ಅಧಿಕಾರಿಗಳ ವೈಫಲ್ಯ ಖಂಡಿಸಿ ರಸ್ತೆ ತಡೆದು ಧರಣಿ

KannadaprabhaNewsNetwork | Published : Jul 6, 2024 12:48 AM

ಸಾರಾಂಶ

ಕೊಳ್ಳೇಗಾಲ ತಾಲೂಕಿನ ದೊಡ್ಡಿಂದುವಾಡಿ ಗ್ರಾಮದ ಮುಖ್ಯರಸ್ತೆಯಲ್ಲಿ ಸಾರಿಗೆ ಅಧಿಕಾರಿಗಳ ತಾರತಮ್ಯ ಧೋರಣೆ ಖಂಡಿಸಿ ರೈತರು ರಸ್ತೆ ತಡೆ ಚಳವಳಿ ನಡೆಸಿದರು. ಈ ವೇಳೆ ಮ್ಯಾನೇಜರ್ ಶಂಕರ್ ಆಗಮಿಸಿ ರೈತರಿಂದ ಅಹವಾಲು ಆಲಿಸಿದರು

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ದೊಡ್ಡಿಂದುವಾಡಿ ಗ್ರಾಮದ ಒಳಗಡೆ ಸರ್ಕಾರಿ ಬಸ್ ತೆರಳುತ್ತಿಲ್ಲ, ಈ ಸಂಬಂಧ ಕ್ರಮ ಕೈಗೊಳ್ಳಬೇಕಾದ ಅಧಿಕಾರಿಗಳು ಮೆದು ಧೋರಣೆ ತಾಳಿದ್ದಾರೆಂದು ಆರೋಪಿಸಿದ ರೈತ ಸಂಘದ ಕಾರ್ಯಕರ್ತರು ಶುಕ್ರವಾರ ಬೆಳಗ್ಗೆ ಕೆಲಕಾಲ ದೊಡ್ಡಿಂದುವಾಡಿ ವೃತ್ತದ ಬಳಿ ರಸ್ತೆ ತಡೆ ಚಳವಳಿ ನಡೆಸಿದರು.

ತಾಲೂಕಿನ ದೊಡ್ಡಿಂದುವಾಡಿ ಗ್ರಾಮದೊಳಗೆ ಸರ್ಕಾರಿ ಸಾರಿಗೆ ಬಸ್ ತೆರಳುತ್ತಿಲ್ಲ, ಮುಖ್ಯರಸ್ತೆಯಲ್ಲೆ ಕೆಲ ಬಸ್ ನಿಲ್ಲಿಸಿ ವಾಪಸಾಗುತ್ತಿವೆ. ಹಾಗೂ ಹೆಚ್ಚುವರಿ ಬಸ್ ಬಿಡುವಲ್ಲಿ ಡಿಪೋ ಅಧಿಕಾರಿಗಳು ವೈಫಲ್ಯ ಸಾಧಿಸಿದ್ದಾರೆ. ಹಲವು ಬಾರಿ ಗಮನಕ್ಕೆ ತಂದರೂ ಈ ಬಗ್ಗೆ ಸ್ಪಂದಿಸಿಲ್ಲ ಎಂದು ಆರೋಪಿಸಿ ರೈತರು ಪ್ರತಿಭಟಿಸಿದರು. ಈ ವೇಳೆ ಸಾರಿಗೆ ಅಧಿಕಾರಿಗಳ ವೈಫಲ್ಯ ಖಂಡಿಸಿ ಧಿಕ್ಕಾರದ ಘೋಷಣೆಗಳನ್ನು ಕೂಗಿದರು.

ಮಹದೇಶ್ವರ ಬೆಟ್ಟದಿಂದ ಬರುವ ಪ್ರಯಾಣಿಕರಿಗೂ ಸಹ ಬಸ್ಸಿನಲ್ಲಿ ಹತ್ತಿಸಲ್ಲ, ಹತ್ತಿಸಿಕೊಂಡರೂ ಗ್ರಾಮದಲ್ಲಿ ಇಳಿಸದೆ ಕೆಲ ನಿರ್ವಾಹಕರು ಉದ್ಧಟ ವರ್ತನೆ ತೋರುತ್ತಾರೆ. ಈ ಬಗ್ಗೆ ಅಧಿಕಾರಿಗಳು ಗಮನಹರಿಸಬೇಕು ಎಂದು ರೈತರು ಆಗ್ರಹಿಸಿದರು.

