ಮಾತನಾಡಿ, ದೇಶದಲ್ಲಿ ಆರ್ಥಿಕ ಪರಿಸ್ಥಿತಿ ಸುಧಾರಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿ ದೇಶದ ಸಾಮಾಜಿಕ ಅಭಿವೃದ್ಧಿ, ಆರ್ಥಿಕ, ಶೈಕ್ಷಣಿಕವಾಗಿ ಕೆಲಸಗಳನ್ನು ಮಾಡಿ ಹಲವು ಒಳ್ಳೇ ತಿರ್ಮಾನಗಳನ್ನು ಮಾಡುವ ಮೂಲಕ ದೇಶದ ಅಭಿವೃದ್ಧಿಗೆ ಶ್ರಮಿಸಿದ್ದರು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಪಪಂ ಸದಸ್ಯರಾದ ಮಹೇಶ್, ರವಿ, ಪಪಂ ನಾಮ ನಿರ್ದೇಶನ ಸದಸ್ಯರಾದ ಬಳೇಪೇಟೆ ಲಿಂಗರಾಜುಮೂರ್ತಿ, ಮುನವ್ವರ್ ಬೇಗ್, ಕಾಂಗ್ರೆಸ್ ಪಕ್ಷದ ಮುಖಂಡರಾದ ಗುಂಬಳ್ಳಿ ರಾಜಣ್ಣ, ಮಲ್ಲು, ಪ್ರಕಾಶ್, ರಾಚಶೆಟ್ಟಿ, ಉಪ್ಪಿನಮೋಳೆ ಮಹೇಶ್ ಇತರರು ಹಾಜರಿದ್ದರು.