ಈ ವೇಳೆ ಸ್ಥಳಕ್ಕೆ ಡಿಪೋ ವ್ಯವಸ್ಥಾಪಕ ಶಂಕರ್ ಆಗಮಿಸಿ ರೈತರಿಂದ ಅಹವಾಲು ಸ್ವೀಕರಿಸಿ ಇಂದಿನಿಂದಲೇ ಗ್ರಾಮದೊಳಗೆ ಬಸ್ ಪ್ರವೇಶಿಸಿ ನಿಲುಗಡೆಗೆ ಅವಕಾಶ ಕಲ್ಪಿಸಲಾಗುವುದು. ಹೆಚ್ಚುವರಿ ಬಸ್ ಖರೀದಿ ಪ್ರಕ್ರಿಯೆ ಸರ್ಕಾರದ ಹಂತದಲ್ಲಿದ್ದು ಖರೀದಿಯಾದ ಕೂಡಲೆ ಹೆಚ್ಚು ಬಸ್‌ಗೆ ಈಗಾಗಲೇ ಬೇಡಿಕೆ ಸಲ್ಲಿಸಲಾಗಿದ್ದು ರೈತರ ಸಮಸ್ಯೆ ಈಡೇರಿಸಲು ಹಂತ ಹಂತವಾಗಿ ಕ್ರಮ ವಹಿಸಲಾಗುವುದು. ಪ್ರತಿಭಟನೆ ಕೈಬಿಡಿ ಎಂದು ರೈತರಲ್ಲಿ ಮನವಿ ಮಾಡಿದರು. ಇದಕ್ಕೆ ಧ್ವನಿಗೂಡಿಸಿದ ರೈತ ಸಂಘದ ಜಿಲ್ಲಾ ಹಾಗೂ ತಾಲೂಕು ಘಟಕದ ಪದಾಧಿಕಾರಿಗಳು ಒಂದು ವಾರದೊಳಗೆ ನಮ್ಮ ಬೇಡಿಕೆ ಈಡೇರಿಸದಿದ್ದರೆ ಡಿಪೋಗೆ ಬೀಗ ಜಡಿದು ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆಂದು ಎಚ್ಚರಿಸಿ ಪ್ರತಿಭಟನೆ ಹಿಂಪಡೆದರು.

ರಸ್ತೆ ತಡೆ ಹಿನ್ನೆಲೆಯಲ್ಲಿ ಕೆಲೆ ಕಾಲ ಬಸ್ ಸಂಚಾರದಲ್ಲಿ ವ್ಯತ್ಯಯ ಉಂಟಾಗಿ ಪ್ರಯಾಣಿಕರು, ವಾಹನ ಸವಾರರು, ತುರ್ತು ತೆರಳಬೇಕಾದವರು ಕೆಲಕಾಲ ಪರದಾಡುವಂತಾಯಿತು. ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾ ಶಾಖೆಯ ಶ್ರೀಕಂಠಸ್ವಾಮಿ, ಗೌಡೇಗೌಡ, ತಾಲೂಕು ಅಧ್ಯಕ್ಷ ಶಿವಮಲ್ಲು, ರವಿನಾಯ್ಡು, ಮಧುವನಹಳ್ಳಿ ಬಸವರಾಜು, ಶಿವಮಲ್ಲು, ಪೆರಿಯನಾಯಗಂ, ವಸಂತ, ರವಿ. ಪ್ರಕಾಶ್, ಚಾರ್ಲಿ, ಅಂಥೋಣಿಸ್ವಾಮಿ, ಬಸವರಾಜು, ಜಾನ್ ಕೆನಡಿ, ಕುಮಾರ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.

Share this article